ದರ್ಶನ್ ಈಗ ಹೊರಗೆ ಇದ್ದಿದ್ದರೆ ಫ್ಯಾನ್ಸ್ ಹಬ್ಬವನ್ನೇ ಮಾಡ್ತಾ ಇದ್ದರು. ಹಾಗಂತ ಈಗಲೂ ಸುಮ್ಮನೆ ಏನು ಇಲ್ಲ. ಭರ್ಜರಿಯಾಗಿಯೇ ಡೆವಿಲ್ ಪ್ರಮೋಷನ್ ಮಾಡ್ತಿದ್ದಾರೆ. ಹೀಗಾಗಿಯೇ ‘ದಿ ಡೆವಿಲ್’ ಸಿನಿಮಾ ರಿಲೀಸ್ಗೂ ಮುನ್ನವೇ ಅಂದಾಜು 3.5 ಕೋಟಿ ರು.ಗೂ ಅಧಿಕ ಸಂಗ್ರಹ ಮಾಡಿದೆ. ಈ ಸಿನಿಮಾ ನಿರ್ಮಾಣ ಸಂಸ್ಥೆ ಜೈ ಮಾತಾ ಮಾತಾ ಕಂಬೈನ್ಸ್ ಶನಿವಾರ ಈ ಕುರಿತು ಪೋಸ್ಟರ್ ಬಿಡುಗಡೆ ಮಾಡಿ, ‘ಒಂದು ಐಕಾನ್, ಒಂದು ಅತ್ಯುತ್ಸಾಹದ ಅಭಿಮಾನಿ ಸೇನೆ, ಇವರಿಂದ ಸಂಗ್ರಹವಾದ ಮೊತ್ತ 2 ಕೋಟಿ 52 ಲಕ್ಷ’ ಎಂದು ತಿಳಿಸಿತ್ತು.
ಸದ್ಯ ಗಂಟೆಗೆ 11 ಸಾವಿರ ಟಿಕೆಟ್ ಬುಕಿಂಗ್ ಆಗಿದ್ದು, 55,000ಕ್ಕೂ ಹೆಚ್ಚು ಫ್ಯಾನ್ಸ್ ಶೋಗಳ ಟಿಕೆಟ್ ಸೇಲಾಗಿದೆ ಎನ್ನಲಾಗಿದೆ. ದರ್ಶನ್ ಸಿನಿಮಾವನ್ನು ಗೆಲ್ಲಿಸಲೇಬೇಕೆಂಬ ಛಲಕ್ಕೆ ಬಿದ್ದಿರುವ ಅವರ ಅಭಿಮಾನಿಗಳಿಂದಾಗಿ ಫಸ್ಟ್ ಡೇ ಫಸ್ಟ್ ಶೋ ಹೌಸ್ಫುಲ್ ಆಗಿದೆ. ಈ ಹಿನ್ನೆಲೆಯಲ್ಲಿ ಶೋಗಳ ಸಂಖ್ಯೆ ಹೆಚ್ಚಳವಾಗುತ್ತಿದೆ.ಡಿಸೆಂಬರ್ 11ರ ಗುರುವಾರ ಬೆಳಗ್ಗೆ 6 ಗಂಟೆಗೆ ಮೊದಲ ಶೋ ಆರಂಭವಾಗುತ್ತಿದೆ. ಗರಿಷ್ಟ ಟಿಕೆಟ್ ದರ 900 ರು.ವರೆಗೂ ಏರಿಕೆಯಾಗಿದೆ. ಹಲವೆಡೆ 500 ರು. ನಿಂದ 600 ರು.ವರೆಗೂ ಟಿಕೆಟ್ ದರವಿದೆ.
ಇನ್ನೊಂದೆಡೆ ಸಿನಿಮಾ ಟ್ರೇಲರ್ ವೀಕ್ಷಣೆಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತ್ತ ದಿ ಡೆವಿಲ್ ಮೂವಿ ರಿಲೀಸ್ ಇನ್ನು ಜಸ್ಟ್ 3 ದಿನ ಬಾಕಿ ಇವೆ. ಭರ್ತಿ ಎರಡು ವರ್ಷಗಳ ಬಳಿಕ ಬಿಗ್ಸ್ಕ್ರೀನ್ ಮೇಲೆ ಕಾಣಿಸಿಕೊಳ್ತಾ ಇರೋ ದರ್ಶನ್ನ ನೋಡೋದಕ್ಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಒಂದೆಡೆ ತಮ್ಮ ಅಚ್ಚುಮೆಚ್ಚಿನ ನಟ ಡಿ ಬಾಸ್ ಸಂಕಷ್ಟದಲ್ಲಿರುವುದರಿಂದ ಅಭಿಮಾನಿಗಳ ಹೃದಯ ಕಾತರಗೊಂಡಿದೆ. ಆದರೆ ಮತ್ತೊಂದೆಡೆ ‘ಡೆವಿಲ್’ ಚಿತ್ರದ ಟ್ರೇಲರ್ಗಳಿಂದ ಮೂಡಿದ ಅಬ್ಬರ, ಡೈಲಾಗ್ ದರ್ಶನ್ ಅವರ ಮಾಸ್ ಅಭಿಮಾನಿಗಳಿಗೆ ಕೊಟ್ಟಿರುವ ಮಾತುಗಳು ಅಭಿಮಾನಿಗಳಲ್ಲಿ ಹೊಸ ಅಲೆ ಹುಟ್ಟಿಸಿವೆ.
“ಕೊಂಚ ಹೊತ್ತು ಸೂರ್ಯನಿಗೆ ಗ್ರಹಣ ಹಿಡಿದರೂ, ಅವನು ಮರೆವಾಗೋದಿಲ್ಲ” ಡೈಲಾಗ್, ದರ್ಶನ್ ಮತ್ತೆ ಆಚೆ ಬಂದು ಮೊದಲಿನ ರೀತಿ ಸಿನಿಮಾ ಮಾಡುತ್ತಾರೆ ಎಂಬ ನಂಬಿಕೆ ಅಭಿಮಾನಿಗಳ ಮನದಾಳದಲ್ಲಿ ಬೇರೂರಿದೆ.ಜೈಲಿನಲ್ಲಿರುವಾಗಲೇ ಅವರ ಚಿತ್ರ ಬಿಡುಗಡೆ ಆಗ್ತಿದೆ ಎಂಬುದು ಹಲವು ರೀತಿಯ ಚರ್ಚೆಗಳಿಗೆ ಕಾರಣವಾಗಿದೆ.
ಇದು ದರ್ಶನ್ ಅವರ ಸ್ಟಾರ್ಡಮ್ಗೆ ಬಂದ ಪರೀಕ್ಷೆ ಎಂದು ಪರಿಗಣಿಸುತ್ತಿದ್ದಾರೆ. ಆದರೆ ಏನೇ ಆಗಲಿ, ಅಭಿಮಾನಿಗಳ ನಿಷ್ಠೆ ಮಾತ್ರ ಬೆಂಕಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ, ಚಿತ್ರಮಂದಿರಗಳಲ್ಲಿ, ಮತ್ತು ಫ್ಯಾನ್ ಕ್ಲಬ್ಗಳಲ್ಲಿ “ನಮ್ಮ ದರ್ಶನ್” ಎಂಬ ನಾದ ಗಟ್ಟಿ ಆಗುತ್ತಿದೆ. ಅಭಿಮಾನಿಗಳೆಲ್ಲಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
