ಬೆಂಗಳೂರು,ನ.1-ಕ್ಷುಲ್ಲಕ ವಿಚಾರಕ್ಕೆ ಮ್ಯಾನೇಜರ್ ಹಾಗೂ ನೌಕರನ ನಡುವೆ ಜಗಳವಾಗಿ ಮ್ಯಾನೇಜರ್ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಗೋವಿಂದರಾಜ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.ಚಿತ್ರದುರ್ಗ ಮೂಲದ ಭೀಮೇಶ್‌ಬಾಬು (41) ಕೊಲೆಯಾದ ಮ್ಯಾನೇಜರ್.
ಮೂಲತಃ ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯ ಆರೋಪಿ ಸೋಮಲವಂಶಿ (24) ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.ಬೇರೆ ಬೇರೆ ಸ್ಥಳಗಳಲ್ಲಿ ಚಿತ್ರೀಕರಣಗೊಂಡ ಚಲನಚಿತ್ರಗಳ ವಿಡಿಯೋ ಮತ್ತು ಫೋಟೋಗಳನ್ನು ಸಂಗ್ರಹಿಸಿ ಎಡಿಟಿಂಗ್ ಮಾಡಿ ಹಾರ್ಡ್‌ಡಿಸ್ಕ್‌ನಲ್ಲಿ ಹಾಕಿ ಚಲನಚಿತ್ರ ನಿರ್ಮಾಪಕರು, ನಿರ್ದೇಶಕರಿಗೆ ನೀಡಲು ಸರಸ್ವತಿ ನಗರದಲ್ಲಿರುವ ಕಚೇರಿಯಲ್ಲಿ ಕೆಲಸ ಮಾಡಲಾಗುತ್ತದೆ.
ಈ ಕಚೇರಿಯಲ್ಲಿ ಸೋಮಲವಂಶಿ ಸೇರಿದಂತೆ ಐದಾರು ಮಂದಿ ಕೆಲಸ ಮಾಡುತ್ತಿದ್ದು, ಅವರೆಲ್ಲರೂ ನಾಯಂಡಹಳ್ಳಿಯಲ್ಲಿ ರೂಂ ಮಾಡಿಕೊಂಡು ವಾಸವಿದ್ದಾರೆ. ಭೀಮೇಶ್‌ಬಾಬು ಅವರು ಮ್ಯಾನೇಜರ್ ಆಗಿದ್ದರು. ಈ ಕಚೇರಿಗೆ ಹೊಂದಿಕೊಂಡಿರುವ ಮನೆಯಲ್ಲೇ ವಾಸಿಸುತ್ತಿದ್ದರು.
ನಿನ್ನೆ ರಾತ್ರಿ ನೌಕರರು ಕೆಲಸ ಮುಗಿಸಿಕೊಂಡು ಮನೆಗೆ ಹೋಗಿದ್ದಾರೆ. ಎಡಿಟಿಂಗ್ ಕೆಲಸವಿದ್ದ ಕಾರಣ ಕಚೇರಿಯಲ್ಲಿ ಸೋಮಲವಂಶಿ ಮತ್ತು ಭೀಮೇಶ್‌ಬಾಬು ಇಬ್ಬರೇ ಇದ್ದರು. ಬೆಳಗಿನ 1.30ರ ಸುಮಾರಿಗೆ ಸೋಮಲವಂಶಿ ಲೈಟ್ ಆನ್ ಅಂಡ್ ಆಫ್ ಮಾಡುತ್ತಲೇ ಇದ್ದನು.
ಇದರಿಂದ ಕೋಪಗೊಂಡ ಭೀಮೇಶ್‌ಬಾಬು ಅವರು ಏಕೆ ಹೀಗೆ ಮಾಡುತ್ತಿದ್ದಿಯಾ ಎಂದು ಪ್ರಶ್ನಿಸಿದಾಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ.
ನಂತರ ಮ್ಯಾನೇಜರ್ ಕಚೇರಿಗೆ ಹೊಂದಿಕೊಂಡಿರುವ ತಮ ಮನೆಗೆ ಹೋಗಿದ್ದಾರೆ. ಇಷ್ಟಕ್ಕೆ ಸುಮನಾಗದ ಸೋಮಲವಂಶಿ ಅವರ ಹಿಂದೆಯೇ ಹೋಗಿ ಮನೆಯಲ್ಲಿದ್ದ ಖಾರದಿಪುಡಿ ಎರಚಿ ಡಂಬಲ್‌್ಸನಿಂದ ತಲೆಗೆ ಹೊಡೆದಾಗ ಗಾಯವಾಗಿ ರಕ್ತ ಸೋರಿಕೆಯಾಗಿದೆ.ಇದರಿಂದ ಆರೋಪಿ ಗಾಬರಿಯಾಗಿ ನಾಯಂಡಹಳ್ಳಿಯಲ್ಲಿದ್ದ ತನ್ನ ಸ್ನೇಹಿತನಿಗೆ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಸ್ನೇಹಿತ ಬಂದು ನೋಡಿದಾಗ ತೀವ್ರ ರಕ್ತ ಸೋರಿಕೆಯಾಗಿರುವುದು ಗಮನಿಸಿ 108 ಗೆ ಕರೆ ಮಾಡಿದ್ದಾನೆ.
ಅಂಬ್ಯುಲೆನ್ಸ್ ಸಿಬ್ಬಂದಿ ಬಂದು ನೋಡಿದಾಗ ವ್ಯಕ್ತಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಆ ಸಂದರ್ಭದಲ್ಲಿ ಆರೋಪಿ ಪೊಲೀಸ್ ಠಾಣೆಗೆ ಹೋಗಿ ನಡೆದ ವಿಷಯವನ್ನು ತಿಳಿಸಿ ಪೊಲೀಸರಿಗೆ ಶರಣಾಗಿದ್ದಾನೆ.ಗೋವಿಂದರಾಜನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
