ನವದೆಹಲಿ, ಅ.26- ರಾಜ್ಯದಲ್ಲಿ ಕೊರತೆಯಾಗಿರುವ ವಿದ್ಯುತ್ ಪರಿಸ್ಥಿತಿಯನ್ನು ನಿಭಾಯಿಸಲು ಹಿಮಾಚಲಪ್ರದೇಶ ಹಾಗೂ ಇತರ ರಾಜ್ಯಗಳಿಂದ ವಿದ್ಯುತ್ ಖರೀದಿಸಲಾಗುತ್ತಿದ್ದು, ಜೊತೆಯಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಗೂ ಆದ್ಯತೆ ನೀಡಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ವಿದ್ಯುತ್ ಕೊರತೆಗೆ ಗೃಹಜ್ಯೋತಿ ಯೋಜನೆ ಕಾರಣವಲ್ಲ. ಈ ಯೋಜನೆ ಸೌಲಭ್ಯ ಪಡೆಯಲು ಗರಿಷ್ಠ 200 ಯೂನಿಟ್ ಅಥವಾ ಬಳಕೆಯ ಮಿತಿಯಲ್ಲೇ ಇರಬೇಕಿರುವುದರಿಂದ ಜನ ಬಳಕೆಯಲ್ಲೇ ಉಳಿತಾಯ ನೀತಿಯನ್ನು ಪಾಲನೆ ಮಾಡುತ್ತಿದ್ದಾರೆ. ಮಳೆ ಕೊರತೆಯಿಂದ ಈ ಬಾರಿ ಕೃಷಿ ಪಂಪ್‍ಸೆಟ್ ಹಾಗೂ ಕೈಗಾರಿಕೆಗಳಿಂದ ಬೇಡಿಕೆ ಹೆಚ್ಚಾಗಿದೆ ಎಂದು ವಿವರಿಸಿದರು.
ಇಂಧನ ಇಲಾಖೆ ಅಧಿಕಾರಿಗಳು ಪರಿಸ್ಥಿತಿ ನಿಭಾಯಿಸಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಶೇ.10ರಷ್ಟು ವಿದೇಶಿ ಕಲ್ಲಿದ್ದಲ್ಲನ್ನು ದೇಶಿಯ ಕಲ್ಲಿದ್ದಲಿಗೆ ಮಿಶ್ರಣ ಮಾಡಿದರೆ ವಿದ್ಯುತ್ ಉತ್ಪಾದನೆ ಹೆಚ್ಚಾಗಲಿದೆ. ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 2 ಮೆಗಾಟನ್ ಕಲ್ಲಿದ್ದಲ್ಲನ್ನು ಮಂಜೂರು ಮಾಡಿದೆ. ದೇಶಿಯ ಕಲ್ಲಿದ್ದಲಿನಲ್ಲಿ ಬೂದಿ ಹೆಚ್ಚಿದೆ ಅದನ್ನು ತೊಳೆಯಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಕೃತಕ ಅಭಾವ ಸೃಷ್ಟಿಸಿ ವಿದ್ಯುತ್ ಖರೀದಿಯಲ್ಲಿ ಹಣ ಮಾಡಲು ಯತ್ನಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಆಧಾರ ರಹಿತ ಆರೋಪ ಮಾಡಿದ್ದಾರೆ. ಆತ್ಮಸಾಕ್ಷಿ ಇರುವ ಯಾವ ರಾಜಕಾರಣಿಯೂ ಕೃತಕ ಅಭಾವ ಸೃಷ್ಟಿಸಲ್ಲ, ಆ ರೀತಿ ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿಯಾದಿಯಾಗಿ ನಾವು ಪ್ರತಿದಿನ ಪರಿಸ್ಥಿತಿ ಪರಿಶೀಲನೆ ಮಾಡುತ್ತೇವೆ.
