ಬೆಂಗಳೂರು, ಜೂ.23- ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆಗೆ ಗಣಿಗಾರಿಕೆ ನಡೆಸಲು ಬಳ್ಳಾರಿ ಬಳಿ ಮಂಜೂರು ಮಾಡಲಾಗಿದ್ದ 401 ಎಕರೆಯನ್ನು ಹಸ್ತಾಂತರಿಸುವುದನ್ನು ತಡೆಹಿಡಿಯಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಭೂಮಿ ನೀಡುವಂತೆ ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆ 2018 ರ ಮಾ. 16 ರಂದು ಮನವಿ ಸಲ್ಲಿಸಿತ್ತು. 2018 ರ ಜು. 27 ರಂದು ನೋಡೆಲ್ ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಿದ್ದರು. 2020 ರ ಫೆ.18 ರಂದು ಅರಣ್ಯ ಇಲಾಖೆ ಈ ವಿಚಾರವಾಗಿ ತನ್ನ ನಿಲುವನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂದರು.
ಸಲ್ಲಿಕೆಯಾದ ವರದಿಯಲ್ಲಿ ವಲಯ ಅರಣ್ಯಾಧಿಕಾರಿ, ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಹೆಚ್ಚುವರಿ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿದರೆ ನೈಸರ್ಗಿಕ ಕಾಡು ನಾಶವಾಗುತ್ತದೆ. ಜಲಮೂಲ ಹಾಗೂ ನೀರಿನ ಹರಿವಿಗೆ ಹಾನಿಯಾಗುವುದರಿಂದ ಗಣಿಗಾರಿಕೆಗೆ ಅನುಮೋದನೆ ನೀಡಬಾರದು ಎಂದು ನಿವೇದಿಸಿಕೊಂಡಿದ್ದಾರೆ ಎಂದು ಹೇಳಿದರು. ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಯವರು 2020ರ ಅ. 9 ರಂದು ಅರಣ್ಯಾಧಿಕಾರಿಗಳು ನೀಡಿದ ಅಭಿಪ್ರಾಯವನ್ನು ಬದಿಗೊತ್ತಿ ಮೊದಲ ಹಂತದ ಗಣಿಗಾರಿಕೆಗೆ ಅನುಮತಿ ನೀಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
2021 ಜೂ. 24 ರಂದು ಕೇಂದ್ರ ಸರ್ಕಾರ ಕೆಲ ಷರತ್ತುಗಳೊಂದಿಗೆ ಗಣಿಗಾರಿಕೆಗೆ ಪರವಾನಗಿಗೆ ಅನುಮತಿ ನೀಡಿದೆ. ಅದರ ಆಧಾರದ ಮೇಲೆ ನೈಜ್ಯ ಬೆಲೆ 32 ಕೋಟಿ ರೂ. ಹಾಗೂ ಪರಿಹಾರ ಕಾಮಗಾರಿಗಳಿಗೆ 147 ಕೋಟಿ ರೂ. ಸೇರಿ ಸರಿಸುಮಾರು 194 ಕೋಟಿ ರೂ.ಗಳನ್ನು ಪಾವತಿಸಲಾಗಿದೆ. ಈ ಹಣ ಕೇಂದ್ರ ಸರ್ಕಾರದ ಬಳಿ ಇರಲಿದ್ದು, ರಾಜ್ಯಕ್ಕೆ ಶೇ.90 ರಷ್ಟು ಪಾಲು ದೊರೆಯಲಿದೆ. ಇದರ ಬಳಿಕ 2ನೇ ಹಂತದ ಅನುಮತಿ ದೊರೆಯಲಿದೆ ಎಂದು ಹೇಳಿದರು.
ಕುದುರೆಮುಖ ಕಬ್ಬಿಣದ ಅದಿರು ಕಂಪನಿಯವರು ಹಿಂದೆ ಗಣಿಗಾರಿಕೆ ನಡೆಸುವ ವೇಳೆ ಅನೇಕ ಷರತ್ತುಗಳನ್ನು ಹಾಗೂ ಇತರ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇದಕ್ಕಾಗಿ ದಂಡ ವಿಧಿಸಲಾಗಿದೆ. ಕಂಪನಿ ಷರತ್ತುಗಳನ್ನು ಪೂರೈಸುವವರೆಗೂ ಕುದುರೆಮುಖ ಸಂಸ್ಥೆಗೆ ಗಣಿಗಾರಿಕೆ ನಡೆಸಲು 401 ಎಕರೆ ಭೂಮಿಯನ್ನು ಹಸ್ತಾಂತರಿಸಬಾರದು ಎಂದು ತಡೆಹಿಡಿದಿದ್ದೇನೆ ಎಂದರು.
ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆಯನ್ನು ಪುನಶ್ಚೇತನಗೊಳಿಸುವುದಾಗಿ ಹೇಳಿದರು. ಸಚಿವ ಈಶ್ವರ್ ಖಂಡ್ರೆಯವರ ಹೇಳಿಕೆ ಇದಕ್ಕೆ ಹಿನ್ನಡೆ ಉಂಟುಮಾಡಿದಂತಾಗಿದೆ.