ಹಾಸನ, ಮಾ.20- ದಿನದಿಂದ ದಿನಕ್ಕೆ ರಂಗೇರುತ್ತಿರುವ ರಣ ಬಿಸಿಲು, ಕಾಡಿನಲ್ಲಿ ಸಿಗದ ಆಹಾರ-ನೀರು. ಇದರಿಂದ ಕಂಗೆಟ್ಟ ಕಾಡು ಪ್ರಾಣಿಗಳು ನಾಡಿನತ್ತ ಬರುತ್ತಿದ್ದು, ಕಳೆದ ಕೆಲವು ದಿನಗಳಿಂದ ಬೇಲೂರಿನ ಸುತ್ತಮತ್ತ ಬೀಡುಬಿಟ್ಟಿರುವ ಕಾಡಾನೆ ಭೀಮನಿಗೆ ಕುಡಿಯಲು ನೀರು ಸಿಗದೆ ಮನೆಯೊಂದರ ಬಳಿ ಪರದಾಡುತ್ತಿದ್ದ ದೃಶ್ಯ ಕಂಡು ಬಂದಿದೆ.
ಬೇಲೂರು ತಾಲೂಕಿನ ಕ್ಯಾನಳ್ಳಿ ಗ್ರಾಮದ ಮನೆಯೊಂದರ ಮುಂದೆ ದಿಢೀರನೆ ಪ್ರತ್ಯಕ್ಷವಾದ ಭೀಮ ಬಾಯಾರಿಕೆಯಿಂದ ಡ್ರಮ್‌ನಲ್ಲಿದ್ದ ನೀರನ್ನು ಕುಡಿಯಲು ಪರದಾಡುತ್ತಿದ್ದ ದೃಶ್ಯ ಸೆರೆಯಾಗಿದ್ದು, ಸೊಂಡಲಿನಿಂದ ಡ್ರಮ್‌ನ ಮುಚ್ಚಳ ತೆಗೆಯಲು ಹರಸಾಹಸ ಪಟ್ಟಿದ್ದು, ಕೊನೆಗೂ ಕ್ಯಾಪ್ ತೆಗೆಯಲು ಸಾಧ್ಯವಾಗದಿದ್ದಾಗ ನೆಲಕ್ಕೆ ಉರಳಿಸಿಬಿಟ್ಟಿದೆ.
ಡ್ರಮ್ ಕೆಳಗೆ ಬೀಳುತ್ತಿದ್ದಂತೆ ಕ್ಯಾಪ್ ಓಪನ್ ಆಗಿದ್ದು, ನೀರನ್ನು ಹೊಟ್ಟೆ ತುಂಬಾ ಕುಡಿದು ನಿಧಾನವಾಗಿ ಹೆಜ್ಜೆ ಹಾಕಿದೆ. ಬರೀ ನೀರನ್ನು ಮಾತ್ರ ಕುಡಿದಿದ್ದು, ಯಾವುದೆ ತೊಂದರೆ ಮಾಡದೆ ತೆರಳಿದ್ದಾನೆ. ಇದೇ ಭಾಗದಲ್ಲಿ ಪುಂಡಾನೆ ವಿಕ್ರಾಂತ್ ಸೆರೆಗಾಗಿ ಕಾರ್ಯಾಚರಣೆ ನಡೆಯುತ್ತಿದ್ದು, ಭೀಮನ ಎಂಟ್ರಿಯಿಂದ ಕಾರ್ಯಾಚರಣೆಗೆ ತೊಂದರೆಯಾಗಿದೆ.