ರಾಜ್ಯ ಸರ್ಕಾರ ವಿದ್ಯುತ್ ಖರೀದಿಸುವುದು ಕೇಂದ್ರ ಗ್ರಿಡ್‍ನಿಂದ. ನಮ್ಮ ಅಧಿಕಾರಿಗಳು ಮುನ್ನಾ ದಿನ ಗ್ರಿಡ್‍ಗೆ ಹೋಗಿ ಬಿಡ್‍ನಲ್ಲಿ ಭಾಗವಹಿಸುತ್ತಾರೆ. ಆ ದಿನದ ದರಕ್ಕೆ ತಕ್ಕಂಗೆ ಹರಾಜು ಕೂಗಿ ವಿದ್ಯುತ್ ಖರೀದಿಸುತ್ತೇವೆ. ಕುಮಾರಸ್ವಾಮಿ ಬಯಸಿದರೆ ಗ್ರಿಡ್‍ನಲ್ಲಿ ನಡೆಯುವ ಖರೀದಿ ಪ್ರಕ್ರಿಯೆಯನ್ನು ತೋರಿಸಲು ಕರೆದುಕೊಂಡು ಹೋಗಲು ಸಿದ್ದರಿದ್ದೇವೆ. ಸುಳ್ಳು ಆರೋಪ ಮಾಡಿ ಜನರಲ್ಲಿ ಅನುಮಾನ ಬರುವಂತೆ ಮಾಡುವುದು ಸರಿಯಲ್ಲ ಎಂದರು.
ಕೂಡಗಿ ಸ್ಥಾವರದ ಐದು ಸ್ಥಾವರದಲ್ಲಿ ಮೂರಲ್ಲಿ ಮಾತ್ರ ಉತ್ಪಾದನೆಯಾಗುತ್ತಿದೆ ಎಂದಿದ್ದಾರೆ. ಅವು ಕೇಂದ್ರ ಸರ್ಕಾರ ನಿಯಂತ್ರಣದಲ್ಲಿವೆ, ರಾಜ್ಯ ಸರ್ಕಾರಕ್ಕೆ ಸಂಬಂಧಿಸಿಲ್ಲ. ಅಲ್ಲಿ ಉತ್ಪಾದನೆಯಾಗುವ 2400 ಮೆಗಾವ್ಯಾಟ್‍ನಲ್ಲಿ ರಾಜ್ಯಕ್ಕೆ 1250 ಮೇಗಾವ್ಯಾಟ್ ಮಂಜೂರಾಗಿದೆ. ಕಳೆದ ವರ್ಷ ಕೇಂದ್ರ ಸರ್ಕಾರ 150 ಮೆಗಾವ್ಯಾಟ್ ವಿದ್ಯುತ್ ನೀಡಲು ಮುಂದಾಗಿತ್ತು. ಅದನ್ನು ಆಗಿನ ಸರ್ಕಾರ ಖರೀದಿಸದೆ, ದೆಹಲಿಗೆ ಬಿಟ್ಟುಕೊಟ್ಟಿದೆ. ಆ ಒಪ್ಪಂದ ಅಕ್ಟೋಬರ್ 31ವರೆಗೂ ಚಾಲ್ತಿಯಲ್ಲಿದೆ, ಅನಂತರ 150 ಮೆಗಾವ್ಯಾಟ್ ರಾಜ್ಯಕ್ಕೆ ದೊರೆಯಲಿದೆ ಎಂದರು.
ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ ವಸ್ತು ಸ್ಥಿತಿ ಅರಿವಿಲ್ಲದೆ ಅವರು ಆರೋಪ ಮಾಡಿದ್ದಾರೆ. ನಾನು ಯಾರ ಮೇಲೂ ದೋಷಾರೋಪಣೆ ಮಾಡುವುದಿಲ್ಲ. ಎಲ್ಲರಿಗೂ ಮನವರಿಕೆ ಮಾಡಿಕೊಡುತ್ತೇನೆ ಎಂದರು. ನಮ್ಮಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ. ಈ ಮೊದಲು ಕೃಷಿಗೆ ಏಳು ಗಂಟೆ ವಿದ್ಯುತ್ ನೀಡಲಾಗುತ್ತಿತ್ತು. ಕೊರತೆ ಹೆಚ್ಚಾಗಿದ್ದರಿಂದ ಐದು ಗಂಟೆಗೆ ಇಳಿಸಿದ್ದೇವೆ. ಜಿಲ್ಲಾ ಮಟ್ಟದ ಸಮಿತಿಗಳು ಬೇಡಿಕೆ, ಪೂರೈಕೆಯನ್ನು ನಿಭಾಯಿಸುತ್ತವೆ ಎಂದರು.
