ಚೆನ್ನೈ, ಜ.27- ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ಜನ ನಾಯಗನ್‌ಗೆ ಹಿಡಿದಿರುವ ಗ್ರಹಣ ಇನ್ನು ಬಿಟ್ಟಾಂಗೇ ಕಾಣುತ್ತಿಲ್ಲ.ಚಿತ್ರ ಬಿಡುಗಡೆಗೆ ಹಿನ್ನಡೆ ಮೇಲೆ ಹಿನ್ನಡೆಯಾಗುತ್ತಿದ್ದು ಮತ್ತೆ ಕೆಲ ದಿನಗಳ ಕಾಲ ಚಿತ್ರ ಬಿಡುಗಡೆಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ.
ತೆಲುಗಿನ ಭಗವಂತ ಕೇಸರಿ ಸಿನಿಮಾದ ರೀಮೇಕ್ ಆಗಿರುವ ಜನ ನಾಯಗನ್ ಜ. 10 ರಂದು ಬಿಡುಗಡೆ ಆಗಬೇಕಿತ್ತು, ಆದರೆ ಸಿಬಿಎಫ್‌ಸಿ ಪ್ರಮಾಣ ಪತ್ರ ನೀಡಲು ನಿರಾಕರಿಸಿತು. ಸಿಬಿಎಫ್‌ಸಿ ವಿರುದ್ಧ ನಿರ್ಮಾಪಕರು ಹೈಕೋರ್ಟ್ ಮೆಟ್ಟಿಲೇರಿದರು. ಹೈಕೋರ್ಟ್ ಮೊದಲಿಗೆ ಪ್ರಮಾಣ ಪತ್ರ ನೀಡುವಂತೆ ಹೇಳಿತ್ತಾದರೂ ಬಳಿಕ ತನ್ನದೇ ಆದೇಶಕ್ಕೆ ತಾನೇ ತಡೆ ನೀಡಿತು.
ಇಂದು ಮತ್ತೆ ಇದೇ ವಿಚಾರವಾಗಿ ಆದೇಶ ಹೊರಡಿಸಿರುವ ಮದ್ರಾಸ್ ಹೈಕೋರ್ಟ್, ಪ್ರಕರಣವನ್ನು ಸಿಂಗಲ್ ಬೆಂಚ್‌ಗೆ ವರ್ಗಾವಣೆ ಮಾಡಿದೆ. ಎರಡೂ ಪಕ್ಷದವರಿಗೆ (ಸಿಬಿಎಫ್‌ಸಿ ಮತ್ತು ಸಿನಿಮಾ ನಿರ್ಮಾಪಕ) ಇಬ್ಬರಿಗೂ ವಾದಕ್ಕೆ ಸೂಕ್ತ ಅವಕಾಶ ನೀಡಿದ ನಂತರ ವಿಷಯವನ್ನು ತ್ವರಿತವಾಗಿ ನಿರ್ಧರಿಸಲು ಏಕ ನ್ಯಾಯಾಧೀಶರಿಗೆ ಸೂಚಿಸಲಾಗಿದೆ. ಅಲ್ಲದೆ, ಸಿನಿಮಾ ನಿರ್ಮಾಪಕರು, ಸಿಬಿಎಫ್‌ಸಿ ಚೇರ್‌ಮನ್ ಅವರ ನಿರ್ಧಾರಕ್ಕೆ ಸವಾಲಾಗಿ ಮತ್ತೊಂದು ಅರ್ಜಿಯನ್ನು ಸಲ್ಲಿಸುವಂತೆಯೂ ಸೂಚಿಸಿದೆ.
ಆದೇಶ ಪ್ರಕಟಣೆಗೂ ಮುನ್ನ, ಈ ಹಿಂದೆ ಸಿಂಗಲ್ ಜಡ್ಜ್ ಬೆಂಚ್ ನೀಡಿದ್ದ ಆದೇಶವನ್ನು ನಿರ್ಲಕ್ಷ್ಯ ಮಾಡಬೇಕು ಎಂದು ಸಹ ಹೈಕೋರ್ಟ್ ಹೇಳಿದೆ ಹಾಗೂ ಆ ಆದೇಶದಲ್ಲಿ ಸಿಬಿಎಫ್‌ಸಿಗೆ ವಾದ ಮಂಡನೆಗೆ ಸೂಕ್ತ ಅವಕಾಶ ನೀಡಲಾಗಿರಲಿಲ್ಲ ಎಂದು ತಿಳಿಸಿದೆ. ಇದೀಗ ಪ್ರಕರಣ ಮತ್ತೆ ಹೈಕೋರ್ಟ್‌ನ ಏಕಸದಸ್ಯ ಪೀಠಕ್ಕೆ ವರ್ಗಾವಣೆ ಆಗಿದ್ದು, ಮೊದಲಿನಿಂದ ಮತ್ತೆ ವಾದ-ಪ್ರತಿವಾದಗಳು ನಡೆಯಲಿರುವುದರಿಂದ ಸದ್ಯಕ್ಕಂತೂ ಜನನಾಯಗನ್‌ಗೆ ಬಿಡುಗಡೆ ಭಾಗ್ಯ ಇಲ್ಲದಂತಾಗಿದೆ.
