ಬೆಂಗಳೂರು,ಜು.13– ಇಡಿ ಬಲೆಗೆ ಬಿದ್ದಿರುವ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೂ ಜೈಲು ವಾಸ ಇಲ್ಲವೇ ಕೇಂದ್ರೀಯ ತನಿಖಾ ಸಂಸ್ಥೆಗಳ ವಿಚಾರಣೆ ಹೊಸತೇನಲ್ಲ..! ಏಕೆಂದರೆ ಈ ಹಿಂದೆಯೂ ಆಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ನಾಗೇಂದ್ರ ಶ್ರೀಕೃಷ್ಣನ ಜನಸ್ಥಳವನ್ನು ದರ್ಶನ ಮಾಡಿದ್ದರು. ಈಗಲೂ ಅದರ ವಿಚಾರಣೆ ನಡೆಯುತ್ತಿದ್ದು, ಆರೋಪಿ ಸ್ಥಾನದಲ್ಲಿದ್ದಾರೆ.
ಸಿಬಿಐ ಸಲ್ಲಿಸಿದ್ದ ಚಾರ್ಜ್ ಶೀಟ್ ನಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಪ್ರಥಮ ಆರೋಪಿ ಎಂದು ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಕೂಡ್ಲಿಗೆ ಶಾಸಕರಾದ ನಾಗೇಂದ್ರ, ಕಾರವಾರದ ಶಾಸಕ ಸತೀಶ್ ಸೈಲ್, ಕಂಪ್ಲಿ ಶಾಸಕ ಸುರೇಶ್‌ಬಾಬು, ವಿಜಯನಗರ ಶಾಸಕ (ಆಗ ಹೊಸಪೇಟೆ) ಆನಂದ್‌ಸಿಂಗ್ ವಿರುದ್ಧವೂ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. 2013ರಲ್ಲಿ ನಾಗೇಂದ್ರ ಅವರ ಬಂಧನವಾಗಿತ್ತು.
ಆನಂತರ, 2014ರ ಡಿಸೆಂಬರ್ ನಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ಜಾಮೀನಿನ ಆಧಾರದ ಮೇಲೆ ಬುಧವಾರ ನಾಗೇಂದ್ರ ಜೈಲಿಂದ ಬಿಡುಗಡೆಯಾದರು.ಆದರೆ, 2015ರಲ್ಲಿ ಎರಡು ಬಾರಿ ಅವರ ಬಂಧನವಾಗಿತ್ತು.
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡ್ಲಿಗಿ ಶಾಸಕ ನಾಗೇಂದ್ರ ಅವರನ್ನು ಲೋಕಾಯುಕ್ತ ವಿಶೇಷ ತನಿಖಾ ದಳ ಮಾ. 20ರಂದು ಬಂಧಿಸಲಾಗಿತ್ತು. ಅದರಿಂದ ಜಾಮೀನು ಪಡೆದ ನಂತರ ಜೂ.4ರಂದು ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಅವರನ್ನು ಸಿಬಿಐ ಅಧಿಕಾರಿಗಳು ಮತ್ತೆ ಬಂಧಿಸಿದ್ದರು.