ಸಕ್ಕರೆ ಕಾರ್ಖಾನೆಗಳ ಉಪ ಉತ್ಪನ್ನದಿಂದ 600 ಮೇಗಾವ್ಯಾಟ್ ವಿದ್ಯುತ್ ದೊರೆಯುವ ನಿರೀಕ್ಷೆ ಇದೆ. ಹಿಮಾಚಲ ಪ್ರದೇಶದ ಸರ್ಕಾರದಿಂದ ವಿದ್ಯುತ್ ಖರೀದಿಸಲಾಗುತ್ತಿದೆ. ಅಲ್ಲಿ ಜಲವಿದ್ಯುತ್ ಉತ್ಪಾದನೆ ಹೆಚ್ಚಿದೆ. ನಮಗೆ 200 ಮೆಗಾವ್ಯಾಟ್ ಅನ್ನು ಪಿಕ್ ಅವರ್‍ನಲ್ಲಿ ಈಗಾಗಲೇ ಪೂರೈಕೆಯಾಗುತ್ತಿದೆ. ಖಾಸಗಿ ಅಥವಾ ಮಧ್ಯವರ್ತಿಗಳಿಂದ ನಾವು ವಿದ್ಯುತ್ ಖರೀದಿ ಮಾಡುತ್ತಿಲ್ಲ ಎಂದು ಹೇಳಿದರು.
BIG NEWS : ಮಾಜಿ ಸಿಎಂ ಯಡಿಯೂರಪ್ಪಗೆ Z ಕೆಟಗರಿ ಭದ್ರತೆ
ಇತ್ತೀಚೆಗೆ ಪವನ ಹಾಗೂ ಸೌರ ಶಕ್ತಿ ಹೆಚ್ಚಾಗುತ್ತಿದೆ. ಬೇಸಿಗೆಯಲ್ಲಿ ಮತ್ತಷ್ಟು ಸೌರ ಶಕ್ತಿ ವೃದ್ಧಿಸುವ ನಿರೀಕ್ಷೆಗಳಿವೆ ಎಂದರು. ಮುಂದಿನ ವರ್ಷ ಎಲ್ಲಾ ಉಪಸ್ಥಾವರಗಳಿಗೆ ಸೌರ ಶಕ್ತಿ ಅಳವಡಿಕೆಗೆ ಪ್ರತಿ ಯೂನಿಟ್‍ಗೆ 3.20 ರೂಪಾಯಿನಂತೆ ಟೆಂಡರ್ ಕರೆಯಲಾಗಿತ್ತು, ಅದರ ಅವ ನಿನ್ನೆ ಮುಗಿದಿದೆ.
ರಾಜ್ಯದಲ್ಲಿ 900 ಸಾವಿರ ಉಪಸ್ಥಾವರಗಳಿವೆ, ಅವುಗಳಲ್ಲಿ 200 ಉಪಸ್ಥಾವಗಳಿಗೆ ಕೇಂದ್ರ ಸರ್ಕಾರದ ಕುಸುಮ್-ಬಿ ಯೋಜನೆಯಲ್ಲಿ ಸೌರಶಕ್ತಿ ಉತ್ಪಾದನೆ ಮಾಡಿ, ಪೂರೈಕೆ ಮಾಡಲು ಕ್ರಮ ಕೈಗೊಳ್ಳುತ್ತಿದ್ದೇವೆ. ಕೃಷಿ ಪಂಪ್‍ಸೆಟ್‍ಗಳಿಗೆ ಸೌರಶಕ್ತಿ ವಿದ್ಯುತ್ ಘಟಕ ಅಳವಡಿಸುವ ಯೋಜನೆ ಎಂಟತ್ತು ತಿಂಗಳಲ್ಲಿ ಮುಗಿಯಲಿದೆ ಎಂದರು.
