ಬೆಂಗಳೂರು, ಜ.5- ತಿಥಿ ಚಿತ್ರದಲ್ಲಿ ತಮ ವಿಶಿಷ್ಟ ಅಭಿನಯ ಹಾಗೂ ಸಂಭಾಷಣೆಗಳಿಂದ ಕರುನಾಡಿನ ಗಮನ ಸೆಳೆದಿದ್ದ ಸೆಂಚುರಿಗೌಡ (ಸಿಂಗ್ರಿಗೌಡ) ಅವರು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿಂಗ್ರಿಗೌಡ ಅವರು ನಿನ್ನೆ ತಮ ನಿವಾಸದಲ್ಲೇ ಮೃತಪಟ್ಟಿದ್ದು, ಇಂದು ಅವರ ಅಂತ್ಯಕ್ರಿಯೆಯು ಪಾಂಡವಪುರ ತಾಲ್ಲೂಕಿನ ಸಿಂಗ್ರೀಗೌಡನಕೊಪ್ಪಲಿನಲ್ಲಿ ನೆರವೇರಿದೆ.
ತಿಥಿ ಚಿತ್ರದಲ್ಲಿ ನಟಿಸಿದ್ದ ಹಿರಿಯ ಜೀವ ಗಡ್ಡಪ್ಪ (ಚನ್ನೇಗೌಡ) ಅವರು ನವೆಂಬರ್ 12 ರಂದು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದು, ಈಗ ಸಿಂಗ್ರಿಗೌಡ ಸಹ ನಿಧನರಾಗಿದ್ದು, ತಿಥಿ ಸಿನಿಮಾದ ಇಬ್ಬರು ಹಿರಿಯ ನಟರನ್ನು ಚಿತ್ರರಂಗ ಕಳೆದುಕೊಂಡಂತಾಗಿದೆ.
ರಾಮ್ ರೆಡ್ಡಿ ನಿರ್ದೇಶಿಸಿದ್ದ ತಿಥಿ ಸಿನಿಮಾದಲ್ಲಿ ತಂದೆ ಹಾಗೂ ಮಗನ ಪಾತ್ರದಲ್ಲಿ ಸೆಂಚುರಿಗೌಡ (ಸಿಂಗ್ರಿಗೌಡ) ಹಾಗೂ ಗಡ್ಡಪ್ಪ (ಚನ್ನೇಗೌಡ) ಅವರ ನಟನೆಯನ್ನು ಬಾಲಿವುಡ್ ನ ಖ್ಯಾತ ನಟರಾದ ಅಮೀರ್ ಖಾನ್, ಅನುರಾಗ್ ಕಶ್ಯಪ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೆ ಅನೇಕ ಚಿತ್ರೋತ್ಸವದಲ್ಲಿ ಈ ಸಿನಿಮಾ ಪ್ರದರ್ಶನಗೊಂಡಿದ್ದಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದತ್ತು.
ತಿಥಿ ಸಿನಿಮಾದ ನಂತರ ಗಡ್ಡಪ್ಪ ಹಾಗೂ ಸೆಂಚುರಿಗೌಡ ಜೋಡಿಯು ಹಾಲುತುಪ್ಪ , ಚಿನ್ನದ ಗೊಂಬೆ, ಹಳ್ಳಿ ಪಂಚಾಯಿತಿ, ತರ್ಲೆ ವಿಲೇಜ್, ಗಡ್ಡಪ್ಪ ಸರ್ಕಲ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಪ್ರೇಕ್ಷಕರ ಮನರಂಜಿಸಿತ್ತು.
