ಬೆಂಗಳೂರು, ನ.21- ಕಾಡುಗೋಡಿಯಲ್ಲಿ ವಿದ್ಯುತ್ ಅವಘಡದಿಂದ ತಾಯಿ ಮಗು ಸಾವನ್ನಪ್ಪಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿರುವ ರಾಜ್ಯ ಸರ್ಕಾರ, ನಾಲ್ಕು ಮಾದರಿಯ ತನಿಖೆ ನಡೆಸುತ್ತಿದೆ. ವರದಿಯ ನಂತರ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಘಟನೆಗೆ ಸಂಬಂಧಿಸಿದಂತೆ ಬೆಸ್ಕಾಂ, ಪೊಲೀಸ್, ಇಂಧನ ಇಲಾಖೆ ಹಾಗೂ ಸ್ವತಂತ್ರ ಮಾದರಿಯ ತನಿಖೆಗಳು ನಡೆಯುತ್ತಿವೆ ಎಂದು ಹೇಳಿದರು. ಇಂತಹ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳಲು ನಾವು ಯಾವುದೇ ಅಡ್ಡಿ ಪಡಿಸಿಲ್ಲ. ತನಿಖಾ ವರದಿ ನೀಡಲು ಸಮಿತಿಗಳಿಗೆ ಕಾಲಮಿತಿ ನಿಗದಿ ಪಡಿಸಲಾಗಿದೆ ಎಂದರು.
ವಿದ್ಯುತ್ ತಂತಿ ಕಡಿತಗೊಂಡಿರುವುದನ್ನು ನೋಡಿಕೊಳ್ಳದೆ ಇರುವುದು ಲೋಪವಾಗಿದೆ. ಇದನ್ನು ತಾಂತ್ರಿಕ ಸಮಸ್ಯೆ ಎಂದು ಪರಿಗಣಿಸಲಾಗಿದೆ. ಒಂದು ಕಡೆ ವಿದ್ಯುತ್ ತಂತಿಗಳ ಸಮಸ್ಯೆಯಾದರೆ ಮತ್ತೊಂದು ಆಫ್ಟಿಕಲ್ ಫೈಬರ್ ಕೇಬಲ್‍ಗಳದು ಸಮಸ್ಯೆ ಇದೆ. ಏಕಾಏಕಿ ಎಲ್ಲವನ್ನೂ ಒಮ್ಮಲೆ ಕಿತ್ತು ಹಾಕಲು ಆಗಲ್ಲ. ಅದಕ್ಕಾಗಿ ಆಪ್ಟಿಕಲ್ ಕೇಬಲ್‍ಗಳನ್ನು ಭೂಮಿ ಒಳಗಿನ ಮಾರ್ಗಗಳಲ್ಲಿ ಅಳವಡಿಸಲು ಹದಿನೈದು ದಿನಗಳ ಕಾಲಾವಕಾಶ ನೀಡಲಾಗುತ್ತಿದೆ.
ನಿಗದಿತ ಕಾಲಾವಧಿಯಲ್ಲಿ ನೆಲ ಮಾರ್ಗದಲ್ಲಿ ಅಳವಡಿಸದಿದ್ದರೆ ನಂತರ ಕ್ರಮ ಕೈಗೊಳ್ಳುತ್ತೇವೆ. ವಿದ್ಯುತ್ ತಂತಿ ಕಂಬಿಯ ಮೇಲಿರುವ ಎಲ್ಲಾ ಆಫ್ಟಿಕಲ್ ಕೇಬಲ್‍ಗಳನ್ನು ಕಡಿತ ಮಾಡಲಾಗುವುದು ಎಂದರು. ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ, ವಾಡಿಕೆಗಿಂತ ಮಳೆ ಕಡಿಮೆ ಇದೆ. ಕಳೆದ ಬಾರಿಗಿಂತ ಡಬಲ್ 16.900 ಮೆ.ವ್ಯಾ ಬೇಡಿಕೆ ಇದೆ, ಗಣಿಗಾರಿಕೆ ಪ್ರದೇಶಗಳಲ್ಲಿ ಮಳೆಯಾದ ಹಿನ್ನಲೆ ಕಲ್ಲಿದ್ದಲು ಒದ್ದೆಯಾಗಿದೆ. ಇದರಿಂದ ಥರ್ಮಲ್ ಪ್ಲ್ಯಾಂಟ್ ಗೆ ಕಲ್ಲಿದ್ದಲು ಸಮಸ್ಯೆ ಎದುರಾಗಿದೆ. ಸೋಲಾರ್ ವಿದ್ಯುತ್ ಉತ್ಪತ್ತಿಯೂ ಕಡಿಮೆಯಾಗಿದೆ. ಕರ್ನಾಟಕ ಕತ್ತಲೆಗೆ ಹೋಗಿದೆ ಎಂಬ ಆರೋಪ ಸರಿಯಲ್ಲ ಎಂದರು.
ಹೆಚ್‌ಡಿಕೆ ಆರೋಪ ಸಾಬೀತು ಪಡಿಸಿದರೆ ನಾನು ರಾಜಕೀಯ ನಿವೃತ್ತನಾಗುತ್ತೇನೆ: ಡಿಸಿಎಂ
ರೈತರಿಗೆ 5 ಗಂಟೆ ವಿದ್ಯುತ್ ಕೊಡ್ತೇವೆ ಎಂದಿದ್ದೆವು, ಕಬ್ಬು, ಬತ್ತಕ್ಕೆ ಹೆಚ್ಚು ನೀರು ಕೊಡಲು ಕ್ರಮ ಕೈಗೊಂಡಿದ್ದೇವೆ, ದಾಖಲೆ ಮಟ್ಟದಲ್ಲಿ ಥರ್ಮಲ್ ವಿದ್ಯುತ್ ಉತ್ಪಾದನೆ ಆಗಿದೆ, ಬಳ್ಳಾರಿ,ರಾಯಚೂರಿನಲ್ಲಿ ಉತ್ಪಾದನೆಯಾಗಿದೆ. ಕಲ್ಲಿದ್ದಲು ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಕೊ ಜನರೇಷನ್ ಮೂಲಕ ವಿದ್ಯುತ್ ಉತ್ಪಾದನೆ ಹೆಚ್ಚಾಗುತ್ತಿದೆ. ವಿದ್ಯುತ್ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.