ಬೆಂಗಳೂರು, ಫೆ.25- ಉದ್ಯಾನವನದಲ್ಲಿ ವಾಯುವಿಹಾರ ಮಾಡಲು ಮೈದಾನದಲ್ಲಿ ವ್ಯಾಯಾಮ ಮಾಡಲು ಇನ್ನು ಮುಂದೆ ಶುಲ್ಕ ಕಟ್ಟಬೇಕು. ನಿರ್ವಹಣಾ ವೆಚ್ಚ ಹೆಸರಿನಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸರ್ಕಾರಿ ಕ್ರೀಡಾಂಗಣದಲ್ಲಿ ಇನ್ಮುಂದೆ ಯಾವುದೇ ಕ್ರೀಡಾಪಟು ತರಬೇತಿ ಪಡೆ ಯಲು ಶುಲ್ಕ ಕಟ್ಟಬೇಕು. ಇದರಲ್ಲಿ ರಾಜ್ಯ, ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಕ್ರೀಡಾಪಟುಗಳು ಸಹ ಶುಲ್ಕ ಕಟ್ಟಲೇಬೇಕು.
ಇಡೀ ರಾಜ್ಯಾದ್ಯಂತ ಮಾ.1 ರಿಂದ ಜಾರಿಯಾಗಲಿದ್ದು, ವಿಶೇಷವಾಗಿ ಈಗ ತುಮಕೂರು ನಗರದ ಮಹಾತ್ಮಗಾಂಧಿ ಕ್ರೀಡಾಂಗಣವನ್ನು ವಿಶ್ವದರ್ಜೆ ಮಟ್ಟದಲ್ಲಿ ನಿರ್ಮಾಣ ಮಾಡಲಾಗಿದ್ದು ಇಲ್ಲಿ ತರಬೇತಿ ಪಡೆಯುವ ಪ್ರತಿಯೊಬ್ಬ ಕ್ರೀಡಾಪಟುಗಳು ಶುಲ್ಕ ಕಟ್ಟಬೇಕು. ಉದ್ಯಾನವನದಲ್ಲಿ ವಾಯುವಿಹಾರ ಮಾಡುವವರು ಮಾಸಿಕ 300 ರೂ. ಕೊಡಬೇಕು.
ಇದಲ್ಲದೇ ಉದ್ಯಾನವನ ಪ್ರದೇಶದ ಗುರುತಿನ ಚೀಟಿ ಪಡೆಯಲು ಸಹ 50 ರೂ. ನೀಡಬೇಕೆಂದು ತಿಳಿಸಲಾಗಿದೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ದಿನ ಮತ್ತು ಗಂಟೆ ಲೆಕ್ಕದಲ್ಲಿ ದರ ನಿಗದಿ ಮಾಡಲಾಗಿದ್ದು, ಇದು ಅವೈಜ್ಞಾನಿಕ ಮತ್ತು ಸಾರ್ವಜನಿಕ ತೆರಿಗೆ ಹಣದಿಂದಲೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಅಭಿವೃದ್ಧಿಗೊಳಿಸಿ ಈಗ ರಾಜ್ಯ ಸರ್ಕಾರ ಹೊಸ ರೀತಿಯ ತೆರಿಗೆಯನ್ನು ಜಾರಿಗೆ ತರುತ್ತಿದೆ ಎಂದು ದೂರಲಾಗಿದೆ.
ಪ್ರಸ್ತುತ ವಿಧಿಸಿರುವ ಶುಲ್ಕ ಹೀಗಿದೆ-
ವಾಯುವಿಹಾರ ಮಾಸಿಕ ರೂ. 300,
ಕ್ರೀಡಾಪಟುಗಳಿಗೆ ವಾರ್ಷಿಕ ರೂ.5 ಸಾವಿರ/ಮಾಸಿಕ ರೂ. 500
ಬ್ಯಾಡ್ಮಿಂಟನ್ ಅಂಕಣಕ್ಕೆ ಪ್ರತಿ ಗಂಟೆಗೆ ರೂ. 200
ವಾಲಿಬಾಲ್, ಖೋಖೋ ಅಂಕಣಕ್ಕೆ ಮಾಸಿಕ ರೂ. 500
ಅಥ್ಲೆಟಿಕೆ ಕ್ರೀಡಾಪಟುಗಳಿಗೆ ಮಾಸಿಕ ರೂ. 150
ಮಲ್ಟಿಜಿಮ್ ಮಾಸಿಕ ರೂ. 300
ಸದ್ಯಕ್ಕೀಗ ತುಮಕೂರಿನಲ್ಲಿ ಜಾರಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲೆಡೆ ಜಾರಿಯಾಗಲಿದೆಯೆಂದು ಹೇಳಲಾಗುತ್ತಿದೆ.