ಬೆಂಗಳೂರು,ಜ.5- ರಾಜ್ಯದ ಜನರಿಗೆ ಸರ್ಕಾರದಿಂದ ವಿದ್ಯುತ್ ದರ ಏರಿಕೆಯ ಶಾಕ್ ಎದುರಾಗುವ ಸಾಧ್ಯತೆಗಳಿದ್ದು, ದರ ಪರಿಷ್ಕರಣೆಗೆ ವಿದ್ಯಚ್ಛಕ್ತಿ ಸರಬರಾಜು ಕಂಪನಿಗಳು ಮುಂದಾಗಿವೆ. ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ( ಕೆಇಆರ್‍ಸಿ) ದರ ಪರಿಷ್ಕರಣೆ ಮಾಡುತ್ತಿತ್ತು. ಆದರೆ ಈ ಬಾರಿ ಲೋಕಸಭಾ ಚುನಾವಣೆ ಮಾರ್ಚ್-ಏಪ್ರಿಲ್ ಅಥವಾ ಮೇ ತಿಂಗಳ ಅವಧಿಯಲ್ಲಿ ನಡೆಯಲಿದೆ ಒಂದು ವೇಳೆ ದಿನಾಂಕ ಘೋಷಣೆಯಾದರೆ ನೀತಿ ಸಂಹಿತಿ ಜಾರಿಯಾಗುವ ಮುನ್ನವೇ ಹೊಸ ದರ ಪರಿಷ್ಕರಣೆಯಾಗುವ ಸಂಭವವಿದೆ.
ಬೆಸ್ಕಾಂ, ಮೆಸ್ಕಾಂ, ಚೆಸ್ಕಾಂ ಸೇರಿದಂತೆ ಇತರ ವಿದ್ಯುತ್ ಸರಬರಾಜು ಕಂಪನಿಗಳಿಂದ ವಿದ್ಯುತ್ ದರ ಪರಿಷ್ಕರಣೆಗೆ ಒತ್ತಾಯಿಸಲಾಗಿದೆ. ಕಂಪನಿಗಳ ನಿರ್ವಹಣೆ ವೆಚ್ಚ ಹೆಚ್ಚಳದ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಕೋರಲಾಗಿದೆ ಎಂದು ಅಧಿಕಾರಿಗಳೂ ತಿಳಿಸಿದ್ದಾರೆ. ಎಸ್ಕಾಂಗಳು ಹಾಗೂ ಸಾರ್ವಜನಿಕರಿಂದ ಕೆಇಆರ್‍ಸಿ ಅಭಿಪ್ರಾಯವನ್ನು ಸಂಗ್ರಹಿಸಲು ಮುಂದಾಗಿದೆ. ಬಳಿಕ ಎಲ್ಲಾ ಸಾಧಕ ಬಾಧಕಗಳನ್ನು ಪರಿಗಣಿಸಿ ಶೀಘ್ರದಲ್ಲೇ ಹೊಸ ವಿದ್ಯುತ್ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಿದೆ ಎಂದು ತಿಳಿದು ಬಂದಿದೆ.
ಈ ವರ್ಷ ಪ್ರತಿ ಯೂನಿಟ್‍ಗೆ 35ರಿಂದ 45 ಪೈಸೆ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ತಿಂಗಳ ಅಂತ್ಯದಲ್ಲಿ ಹೊಸ ವಿದ್ಯುತ್ ದರ ಪರಿಷ್ಕರಣೆ ಪಟ್ಟಿ ಬಿಡುಗಡೆಯಾಗಬಹುದು ಎಂದು ಮೂಲಗಳು ತಿಳಿಸಿವೆ. 2024ನೇ ಸಾಲಿಗೆ ಅನ್ವಯವಾಗುವಂತೆ ವಿದ್ಯುತ್ ದರ ಪರಿಷ್ಕರಣೆ ಕಾರ್ಯ ಅಂತಿಮ ಹಂತ ತಲುಪಿದ್ದು, ಲೋಕಸಭೆ ಚುನಾವಣೆಗೂ ಮುನ್ನವೇ ಅಧಿಕೃತವಾಗಿ ಪ್ರಕಟಿಸಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‍ಸಿ) ನಿರ್ಧರಿಸಿದೆ.
ಉತ್ತರ ಪ್ರದೇಶ : ವಾಂಟೆಡ್ ಕ್ರಿಮಿನಲ್ ವಿನೋದ್ ಕುಮಾರ್ ಉಪಾಧ್ಯಾಯ ಎನ್‌ಕೌಂಟರ್
ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ, ಚಾಮುಂಡೇಶ್ವರಿ ಸಹಿತ ಐದು ವಿದ್ಯುತ್ ಸರಬರಾಜು ಕಂಪನಿಗಳ ಪ್ರಸ್ತಾವನೆಗಳ ಬಗ್ಗೆ ಕೆಇಆರ್ ಸಿ ಈಗಾಗಲೇ ಪರಿಶೀಲನೆ ನಡೆಸಿದೆ. ಇದಕ್ಕೆ ಆಕ್ಷೇಪಣೆಗಳನ್ನು ಆಲಿಸಲು ಮುಂದಾಗಿದೆ. ಇನ್ನಷ್ಟೇ ಆದೇಶ ಹೊರಬೀಳ ಬೇಕಿದೆ. ಎಸ್ಕಾಂಗಳಲ್ಲದೆ ಕೆಪಿಟಿಸಿಲ್, ಮಂಗಳೂರು ಎಸ್‍ಇಝೆಡ್ ಹಾಗೂ ಸಹಕಾರಿ/ಖಾಸಗಿ ಕ್ಷೇತ್ರದ ವಿದ್ಯುತ್ ಕಂಪನಿಗಳ ದರ ಪರಿಷ್ಕರಣೆ ಕೂಡ ಆಗಲಿದೆ.
