ಶಿವಮೊಗ್ಗ, ಡಿ. 11- ಇಂದು ರಾಜ್ಯದೆಲ್ಲೆಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಸಿನಿಮಾದ ಸಂಭ್ರಮಾಚರಣೆ ಜೋರಾಗಿದ್ದರೆ, ಶಿವಮೊಗ್ಗದಲ್ಲಿ ಸಂಭ್ರಮಾಚರಣೆ ಮುಗಿಸಿಕೊಂಡು ಬರುತ್ತಿದ್ದ ದರ್ಶನ್ ಅಭಿಮಾನಿಯೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.ಅಪಘಾತದಲ್ಲಿ ಮೃತಪಟ್ಟವನನ್ನುಪುನೀತ್ (26) ಎಂದು ಗುರುತಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ವಿನಾಯಕ ಚಿತ್ರಮಂದಿರದಲ್ಲಿ ಇಂದು ಡೆವಿಲ್ ಸಿನಿಮಾ ಬಿಡುಗಡೆಯಾಗಿದ್ದು, ನಿನ್ನೆ ಪುನೀತ್ ಹಾಗೂ ಸ್ನೇಹಿತರು ಚಿತ್ರಮಂದಿರದ ಬಳಿ ಕಟೌಟ್, ಬ್ಯಾನರ್ ಕಟ್ಟಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.
ನಂತರ ತಡರಾತ್ರಿ ಮನೆಗೆ ತೆರಳುತ್ತಿದ್ದ ಸಮಯದಲ್ಲಿ ರಂಜದಕಟ್ಟೆ ಸಮೀಪದ ಶಿವರಾಜಪುರ ಬಳಿ ಪುನೀತ್ ತೆರಳುತ್ತಿದ್ದ ಬೈಕ್‌ಗೆ ಎದುರಿನಿಂದ ಬಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಪುನೀತ್ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತಕ್ಕೆ ಬಸ್ ಚಾಲಕನ ನಿರ್ಲಕ್ಷವೇ ಕಾರಣ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ತೀರ್ಥಹಳ್ಳಿ ಠಾಣೆ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