ಪಾವಗಡದಲ್ಲಿ ಈಗಾಗಲೇ 10 ಸಾವಿರ ಎಕರೆ ಪ್ರದೇಶದಲ್ಲಿ 2300 ಮೇಗಾವ್ಯಾಟ್ ಸೌರ ಶಕ್ತಿ ವಿದ್ಯುತ್ ಉತ್ಪಾದಿಸುತ್ತಿದ್ದೇವೆ. ಅಲ್ಲಿನ ರೈತರು ಇನ್ನೂ ಹತ್ತು ಸಾವಿರ ಎಕರೆಯನ್ನು ಭೋಗ್ಯದ ಆಧಾರದ ಮೇಲೆ ನೀಡಲು ಮುಂದೆ ಬಂದಿದ್ದಾರೆ. ಈಗಾಗಲೇ ಆರು ಸಾವಿರ ಎಕರೆಗೆ ಒಪ್ಪಂದವಾಗಿದೆ. ಹೆಚ್ಚುವರಿಯಾಗಿ 2 ಸಾವಿರ ಮೆಗಾವ್ಯಾಟ್ ಉತ್ಪಾದನೆಯಾಗಲಿದೆ ಎಂದರು.
ಜೊತೆಗೆ ಗದಗ, ಕಲಬುರಗಿ, ರಾಯಚೂರಿನಲ್ಲೂ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲಾಗುತ್ತಿದೆ. ಪವನ ಶಕ್ತಿ ಉತ್ಪಾದನೆಗೂ ಆದ್ಯತೆ ನೀಡಲಾಗುತ್ತಿದೆ. ಜೊತೆಗೆ ಪಂಪ್ ಸ್ಟೋರೆಜ್‍ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಚತ್ತಿಸ್‍ಗಡದಲ್ಲಿ ವಿದ್ಯುತ್ ಘಟಕ ಸ್ಥಾಪನೆಗೆ 500 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ ಉತ್ಪಾದನೆಯಾಗುತ್ತಿಲ್ಲ, ವಿದ್ಯುತ್ ಸಿಗುತ್ತಿಲ್ಲ , ಚುನಾವಣೆ ಬಳಿಕ ಅಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನ ಯಲಹಂಕದಲ್ಲಿನ ಡಿಸೇಲ್ ಘಟಕವನ್ನು ಅನಿಲ ಆಧಾರಿತವಾಗಿ ಘಟಕವನ್ನಾಗಿ ಪರಿವರ್ತಿಸಲಾಗಿದೆ. ಅಲ್ಲಿ 375 ಮೇಗಾ ವ್ಯಾಟ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಶರಾವತಿ ಸೇರಿದಂತೆ ಜಲವಿದ್ಯುತ್ ಉತ್ಪಾದನೆ ಶೇ.50ರಷ್ಟು ಕಡಿಮೆಯಾಗಿದೆ. ಮೋಡ ಮುಸುಕಿದ ವಾತಾವರಣದಿಂದ ಸೌರ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಉಷ್ಣ ವಿದ್ಯುತ್ ಸ್ಥಾವರಕ್ಕೆ ಹೆಚ್ಚುವರಿ ಕಲ್ಲಿದ್ದಲು ಪೂರೈಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಹಿಮಾಚಲ ಪ್ರದೇಶ. ಪಂಜಾಬ್, ಉತ್ತರ ಪ್ರದೇಶದಿಂದ ವಿನಿಮಯ ದರದ ಮೇಲೆ ವಿದ್ಯುತ್ ಖರೀದಿಸುತ್ತೇವೆ. ಭವಿಷ್ಯದ ಬೇಡಿಕೆಯನ್ನು ನಿಭಾಯಿಸುತ್ತಿದ್ದೇವೆ. ಹಂಚಿಕೆಯಾಗದೆ ಇರುವ ವಿದ್ಯುತ್‍ನಲ್ಲಿ ರಾಜ್ಯಕ್ಕೆ ಹೆಚ್ಚಿನ ಪಾಲು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದರು.
