ಬೆಂಗಳೂರು,ಡಿ.3- ಸರ್ಕಾರದ ಕೋಟಾದಡಿಯ ಎಂಜಿನಿಯರಿಂಗ್ ಸೀಟುಗಳನ್ನು ಬ್ಲಾಕ್ ಮಾಡಿ, ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಟ್ಟು, ಅರ್ಹ ಅಭ್ಯರ್ಥಿಗಳಿಗೆ ವಂಚಿಸುತ್ತಿದ್ದ ಸರ್ಕಾರಿ ಉದ್ಯೋಗಿ ಸೇರಿದಂತೆ ಹತ್ತು ಮಂದಿಯನ್ನು ಮಲ್ಲೇಶ್ವರಂ ಉಪ ವಿಭಾಗದ ಪೊಲೀಸರು ಹಾಗೂ ಸಿಇಎನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕೆಇಎ ನೌಕರ ಅವಿನಾಶ್ (36), ಕಿಂಗ್ಪಿನ್ ಶ್ರೀಹರ್ಷ (42) ಹಾಗೂ ಸಹಚರರಾದ ಪುರುಷೋತ್ತಮ್ (24), ಶಶಿಕುಮಾರ್ (34), ಪುನೀತ್ (27), ರವಿಶಂಕರ್ (56), ಪ್ರಕಾಶ್ (42), ದಿಲ್ಷಾದ್ ಆಲಂ (33), ನೌಷದ್ ಆಲಂ (42) ಮತ್ತು ತಿಲಕ್ (60) ಬಂಧಿತ ವಂಚಕರು.ನೌಕರ ಅವಿನಾಶ್ ಅಭ್ಯರ್ಥಿಗಳ ಪಾಸ್ವರ್ಡ್ ತಿಳಿದು ಕಿಂಗ್ ಪಿನ್ ಶ್ರೀಹರ್ಷನಿಗೆ ನೀಡುತ್ತಿದ್ದ. ಈತ ಡಾಲರ್ಸ್ ಕಾಲೋನಿಯಲ್ಲಿ ಕನ್ಸಲ್ಟೆಂಟ್ ನಡೆಸುತ್ತಿದ್ದು, ಅಭ್ಯರ್ಥಿಗಳ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಏಜೆಂಟರ ಮೂಲಕ ಸೀಟ್ಗಳನ್ನು ಬ್ಲಾಕ್ ಮಾಡಿಸುತ್ತಿದ್ದ. ದೂರು ದಾಖಲಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಕಡೂರು ಮೂಲದ ಪ್ರಕಾಶ್ ಲ್ಯಾಪ್ಟಾಪ್ಗಳನ್ನು ತನ್ನ ಜಮೀನಿನಲ್ಲಿ ಸುಟ್ಟು ಹಾಕಿದ್ದನು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿಯೊಬ್ಬರು ಈ ಬಗ್ಗೆ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿ, 52 ಇಂಜಿನಿಯರಿಂಗ್ ಅಭ್ಯರ್ಥಿಗಳ ಲಾಗಿನ್ ಮತ್ತು ಪಾಸ್ವರ್ಡ್ ಹಾಗೂ ಸಿಕ್ರೇಟ್ ಕೀ ನ್ನು ಯಾರೋ ಅಪರಿಚಿತರು ಅನಧಿಕೃತವಾಗಿ ಪಡೆದುಕೊಂಡು, ಅಭ್ಯರ್ಥಿಗಳ ಪರವಾಗಿ ಆಯ್ಕೆ ಪ್ರವೇಶ( ಆಪ್ಷನ್ ಎಂಟ್ರಿ) ಮಾಡಿಸಿ ಬಿ.ಎಂ.ಎಸ್ ಇಂಜಿನಿಯರಿಂಗ್ ಕಾಲೇಜು, ಅಕಾಶ್ ಇಸ್ಟೀಟ್ಯೂಟ್ ಆಫ್ ಇಂಜಿನಿಯರಿಂಗ್, ನ್ಯೂ ಹಾರೀಜನ್ ಇಂಜಿನಿಯರಿಂಗ್ ಕಾಲೇಜುಗಳಿಗೆ ಸರ್ಕಾರದ ಕೋಟದಡಿ ಬರುವ ಇಂಜಿನಿಯರಿಂಗ್ ಸೀಟುಗಳನ್ನು ಬ್ಲಾಕ್ ಮಾಡಿ, ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಟ್ಟು, ಅರ್ಹ ಅಭ್ಯರ್ಥಿಗಳಿಗೆ ವಂಚಿತರಾಗುವಂತೆ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಂಚನೆ ಮಾಡಿರುತ್ತಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, 52 ಇಂಜಿನಿಯರಿಂಗ್ ಅಭ್ಯರ್ಥಿಗಳ ಆಪ್ಷನ್ ಎಂಟ್ರಿ ಮಾಡಿದ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಆರೋಪಿಗಳು ವಿವಿಧ ಮೊಬೈಲ್ ಫೋನ್ ಮತ್ತು ಲ್ಯಾಪ್ಟಾಪ್ಗಳನ್ನು ಬಳಸಿರುವುದು ಗೊತ್ತಾಗಿದೆ. ಬೇರೆ ಬೇರೆ ಸ್ಥಳಗಳಾದ ಗೋವಾ, ಶಿವಮೊಗ್ಗ, ದಾವಣಗೆರೆ, ಕಡೂರು ಹಾಗೂ ಬೆಂಗಳೂರನಲ್ಲಿ ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿ ಕೊಡುವ ಉದ್ದೇಶದಿಂದ ಅಭ್ಯರ್ಥಿಗಳೆಂದು ಬಿಂಬಿಸಿ ಕೆ.