ಬೆಂಗಳೂರು, ಫೆ.20- ದೆಹಲಿಯ ತಮ್ಮ ಭೇಟಿ ಸಂಪೂರ್ಣ ಖಾಸಗಿ ಕಾರ್ಯಕ್ರಮವಾಗಿದ್ದು, ಯಾವುದೇ ರಾಜಕೀಯ ಅಜೆಂಡಾಗಳಿರಲಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಚ್ಚಿಡುವಂಥಾದ್ದು ಏನೂ ಇಲ್ಲ. ಜನಸಾಮಾನ್ಯರಿಗೆ ತಿಳಿಯುವಂತಹ ವಿಚಾರಗಳೇ ರಾಜಕೀಯ, ತಾವು ದೆಹಲಿಯ ಭೇಟಿ ವೇಳೆ ಯಾವುದಾದರೂ ವಿಚಾರಗಳನ್ನು ಚರ್ಚೆ ಮಾಡಿದ್ದರೆ ಅದನ್ನು ಹಂಚಿಕೊಳ್ಳಲು ನನಗೆ ಯಾವುದೇ ಮುಜುಗರ ಇಲ್ಲ. ಆದರೆ ಅಂತಹ ಯಾವ ವಿಚಾರಗಳೂ ಅದರಲ್ಲೂ ರಾಜಕೀಯವಾಗಿ ಹೈಕಮಾಂಡ್ ಜೊತೆ ಚರ್ಚೆ ಮಾಡಿಲ್ಲ ಎಂದು ಪುನರುಚ್ಚರಿಸಿದರು.
ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೊಸದಾದ ಕಚೇರಿ ನಿರ್ಮಾಣ ಮಾಡಲಾಗಿದೆ. ಅದನ್ನು ನೋಡುವುದು ನನ್ನ ಬಯಕೆಯಾಗಿತ್ತು. ಅದಕ್ಕಾಗಿ ದೆಹಲಿಗೆ ಹೋಗಿದ್ದೆ. ಹೊಸ ಕಚೇರಿಗೆ ಭೇಟಿ ನೀಡಿದ ವೇಳೆ ಯಾರಾರು ಪ್ರಧಾನ ಕಾರ್ಯದರ್ಶಿಗಳಿದ್ದಾರೆ, ಎಲ್ಲೆಲ್ಲಿ ಕಚೇರಿಗಳಿವೆ, ಹೊಸ ಕಟ್ಟಡ ಹೇಗಿದೆ ಎಂದೆಲ್ಲಾ ನೋಡಿದ್ದೇನೆ. ಯಾವುದೇ ರಾಜಕೀಯ ಅಜೆಂಡಾಗಳಿರಲಿಲ್ಲ. ಒಂದು ವೇಳೆ ಆ ರೀತಿ ವಿಚಾರಗಳಿದ್ದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕಿ ಸೋನಿಯಾಗಾಂಧಿ ಹಾಗೂ ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತಿದ್ದೆ ಎಂದರು.
ದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಲೀ, ಮುಖ್ಯಮಂತ್ರಿ ಹುದ್ದೆ ವಿಚಾರವಾಗಲೀ, ಶೋಷಿತ ಸಮುದಾಯಗಳ ಪ್ರತ್ಯೇಕ ಸಭೆಯ ಬಗ್ಗೆಯಾಗಲೀ ತಾವು ಚರ್ಚೆ ಮಾಡಿಲ್ಲ. ಕೆ.ಸಿ.ವೇಣುಗೋಪಾಲ್‌ರನ್ನು ಭೇಟಿ ಮಾಡಿದ್ದು ಸೌಜನ್ಯದ ಕಾರಣಕ್ಕೆ ಮಾತ್ರ. ಕೆಲವರು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನ ಮಾಡಿಕೊಂಡಿದ್ದಾರೆ. ಅವರಿಗೆಲ್ಲಾ ಧನ್ಯವಾದ ಎಂದರು.
ರಾಜಕೀಯವಾಗಿ ಮಾತನಾಡಿದ್ದೇ ಆಗಿದ್ದರೆ ನಾನು ಮುಕ್ತವಾಗಿ ಹೇಳಿಕೊಳ್ಳುತ್ತೇನೆ. ಕದ್ದುಮುಚ್ಚಿ ರಾಜಕೀಯ ಮಾಡುವುದಿಲ್ಲ ಎಂದು ಪುನರುಚ್ಚರಿಸಿದರು.