ಬಡವರು ಮತ್ತು ಮಧ್ಯಮ ವರ್ಗ ಆದಾಯ ಕಡಿತವಾಗಿತ್ತು. ಅವರ ಕೈ ಬಲ ಪಡಿಸಲು ಪಂಚಖಾತ್ರಿಗಳನ್ನು ಜಾರಿಗೆ ತರಲಾಗಿದ್ದು ಗೃಹಜ್ಯೋತಿ ರೂಪಿಸಲಾಯಿತು. ರಾಜ್ಯದಲ್ಲಿ 2.14 ಲಕ್ಷ ಸಂಪರ್ಕಗಳಿವೆ 1.51 ಕೋಟಿ ಫಲಾನುಭವಿಗಳು ನೋಂದಣಿಯಾಗಿ ಪ್ರಯೋಜನ ಪಡೆಯುತ್ತಿದ್ದಾರೆ. ತಿಂಗಳಿಗೆ 750 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರ ಎಸ್ಕಾಂಗಳಿಗೆ ಪಾವತಿಸುತ್ತಿದೆ. ಗೃಹಜ್ಯೋತಿ ಯೋಜನೆಯಡಿ ಪ್ರತಿ ದಿನ 43 ಮಿಲಿಯನ್ ಯೂನಿಟ್ ಬಳಕೆಯಾಗುತ್ತಿದೆ. ಮುಖ್ಯಮಂತ್ರಿಯವರು ಗೃಹಜ್ಯೋತಿಗೆ ಮುಂಗಡವಾಗಿಯೇ ಹಣ ಪಾವತಿ ಮಾಡುತ್ತಿದ್ದಾರೆ ಎಂದರು.
ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಗೌರವ ಗುಪ್ತ ಮಾತನಾಡಿ, ರಾಜ್ಯದಲ್ಲಿ ಇನ್ಸಾಟಾಲ್ ಕೆಪಾಸಿಟಿಗೆ ತಕ್ಕಂತೆ ವಿದ್ಯುತ್ ಉತ್ಪಾದಿಸಿ ಪೂರೈಸುತ್ತಿದ್ದೇವೆ. ನಾಲ್ಕೈದು ವರ್ಷಗಳಿಂದ ಬೇಡಿಕೆ ಹೆಚ್ಚಾಗಿರಲಿಲ್ಲ. ಈ ಬಾರಿ ಮಳೆ ಕೊರತೆಯಿಂದ ಬೇಡಿಕೆ ಹೆಚ್ಚಾಗಿದೆ. ರಾಜ್ಯದಲ್ಲಷ್ಟೆ ಅಲ್ಲ, ನೆರೆಯ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರಗಳಲ್ಲೂ ಬೇಡಿಕೆ ಹೆಚ್ಚಾಗಿದೆ.
ಜಲಾಶಯಗಳಲ್ಲಿ ನೀರು ಕಡಿಮೆಯಾಗಿದೆ, ಮುಂಗಾರಿನಲ್ಲಿ ಮಾತ್ರ ಪವನ ವಿದ್ಯುತ್ ಹೆಚ್ಚಾಗುತ್ತದೆ ಅನಂತರ ತಗ್ಗಿದೆ. ಮಳೆ ಕೊರತೆಯಿಂದಾಗಿ ನೀರಾವರಿ ಪಂಪ್‍ಸೆಟ್ ಗಳಿಗೆ ಹೆಚ್ಚಿನ ವಿದ್ಯುತ್ ಬಳಕೆಯಾಗುತ್ತಿದೆ. ಕಳೆದ ವರ್ಷಕ್ಕಿಂತ ಶೇ.50ರಿಂದ 80ರಷ್ಟು ಹೆಚ್ಚಾಗಿದೆ. ಅದಕ್ಕೆ ಅನುಗುಣವಾಗಿ ನಾವು ನಮ್ಮ ಉತ್ಪಾದನೆಯನ್ನು ಶೇ.40ರಿಂದ 50ರಷ್ಟು ಹೆಚ್ಚಿಸಿದ್ದೇವೆ ಎಂದರು.
ದುರ್ಗಾಪೂಜೆ ವೇಳೆ ಪಾಕ್ ಪರ ಘೋಷಣೆ : ಅಪ್ರಾಪ್ತ ಬಾಲಕಿ ಸೇರಿ 6 ಜನರ ಅರೆಸ್ಟ್
ಕಳೆದ ವರ್ಷ ಅಕ್ಟೋಬರ್ 24ರಂದು 7,647 ಮೆಗಾವ್ಯಾಟ್ ವಿದ್ಯುತ್ ಖರ್ಚಾಗಿತ್ತು, ಈ ವರ್ಷ ಅದೇ ದಿನ 13,812 ಮೇಗಾವ್ಯಾಟ್ ಬಳಕೆಯಾಗಿದೆ. ಶೇ,80ರಷ್ಟು ಬೇಡಿಕೆ ಹೆಚ್ಚಾಗಿದೆ. ಬೇರೆ ರಾಜ್ಯದಲ್ಲೂ ಶೇ.30ರಿಂದ 40ರಷ್ಟು ಬೇಡಿಕೆ ಹೆಚ್ಚಾಗಿದೆ ಎಂದು ವಿವರಿಸಿದರು.
