ಬೆಂಗಳೂರು, ಜ.9- ರಾಜ್ಯ ಸರ್ಕಾರದಿಂದ ನೀಡುವ 2020 ಹಾಗೂ 2021ನೇ ಸಾಲಿನ ಪ್ರತಿಷ್ಠಿತ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಲ್ ಮತ್ತು ಡಾಕ್ಟರ್ ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
2020ರ ಸಾಲಿನ ಡಾ.ರಾಜ್‌ಕುಮಾರ್ ಪ್ರಶಸ್ತಿಯನ್ನು ಹಿರಿಯ ನಟಿ ಡಾ.ಜಯಮಾಲಾ ಅವರಿಗೆ, 2020ರ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಹಿರಿಯ ನಿರ್ದೇಶಕ ಎಂ.ಎಸ್. ಸತ್ಯು ಹಾಗೂ ಪ್ರಗತಿ ಅಶ್ವತ್‌್ಥ ನಾರಾಯಣ್ ಅವರಿಗೆ ಡಾ.ವಿಷ್ಣುವರ್ಧನ ಪ್ರಶಸ್ತಿ ನೀಡಲಾಗಿದೆ.
ಅಂತೆಯೇ 2021ರ ಸಾಲಿನ ಡಾ.ರಾಜಕುಮಾರ್ ಪ್ರಶಸ್ತಿಯನ್ನು ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದ್ ಅವರಿಗೆ ಘೋಷಿಸಲಾಗಿದೆ. 2021ರ ಸಾಲಿನ ಪುಟ್ಟಣ್ಣ ಕಣಗಲ್ ಪ್ರಶಸ್ತಿಯನ್ನು ನಿರ್ದೇಶಕ ಶಿವರುದ್ರಯ್ಯ ಅವರಿಗೆ ನೀಡಲಾಗಿದೆ. ಜೊತೆಗೆ ಹಿರಿಯ ನಟ ಎಂ.ಕೆ.ಸುಂದರ್ ರಾಜ್ ಅವರಿಗೆ 2021 ನೇ ಸಾಲಿನ ವಿಷ್ಣುವರ್ಧನ ಪ್ರಶಸ್ತಿ ಲಭಿಸಿದೆ.
ಈ ಎಲ್ಲ ಪ್ರಶಸ್ತಿಗಳು 5 ಲಕ್ಷ ರೂ. ನಗದು ಹಾಗೂ 50 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿವೆ.
2020ನೇ ಸಾಲಿನ ಪ್ರಶಸ್ತಿ :
ಡಾ.ಜಯಮಾಲಾ- ಡಾ.ರಾಜ್‌ಕುಮಾರ್ ಪ್ರಶಸ್ತಿ
ಎಂ.ಎಸ್ ಸತ್ಯು- ಪುಟ್ಟಣ್ಣ ಕಣಗಾಲ್
ಹಿರಿಯ ಸ್ಥಿರ ಛಾಯಾಗ್ರಾಹಕ ಪ್ರಗತಿ ಅಶ್ವತ್‌್ಥ ನಾರಾಯಣ್ –
ಡಾ.ವಿಷ್ಣುವರ್ಧನ್ ಪ್ರಶಸ್ತಿ
2021 ನೇ ಸಾಲಿನ ಪ್ರಶಸ್ತಿ
ನಿರ್ಮಾಪಕ ಸಾ.ರಾ ಗೋವಿಂದ್ – ಡಾ.ರಾಜ್‌ಕುಮಾರ್ ಪ್ರಶಸ್ತಿ
ನಿರ್ದೇಶಕ ಶಿವರುದ್ರಯ್ಯ – ಪುಟ್ಟಣ್ಣ ಕಣಗಾಲ್
ನಟ ಎಂ.ಕೆ ಸುಂದರ್ ರಾಜ್ – ಡಾ.ವಿಷ್ಣುವರ್ಧನ್ ಪ್ರಶಸ್ತಿ
ಪ್ರಶಸ್ತಿ ಡಾ.ರಾಜ್‌ಗೆ ಅರ್ಪಣೆ..
ರಾಜ್ಯ ಸರ್ಕಾರದಿಂದ ಡಾ.ರಾಜ್‌ಕುಮಾರ್ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಅತೀವ ಸಂತಸವಾಗಿದೆ ಎಂದು ನಿರ್ಮಾಪಕ ಸಾ.ರಾ.ಗೋವಿಂದು ಹೇಳಿದ್ದಾರೆ. ನಾನು ಈ ಪ್ರಶಸ್ತಿಯನ್ನು ಗೌರವ ಪೂರ್ವಕವಾಗಿ ಪದಭೂಷಣ ಡಾ.ರಾಜ್‌ಕುಮಾರ್ ಅವರಿಗೆ ಅರ್ಪಣೆ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.
ನಾನು ಪ್ರೀತಿಯಿಂದ ಆರಾಧಿಸುವ, ಅಭಿಮಾನಿಸುವ ದೊಡ್ಡ ವ್ಯಕ್ತಿಯ ಹೆಸರಿನಲ್ಲಿ ನನಗೆ ಪ್ರಶಸ್ತಿ ಬಂದಿರುವುದು ನನ್ನ ಪುಣ್ಯ. ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿರುವುದು ತಿಳಿದು ನನಗಾದ ಸಂತೋಷ ಹೇಳತೀರದು. ಅಣ್ಣಾ ಅವರ ಜೊತೆಯಲ್ಲಿ ನಾನು ಕಳೆದ ಕ್ಷಣಗಳನ್ನು ನೆನೆದು ಕಣ್ಣೀರು ಬಂತು. ಆ ಪುಣ್ಯಾತ ಈಗಲೂ ಅಜರಾಮರ ಎಂದು ಭಾವುಕರಾದರು.
ನಾನು ಸಾರ್ವಜನಿಕ ವಲಯದಲ್ಲಿ ಏನು ಹೆಸರು ಮಾಡಿದ್ದೇನೆಯೋ, ಗೌರವ ಸಂಪಾದಿಸಿದ್ದೇನೆಂದರೆ ಅದಕ್ಕೆ ಕಾರಣ ಡಾ.ರಾಜ್‌ಕುಮಾರ್ ಮತ್ತು ಅವರ ಆದರ್ಶ ಗುಣಗಳು. ಅವರಿಲ್ಲದೆ ನಾನಿಲ್ಲ ಎಂದರು.
ಡಾ.ರಾಜ್‌ಕುಮಾರ್ ಪ್ರಶಸ್ತಿಯನ್ನು ಗೌರವಯುತವಾಗಿ ಸ್ವೀಕರಿಸಿದ್ದೇನೆ. ಅವರ ಹೆಸರಿನಲ್ಲಿ ಪ್ರಶಸ್ತಿ ಕೊಡುವ ಮೂಲಕ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿರುವ ರಾಜ್ಯ ಸರ್ಕಾರಕ್ಕೂ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಸಾ.ರಾ.ಗೋವಿಂದು ಹೇಳಿದರು. ಡಾ.ರಾಜ್‌ಕುಮಾರ್ ಅವರ ಜೊತೆಯಲ್ಲಿ ಕಳೆದ ಆ ದಿನಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ನುಡಿದರು.
