ಬೆಂಗಳೂರು, ಜ.24- ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕಂಪೆನಿಯೊಂದರ ನಕಲಿ ಆಫರ್ ಲೆಟರ್ ನೀಡಿ ಲಕ್ಷಾಂತರ ರೂ. ಪಡೆದು ಪರಾರಿಯಾಗಿದ್ದ ವಂಚಕನೊಬ್ಬನನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಪುಣೆ ಮೂಲದ ಸಂಜೀವ್ ಗಂಗಾರಾಮ್ ಗೋರ್ಖಾ ಬಂತ ವಂಚಕ. ಈತ ಇದುವರೆಗೂ 40ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಗೆ ವಂಚಿಸಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.
ಕಂಪೆನಿಯೊಂದರಲ್ಲಿ ಉದ್ಯೋಗ ಖಾಲಿ ಇದೆ ಎಂದು ಉದ್ಯೋಗಾಕಾಂಕ್ಷಿಗಳನ್ನು ಸಂದರ್ಶನಕ್ಕೆ ಕರೆಸಿಕೊಂಡು ನಂತರ ನಿಮಗೆ ಉದ್ಯೋಗ ಕೊಡುವುದಾಗಿ ಹೇಳಿ ಕಂಪೆನಿಯೊಂದರ ನಕಲಿ ಆಫರ್ ಲೆಟರ್ ನೀಡಿ ಅವರುಗಳಿಂದ ಲಕ್ಷಾಂತರ ರೂ. ಪಡೆದು ನಂತರ ತಲೆಮರೆಸಿಕೊಂಡಿದ್ದನು.
ಉದ್ಯೋಗಾಕಾಂಕ್ಷಿಗಳು ವಂಚಕ ನೀಡಿದ್ದ ಆಫರ್ ಲೆಟರ್‍ನಲ್ಲಿದ್ದ ಲೋಗೋ ನೋಡಿ ಕಂಪೆನಿಗೆ ಹೋಗಿದ್ದಾಗ ಅದು ನಕಲಿ ಆಫರ್ ಲೆಟರ್ ಎಂಬುದು ಗೊತ್ತಾಗಿ ತಾವು ಮೋಸ ಹೋಗಿರುವುದು ತಿಳಿದು ಈ ಬಗ್ಗೆ ಸಂಪಿಗೆಹಳ್ಳಿ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರು ಕಾರ್ಯಾಚರಣೆ ಕೈಗೊಂಡು ಕೊನೆಗೂ ವಂಚಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತ 40ಕ್ಕೂ ಹೆಚ್ಚು ಮಂದಿಗೆ ವಂಚಿಸಿರುವುದು ವಿಚಾರಣೆಯಿಂದ ಗೊತ್ತಾಗಿದೆ.
