ಬೆಂಗಳೂರು,ಫೆ.8- ಕೋವಿಡ್ ಸಂದರ್ಭದಲ್ಲಿ ಚಾಮರಾಜನಗರದ ಆಮ್ಲಜನಕ ಕೊರತೆ ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ಖಾಯಂ ನೌಕರಿ ನೀಡಬೇಕು ಎಂದು ಸಂತ್ರಸ್ಥ ಕುಟುಂಬದ ಸದಸ್ಯರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆಯವರಲ್ಲಿ ಮನವಿ ಮಾಡಿದರು.
ಜನತಾದರ್ಶನಕ್ಕಾಗಿ ಆಗಮಿಸಿದ್ದ ಸಂತ್ರಸ್ತ ಕುಟುಂಬದ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಅದಕ್ಕೂ ಮೊದಲು ಜನತಾದರ್ಶನದ ಸಿದ್ಧತೆಗಳನ್ನು ವೀಕ್ಷಿಸುತ್ತಾ ಬಂದ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಕುಟುಂಬದ ಸದಸ್ಯರು ಆಕ್ಸಿಜನ್ ಕೊರತೆ ದುರಂತದಲ್ಲಿ 70 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು.
ಆ ವೇಳೆ ಸ್ಥಳಕ್ಕಾಗಮಿಸಿದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ರವರು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಗುತ್ತಿಗೆ ಆಧಾರದ ನೌಕರಿ ನೀಡಿದ್ದಾರೆ. ನಮಗೆ ಖಾಯಂ ನೌಕರಿ ಬೇಕು. ಗುತ್ತಿಗೆ ಆಧಾರಿತ ಕೆಲಸ ಬೇಡ ಎಂದು ಮನವಿ ಮಾಡಿದರು.
ಜನತಾದರ್ಶನಕ್ಕೆ ಬಂದು ಶಕ್ತಿಸೌಧ ಕಣ್ತುಂಬಿಕೊಂಡ ಜನರು
ಸರ್ಕಾರದ ಮೇಲೆ ತಮಗೆ ನಂಬಿಕೆಯಿದೆ. ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆಂಬ ವಿಶ್ವಾಸವಿದೆ. ಗುತ್ತಿಗೆ ನೌಕರಿಯನ್ನು ನಂಬಿಕೊಂಡು ಬದುಕು ನಡೆಸಲಾಗುವುದಿಲ್ಲ. ಮೃತಪಟ್ಟವರಲ್ಲಿ ಶೇ. ಅರ್ಧ ಭಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿದ್ದಾರೆ. ಹೀಗಾಗಿ ನೀವು ಈ ಕುರಿತು ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಏಕಾಏಕಿ ಖಾಯಂ ನೌಕರಿ ನೀಡಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಹತೆ ಹಾಗೂ ಇತರ ಮಾನದಂಡಗಳನ್ನು ಪರಿಶೀಲಿಸಬೇಕಾಗುತ್ತದೆ. ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತದೆ. ದುಡುಕಿ ಸಿಕ್ಕಿರುವ ಅವಕಾಶವನ್ನು ಕಳೆದುಕೊಳ್ಳಬೇಡಿ, ಗುತ್ತಿಗೆ ನೌಕರಿಯಲ್ಲೇ ಮುಂದುವರೆಯಿರಿ. ಮುಂದಿನ ದಿನಗಳಲ್ಲಿ ನಿಮಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.