2022ರ ಸೆಪ್ಟಂಬರ್ ತಿಂಗಳಿನಲ್ಲಿ ಗೃಹಬಳಕೆಗೆ 1236 ಮಿಲಿಯನ್ ಯೂನಿಟ್ ಇದ್ದರೆ, ಈ ವರ್ಷ ಅದೇ ತಿಂಗಳಿನಲ್ಲಿ 1287 ಯೂನಿಟ್ ಬಳಕೆಯಾಗಿದೆ, ಶೇ.4ರಷ್ಟು ಮಾತ್ರ ಹೆಚ್ಚಾಗಿದೆ. ಕೈಗಾರಿಕೆಗಳಿಗೆ ಕಳೆದ ವರ್ಷ 958 ಮಿಲಿಯನ್ ಯೂನಿಟ್ ಬಳಕೆಯಾಗಿದ್ದರೆ, 1041 ಯೂನಿಟ್ ಸೇರಿ ಶೇ.8ರಷ್ಟು ಹೆಚ್ಚಾಗಿದೆ. ವಾಣಿಜ್ಯ ಉದ್ದೇಶಕ್ಕೆ 572 ರ ಬದಲು 668 ಮಿಲಿಯನ್ ಯೂನಿಟ್ ಸೇರಿ ಶೇ.16ರಷ್ಟು ಹೆಚ್ಚಿದೆ. ನೀರಾವರಿ ಪಂಪ್ ಸೆಟ್‍ಗೆ 958 ಎದುರಾಗಿ 2426 ಮಿಲಿಯನ್ ಯೂನಿಟ್ ಅಂದರೆ ಶೇ.150 ರಷ್ಟು ಬೇಡಿಕೆ ಹೆಚ್ಚಾಗಿದೆ ಎಂದು ವಿವರಿಸಿದರು.
ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲಾಗುತ್ತಿದೆ. ನೀರಾವರಿಗೆ ತ್ರಿಪೇಸ್ ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಉತ್ಪಾದನೆ ಹೆಚ್ಚಿಸಲು, ಬೇರೆ ರಾಜ್ಯಗಳಿಂದ ವಿನಿಮಯದ ಆಧಾರದ ಮೇಲೆ ವಿದ್ಯುತ್ ಖರೀದಿ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ನಿನ್ನೆ ಹೊರಡಿಸಿರುವ ಆದೇಶದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿರುವುದನ್ನು ಪರಿಶೀಲನೆ ಮಾಡಿದೆ.
ಚಿಕ್ಕಬಳ್ಳಾಪುರ : ಸಿಮೆಂಟ್ ಬಲ್ಕರ್ ಲಾರಿಗೆ ಟಾಟಾ ಸುಮೋ ಡಿಕ್ಕಿ , 13 ಮಂದಿ ದುರ್ಮರಣ
ಮಳೆಕೊರತೆಯಿಂದ ಶೇ.11ರಷ್ಟು ಜಲವಿದ್ಯುತ್ ಕಡಿತವಾಗಿದೆ. 2 ಗಿಗಾ ವ್ಯಾಟ್‍ನಷ್ಟು ಕಡಿಮೆಯಾಗಿದೆ. ಆದಾಗ್ಯೂ ತಡೆ ರಹಿತ ವಿದ್ಯುತ್ ಉತ್ಪಾದನೆಗೆ ವಿದೇಶಿ ಕಲ್ಲಿದ್ದಲನ್ನು ಆಮುದು ಮಾಡಿಕೊಂಡು ದೇಶಿಯ ಕಲ್ಲಿದ್ದಲಿನ ಜೊತೆಗೆ ಮಾರ್ಚ್ ವರೆಗೂ ಶೇ.6ರಷ್ಟು ಬ್ಲೆಂಡ್ ಮಾಡಲು ಸೂಚಿಸಲಾಗಿದೆ ಎಂದರು.