ಬೆಂಗಳೂರು, ಜೂ.17- ಚಿತ್ರ ನಟ ದರ್ಶನ್ ಗ್ಯಾಂಗ್‌ನಿಂದ ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿಯ ಮೊಬೈಲ್ 10 ದಿನಗಳು ಕಳೆದರೂ ಪತ್ತೆಯಾಗಿಲ್ಲ. ಸುಮನಹಳ್ಳಿಯ ಮೋರಿಗೆ ಮೊಬೈಲ್ ಬಿಸಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಪೊಲೀಸರು ರಾಜಕಾಲುವೆಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ರೇಣುಕಾಸ್ವಾಮಿ ಅವರನ್ನು ಜೂ.8ರಂದು ಚಿತ್ರದುರ್ಗದಿಂದ ನಗರಕ್ಕೆ ಅಪಹರಿಸಿಕೊಂಡು ಕರೆ ತಂದಿದ್ದರು. ಅಂದು ಬೆಳಗ್ಗೆ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಮಧ್ಯಾಹ್ನದ ವೇಳೆಗೆ ಆರ್‌ಆರ್ ನಗರದಲ್ಲಿ ಮತ್ತೆ ಮೊಬೈಲ್ ಸ್ವಿಚ್ ಆನ್ ಮಾಡಲಾಗಿದೆ. ಸಂಜೆ ವೇಳೆಗೆ ಮತ್ತೆ ಮೊಬೈಲ್ ಸ್ವಿಚ್ ಆಗಿದೆ.
ಅದೇ ದಿನ ಶೆಡ್‌ಗೆ ಬಂದ ತಕ್ಷಣ ಆತನ ಮೊಬೈಲ್ ಕಿತ್ತುಕೊಂಡು ಪಟ್ಟಣಗೆರೆಯ ಶೆಡ್‌ನಲ್ಲಿ ಕೂಡಿ ಹಾಕಿ ಮನಸೋ ಇಚ್ಚೆ ದರ್ಶನ್ ಮತ್ತು ಆತನ ಗ್ಯಾಂಗ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿ ನಂತರ ಶವವನ್ನು ಸುಮನಹಳ್ಳಿಯ ರಾಜಕಾಲುವೆಗೆ ಎಸೆದಿದ್ದು, ಮೃತದೇಹ ಪತ್ತೆಯಾದ ಮಾರನೇ ದಿನದಿಂದಲೂ ರೇಣುಕಾಸ್ವಾಮಿ ಮೊಬೈಲ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ರೇಣುಕಾಸ್ವಾಮಿ ತನ್ನ ಮೊಬೈಲ್‌ನಿಂದ ಪವಿತ್ರಾ ಗೌಡಗೆ ಮೆಸೆಜ್ ಮಾಡಿರುವುದು ಹಾಗೂ ವಿಡಿಯೋ ಕಳಿಸಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಅಲ್ಲದೆ, ಪವಿತ್ರಾಗೌಡ ಸಹ ಆತನಿಗೆ ರಿಪ್ಲೈ ಮಾಡಿರುವ ಬಗ್ಗೆ ಮಾಹಿತಿ ಕಲೆಹಾಕಬಹುದಾಗಿದೆ. ಹಾಗಾಗಿ ಮೊಬೈಲ್ ದೊರೆತರೆ ಅದರಲ್ಲಿರುವ ಸಾಕ್ಷ್ಯಗಳನ್ನು ಸಂಗ್ರಹಿಸಲು ಪೊಲೀಸರಿಗೆ ನೆರವಾಗಲಿದೆ.
ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ನಂತರ ಆರೋಪಿಗಳು ಆತನ ಮೊಬೈಲ್‌ನಿಂದ ಸಿಮ್ ಬೇರ್ಪಡಿಸಿ ಮುರಿದು ಮೊಬೈಲ್ ಹಾಗೂ ಸಿಮ್‌ನ್ನು ಬೇರೆ ಬೇರೆ ಕಡೆ ಬಿಸಾಡಿದ್ದಾರೆ ಎಂಬುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಘಟನಾ ಸ್ಥಳದಲ್ಲಿ ಹಾಗೂ ಮೃತದೇಹ ದೊರೆತ ಸ್ಥಳ ಮಹಜರು ಮಾಡಿರುವ ಪೊಲೀಸರು ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.ಅಲ್ಲದೆ, ನಟ ದರ್ಶನ್ ಹಾಗೂ ಪವಿತ್ರಾಗೌಡ ಶೆಡ್‌ಗೆ ಬಂದಿದ್ದಾಗ ಧರಿಸಿದಂತಹ ಬಟ್ಟೆಗಳು ಹಾಗೂ ಇನ್ನಿತರ ಸಾಮಗ್ರಿಗಳನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ.ಒಟ್ಟಾರೆ ರೇಣುಕಾಸ್ವಾಮಿ ಮೊಬೈಲ್ ಪತ್ತೆಯಾದರೆ ಇನ್ನಷ್ಟು ಸಾಕ್ಷ್ಯಗಳು ಲಭ್ಯವಾಗಲಿದ್ದು, ತನಿಖೆಗೆ ನೆರವಾಗಲಿದೆ.