40-50 ಪೈಸೆ ಏರಿಕೆ ಸಾಧ್ಯತೆ: ಆಯೋಗವು ಪ್ರತಿ ಯೂನಿಟ್‍ಗೆ 40-50 ಪೈಸೆಯಷ್ಟು ಏರಿಕೆ ಮಾಡುವ ನಿರೀಕ್ಷೆ ಇದೆ. ಆದರೆ, ಎಸ್ಕಾಂಗಳು 1 ರೂ.ನಿಂದ 1.65 ಪೈಸೆ ಏರಿಕೆ ಮಾಡಿ ಸಂಸ್ಥೆಗಳ ನಷ್ಟ ಭರಿಸಿಕೊಳ್ಳಲು ಅವಕಾಶ ಮಾಡಿಕೊಡುವಂತೆ ವಿಚಾರಣೆ ಸಂದರ್ಭದಲ್ಲಿ ಮನವಿ ಮಾಡಿಕೊಂಡಿವೆ. ಪ್ರಸ್ತಾವನೆಯಂತೆ ಉತ್ಪಾದನೆಯ ಖರ್ಚು-ವೆಚ್ಚ ಮತ್ತು ನಿರ್ವಹಣೆಯ ನಷ್ಟ ಸರಿದೂಗಿಸುವ ನಿಟ್ಟಿನಲ್ಲಿ ದರ ಏರಿಕೆಗೆ ಕೆಇಆರ್‍ಸಿ ಮುಂದಾಗಿದೆ. ಸದ್ಯ ಪ್ರಸ್ತಾವನೆ ಪರಿಶೀಲಿಸಲಿರುವ ಆಯೋಗ, ಗ್ರಾಹಕ ಮತ್ತು ವಿದ್ಯುತ್ ಪೂರೈಕೆ ಕಂಪನಿಗಳು ಇಬ್ಬರಿಗೂ ಹೊರೆಯಾಗದಂತೆ ಏಪ್ರಿಲ್ ಪರಿಷ್ಕೃತ ದರ ಜಾರಿ ಮಾಡುವ ಸಾಧ್ಯತೆಯಿದೆ.
ಎಸ್ಕಾಂಗಳು ಸಲ್ಲಿಸಿರುವ ಬೇಡಿಕೆಗಳ ಮುಂದಿಟ್ಟು, ಕೆಇಆರ್‍ಸಿ ಅಧ್ಯಕ್ಷ ರವಿಕುಮಾರ್ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಅದಾಲತ್‍ಗಳನ್ನು ಎಲ್ಲಾ ಎಸ್ಕಾಂಗಳಲ್ಲಿಯೂ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಕೆಇಆರ್‍ಸಿ ಮೂಲಗಳು ತಿಳಿಸಿವೆ. ವಿದ್ಯುತ್ ದರ ಪರಿಷ್ಕರಣೆಗೆ ಲೋಕಸಭೆ ಚುನಾವಣೆ ಅಡ್ಡಿಯಾಗಬಹುದು ಎಂದು ಹೇಳಲಾಗುತ್ತಿದೆ.
ಮತ್ತೊಮ್ಮೆ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಅದಾನಿ
ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯುವ ಅಂದಾಜಿದೆ. ಒಂದು ವೇಳೆ ಚುನಾವಣೆಗೆ ದಿನಾಂಕ ನಿಗ ಮಾಡಿ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದರೆ, ವಿದ್ಯುತ್ ದರ ಪರಿಷ್ಕರಣೆ ಮಾಡಿದ್ದನ್ನು ಜಾರಿಗೆ ತರಲು ಸಮಸ್ಯೆ ಎದುರಾಗಬಹುದು. ಹೀಗಾಗಿ ಎಲ್ಲಾ ತಾಂತ್ರಿಕ ಅಂಶಗಳನ್ನು ಪರಿಗಣಿಸಿ ದರ ಪರಿಷ್ಕರಣೆಗೆ ಕೆಇಆರ್‍ಸಿ ಮುಂದಾಗಿದೆ. ಅಂತಿಮವಾಗಿ ರಾಜ್ಯ ಸರ್ಕಾರವೇ ತೀರ್ಮಾನಿಸುವುದರಿಂದ ಒಪ್ಪಿಗೆ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕು.