ಬೆಂಗಳೂರು,ಮಾ.20– ಬಿರುಬೇಸಿಗೆಯ ನಡುವೆ ವಿದ್ಯುತ್ ದರ ಏರಿಕೆಯ ಪ್ರಹಾರವಾಗಿದ್ದು, ಪ್ರತಿ ಯೂನಿಟ್‌ಗೆ ಸರಾಸರಿ 36 ಪೈಸೆಯನ್ನು ಹೆಚ್ಚಳ ಮಾಡಿ ಏ.1ರಿಂದಲೇ ಅನ್ವಯವಾಗುವಂತೆ ಕೆಇಆರ್‌ಸಿ ಆದೇಶಿಸಿದೆ. ಗೃಹಜ್ಯೋತಿ ಯೋಜನೆಯಡಿ ಗರಿಷ್ಠ 200 ಯೂನಿಟ್‌ಗಳವರೆಗೂ ವಿದ್ಯುತ್ ಶುಲ್ಕವನ್ನು ಸರ್ಕಾರವೇ ಪಾವತಿಸುತ್ತಿದೆ. ಗೃಹಜ್ಯೋತಿ ಯೋಜನೆಯ ಸೌಲಭ್ಯದಿಂದ ಹೊರಗುಳಿದವರು ಮತ್ತು ವಾಣಿಜ್ಯ ಬಳಕೆಯ ಗ್ರಾಹಕರಿಗೆ ವಿದ್ಯುತ್‌ನ ಶಾಕ್ ಟ್ರೀಟ್‌ಮೆಂಟ್ ಜೋರಾಗಿದೆ.
ಪಂಚಖಾತ್ರಿ ಯೋಜನೆಗಳ ಹೆಸರಿನಲ್ಲಿ ರಾಜ್ಯ ಸರ್ಕಾರ ಒಂದೊಂದಾಗಿ ಬೆಲೆ ಏರಿಕೆ ಮಾಡುತ್ತಾ ಬಂದಿದೆ. ಮದ್ಯದ ದರ, ಸ್ಟಾಂಪ್ ಡ್ಯೂಟಿ, ನೋಂದಣಿ ಶುಲ್ಕ, ಮಾರ್ಗಸೂಚಿ ದರ, ಹಾಲಿನ ಬೆಲೆ, ಸಾರಿಗೆ ಬಸ್‌ಗಳ ಪ್ರಯಾಣ ದರ, ಮೆಟ್ರೋ ಪ್ರಯಾಣ ದರ ಸೇರಿದಂತೆ ಹಲವಾರು ದರ ಏರಿಕೆಗಳು ಜನಸಾಮಾನ್ಯರ ಜೇಬನ್ನು ಖಾಲಿ ಮಾಡುತ್ತಿವೆ. ಈಗ ವಿದ್ಯುತ್ ದರ ಏರಿಕೆ ಭಾರೀ ಪ್ರಹಾರವನ್ನೇ ನಡೆಸಿದೆ. ವಿದ್ಯುತ್ ದರ ಏರಿಕೆಯಿಂದ ಮುಂದಿನ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರ 8,519 ಕೋಟಿ ರೂ.ಗಳನ್ನು ವಸೂಲಿ ಮಾಡುವ ಗುರಿ ಹೊಂದಿದೆ.
ವಿದ್ಯುತ್ ಪ್ರಸರಣ ನಿಗಮ ಮತ್ತು ವಿದ್ಯುತ್ ಸರಬರಾಜು ನಿಗಮಗಳ ಪಿಂಚಣಿ ಹಾಗೂ ಗ್ರಾಚ್ಯುಟಿ ಗ್ರಾಹಕರಿಂದಲೇ ಸರ್‌ಚಾರ್ಜ್ ಮೂಲಕ ವಸೂಲಿ ಮಾಡಲು ಕೆಇಆರ್‌ಸಿ ಅನುಮತಿಸಿದೆ. ಬೆಸ್ಕಾಂಗಳು ಸಲ್ಲಿಸಿದ್ದ ಪ್ರಸ್ತಾವನೆ ಅನುಸಾರ 2025-26ನೇ ಸಾಲಿಗೆ 36 ಪೈಸೆ, 2026-27ನೇ ಸಾಲಿಗೆ 35 ಪೈಸೆ, 2027-28ನೇ ಸಾಲಿಗೆ 34 ಪೈಸೆಯನ್ನು ಹೆಚ್ಚುವರಿಯಾಗಿ ವಿಧಿಸಲು ಕೆಇಆರ್‌ಸಿ ಅನುಮತಿಸಿದೆ.