ಇ.ಎ ವೆಬ್ಸೈಟ್ನಲ್ಲಿ ಕಾಲೇಜು ಮತ್ತು ಕೋರ್ಸ್ ಆಯ್ಕೆ ಮಾಡಿದ್ದ ನಾಲ್ವರನ್ನು ್ನ ಮೆಜೆಸ್ಟೀಕ್ ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.
ಈ ನಾಲ್ವರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಈ ಪ್ರಕರಣದಲ್ಲಿ ವಂಚನೆ ಮಾಡಿರುವುದಾಗಿ ತಿಳಿಸಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತಿಬ್ಬರ ಬಗ್ಗೆ ಮಾಹಿತಿ ನೀಡಿದ್ದಾರೆೆ.
ತನಿಖೆ ಮುಂದುರೆಸಿದ ಪೊಲೀಸರು ಮತ್ತಿಬ್ಬರ ಪೈಕಿ ಒಬ್ಬನನ್ನು ದೇವನಹಳ್ಳಿ ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ಇದರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುವ ಉದ್ಯೋಗಿ ಭಾಗಿಯಾಗಿರುವುದು ಗೊತ್ತಾಗಿದೆ. ತಕ್ಷಣ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಂಭಾಗದಲ್ಲಿಯೇ ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಹೇಳಿದ್ದಾಣೆ.
ಅಲ್ಲದೆ ಸಿ.ಇ.ಟಿಯಲ್ಲಿ ಅರ್ಹ ಅಭ್ಯರ್ಥಿಗಳ ಮಾಹಿತಿಯನ್ನು ಇತರೆ ಆರೋಪಿಗಳೊಂದಿಗೆ ಹಂಚಿಕೊಂಡಿರುವುದಾಗಿ ತಿಳಿಸಿದ್ದು, ಅಂದೇ ಈ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ಟೌನ್ನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿನ ಮೂವರು ಏಜೆಂಟರ್ಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಲಾಗಿದೆ.
ಈ ಪ್ರಕರಣದ ಒಟ್ಟು 10 ಆರೋಪಿಗಳಿಂದ 13 ಮೊಬೈಲ್ ಫೋನ್ಗಳು, ಕೆಲವು ದಾಖಲಾತಿಗಳು ವಶಕ್ಕೆ ಪಡೆಯಲಾಗಿದ್ದು, ಕೃತ್ಯಕ್ಕೆ ಬಳಸಿದ 3 ಲ್ಯಾಪ್ಟಾಪ್ಗಳನ್ನು ಸುಟ್ಟುಹಾಕಿದ್ದು ಅವುಗಳ ಅವಶೇಷಗಳನ್ನು ತನಿಖೆಯ ಸಲುವಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಕಾರ್ಯಾಚರಣೆಯನ್ನು ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸೈದುಲು ಅಡಾವತ್ ಮಾರ್ಗದರ್ಶನದಲ್ಲಿ, ಸೆನ್ ಉತ್ತರ ವಿಭಾಗದ ಮಲ್ಲೇಶ್ವರಂ ಠಾಣೆ ಇನ್ಸ್ಪೆಕ್ಟರ್ ಜಗದೀಶ್ ಹಾಗೂ ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.