ಆಗ, ನಾಗೇಂದ್ರ ಸೇರಿದಂತೆ 7 ಜನರನ್ನು ಸಿಬಿಐ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದರು. ಎಲ್ಲರನ್ನೂ ಜೂ.8ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆನಂತರ ಅದರಲ್ಲೂ ಜಾಮೀನು ಪಡೆದಿದ್ದ ನಾಗೇಂದ್ರ ಹೊರಬಂದಿದ್ದರು. ಆಗಿನ ಲೋಕಾಯುಕ್ತರಾಗಿದ್ದ ನ್ಯಾ.ಸಂತೋಷ್ ಹೆಗ್ಡೆ ನೇತೃತ್ವದಲ್ಲಿ ನಡೆದಿದ್ದ ಆ ಅಕ್ರಮದ ತನಿಖೆಯಲ್ಲಿ ಮೊದಲ ಹೆಸರು ಕೇಳಿಬಂದಿದ್ದು ಈಗಿನ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರದ್ದು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಬೇಲೇಕೇರಿಯಿಂದ ಸಾವಿರಾರು ಮೆಟ್ರಿಕ್ ಟನ್ ನಷ್ಟು ಅದಿರು ನಾಪತ್ತೆಯಾದ ಪ್ರಕರಣ. ಕಬ್ಬಿಣದ ಅದಿರನ್ನು ಬಳ್ಳಾರಿಯಿಂದ ಉತ್ತರ ಕನ್ನಡದ ಬೇಲೇಕೇರಿ ಬಂದರಿಗೆ ಅಕ್ರಮವಾಗಿ ಸಾಗಿಸಿ, ವಿದೇಶಕ್ಕೆ ಕಳ್ಳ ಸಾಗಣಿಕೆ ಮಾಡುತ್ತಿದ್ದ ಪ್ರಕರಣವನ್ನು ನಿಷ್ಟುರ ತನಿಖೆಗೊಳಪಡಿಸಿದ್ದರು. ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅವರು ಸರಕಾರಕ್ಕೆ ವರದಿ ಕೊಟ್ಟಾಗ ರಾಜಕೀಯ ಎದ್ದು ಅಲ್ಲೋಲ ಕಲ್ಲೋಲ ಉಂಟು ಮಾಡಿತ್ತು.
ಆಗ ದೊಡ್ಡ ಕಂಪನಿಯಿಂದ ಲಂಚ ಪಡೆದು ಅಕ್ರಮವಾಗಿ ಅದಿರು ಸಾಗಾಣಿಕೆಗೆ ಅವಕಾಶಕೊಟ್ಟ ಆರೋಪದ ಮೇಲೆ ದೊಡ್ಡ-ದೊಡ್ಡ ಅಧಿಕಾರಿಗಳೇ ಜೈಲು ಪಾಲಾಗಿದ್ದರು. ಆದರೆ ತನಿಖೆಯ ಅಂಗವಾಗಿ ಬೇಲೇಕೇರಿ ಬಂದರಿನಲ್ಲಿದ್ದ 8.50 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರಿಗೆ ಹೊದಿಕೆ ಹೊದಿಸಿ, ಅದನ್ನು ಸೀಝ್ ಮಾಡಲಾಗಿತ್ತು. ಆದರೂ ಅಷ್ಟೂ ಅದಿರು ಅಲ್ಲಿಂದ ನಾಪತ್ತೆಯಾಗಿತ್ತು.
ಬೇಲೇಕೇರಿ ಬಂದರಿಗೆ ಅದಿರು ಕಳ್ಳ ಸಾಗಾಣಿಕೆಯಾಗಿರುವುದನ್ನು ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದ ಸಿಇಸಿ, ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು. ಅದಾನಿ ಕಂಪನಿ ವಿರುದ್ಧವು ತನಿಖೆ ಮಾಡುವಂತೆ ತಿಳಿಸಿತ್ತು.
ಈ ಹಿನ್ನೆಲೆಯಲ್ಲಿ ಸಿಬಿಐ ತಂಡ ಆಗ, ಚೆನ್ನೈನಲ್ಲಿ ಈ ಕುರಿತಂತೆ ಪ್ರಕರಣ ದಾಖಲಿಸಿತ್ತು. ಆ ಪ್ರಕರಣದಲ್ಲಿ ಆರೋಪಿಗಳಾಗಿದ್ದವರಲ್ಲಿ ಬಿ.ನಾಗೇಂದ್ರ ಕೂಡ ಒಬ್ಬರು. ಆಗ ಅವರು ಕೂಡ್ಲಿಗಿಯ ಬಿಜೆಪಿ ಶಾಸಕರಾಗಿದ್ದರು.