2023ರ ಜನವರಿಯಿಂದ 2025ರ ಆರ್ಥಿಕ ವರ್ಷದ ಕೊನೆಯವರೆಗೂ 4,659.34 ಕೋಟಿ ರೂ.ಗಳ ಸಂಪನೂಲ ಸಂಗ್ರಹದ ಪ್ರಸ್ತಾವನೆಗೆ ಕೆಪಿಟಿಸಿಎಲ್ ಅನುಮೋದನೆ ನೀಡಿದೆ.
2023ನೇ ಸಾಲಿನಲ್ಲಿ ಪಿಂಚಣಿ ಮತ್ತು ಕುಟುಂಬ ಪಿಂಚಣಿಗಾಗಿ 350 ಕೋಟಿ, ಕಮ್ಯೂಟೇಷನ್ ಪಿಂಚಣಿ 9.51 ಕೋಟಿ, ಸಾವು ಅಥವಾ ನಿವೃತ್ತಿಯ ಗ್ರಾಚ್ಯುಟಿಗಾಗಿ 7.93 ಕೋಟಿ ಸೇರಿ 372 ಕೋಟಿಯನ್ನು ಭರಿಸಬೇಕಿದೆ.
2023-24ನೇ ಸಾಲಿನಲ್ಲಿ ಇದೇ ರೀತಿ ಒಟ್ಟು 2,270 ಕೋಟಿ, 2024-25ನೇ ಸಾಲಿಗೆ 2,015 ಕೋಟಿ, 2025-26ನೇ ಸಾಲಿಗೆ 2,036 ಕೋಟಿ, 2026-27ನೇ ಸಾಲಿಗೆ 2,069 ಕೋಟಿ, 2027-28ನೇ ಸಾಲಿಗೆ 2,084 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. 2025-26ನೇ ಸಾಲಿಗೆ ರಾಜ್ಯ ಸರ್ಕಾರದಿಂದ 2,812.83 ಕೋಟಿ ರೂ.ಗಳ ಸಹಾಯಧನದೊಂದಿಗೆ ಎಸ್ಕಾಂಗಳು 72,268 ಮಿಲಿಯನ್ ಯೂನಿಟ್ ಅನ್ನು ಮಾರಾಟ ಮಾಡುವ ಗುರಿ ಹೊಂದಿವೆ.
2026-27ನೇ ಸಾಲಿಗೆ 81,095 ಮಿಲಿಯನ್ ಯೂನಿಟ್, 2027-28ನೇ ಸಾಲಿಗೆ 85,170 ಯೂನಿಟ್‌ಗಳನ್ನು ಮಾರಾಟ ಮಾಡುವ ಗುರಿ ಹೊಂದಿವೆ. ಎಸ್ಕಾಂಗಳ ಪ್ರಸ್ತಾವನೆ ಆಧರಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್‌ಸಿ)ದ ಅಧ್ಯಕ್ಷ ಪಿ.ರವಿಕುಮಾರ್, ಸದಸ್ಯರಾದ ಎಚ್.ಕೆ.ಜಗದೀಶ್, ಜಾವೇದ್ ಅಖ್ತರ್ ಅವರುಗಳು ದರ ಏರಿಕೆಯ ಪ್ರಸ್ತಾವನೆಗೆ ಅಂಕಿತ ಹಾಕಿದ್ದಾರೆ. ಏಪ್ರಿಲ್ 1ರಿಂದ ಈ ಆದೇಶ ಭಾರೀ ಪರಿಣಾಮ ಬೀರಲಿದ್ದು, ಜನಸಾಮಾನ್ಯರು ತತ್ತರಿಸುವ ಸಾಧ್ಯತೆ ಇದೆ.