ಪಾಟ್ನಾ, ಮೇ 18– ಒಂದು ಕಾಲದಲ್ಲಿ ಬಿಹಾರದ ಮುಖ್ಯಮಂತ್ರಿ ಮಂತ್ರಿ ನಿತೀಶ್ ಕುಮಾರ್ ಅವರಿಗೆ ಅತ್ಯಾಪ್ತರಾಗಿದ್ದ ಕೇಂದ್ರದ ಮಾಜಿ ಸಚಿವ ಆರ್‌ಸಿಪಿ ಸಿಂಗ್ ತಮ್ಮ ಸ್ವಂತ ಪಕ್ಷವನ್ನು ಪ್ರಶಾಂತ್ ಕಿಶೋರ್ ಅವರ ಪಕ್ಷದ ಜೊತೆ ವಿಲೀನ ಮಾಡಿದ್ದಾರೆ.
ಈ ವರ್ಷದ ಕೊನೆಯಲ್ಲಿ ಬಿಹಾರ ವಿಧಾನಸಭಾ ಸಭೆಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಹಾರದ ಬೆಳವಣಿಗೆಗಳು ಗಮನ ಸೆಳೆದಿವೆ. ಬಿಹಾರದಲ್ಲಿ ಪ್ರಶಾಂತ್ ಕಿಶೋರ್ ಜನ್ ಸುರಾಜ್ ಪಕ್ಷ ಸ್ಥಾಪಿಸಿ ಸಂಚಲನ ಮೂಡಿಸುತ್ತಿದ್ದಾರೆ. ಈಗ ಅವರೊಂದಿಗೆ ಮಾಜಿ ಕೇಂದ್ರ ಸಚಿವ ಆರ್‌ಸಿಪಿ ಕೈ ಜೋಡಿಸಿದ್ದಾರೆ.
ಸಿಂಗ್ ತಮ್ಮ ಆಪ್ ಸಬ್ ಕಿ ಅವಾಝ್ ಪಕ್ಷವನ್ನು ಜನ್ ಸುರಾಜ್ ಪಕ್ಷದೊಂದಿಗೆ ವಿಲೀನಗೊಳಿಸುವುದಾಗಿ ಘೋಷಿಸಿದ್ದಾರೆ. ಸಿಂಗ್ ಅಧಿಕಾರಿಯಾಗಿದ್ದರು, ರಾಜಕಾರಣಿಯಾಗಿ ಬದಲಾಗಿ 2024 ರ ನವೆಂಬರ್‌ನಲ್ಲಿ ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಿದ್ದರು. ಬಿಹಾರವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡಲು ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಸಿಂಗ್ ಇಲ್ಲಿ ನಡೆದ ಸಮಾರಂಭದಲ್ಲಿ ಘೋಷಿಸಿದರು.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ತವರೂ ನಳಂದ ಮೂಲದವರಾದ ಸಿಂಗ್, ಉತ್ತರ ಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದರು. ಕೇಂದ್ರ ನಿಯೋಜನೆಯಲ್ಲಿದ್ದಾಗ, 1999ರಲ್ಲಿ ಜೆಡಿ(ಯು) ಮುಖ್ಯಸ್ಥರೂ ಆಗಿದ್ದ ಆಗಿನ ರೈಲ್ವೆ ಸಚಿವ ನಿತೀಶ್ ಕುಮಾರ್ ಅವರನ್ನು ಮೊದಲು ಸಂಪರ್ಕಿಸಿದರು. 2005ರಲ್ಲಿ ಬಿಹಾರಕ್ಕೆ ನಿತೀಶ್ ಕುಮಾರ್ ಮುಖ್ಯಮಂತ್ರಿಯಾದಾಗ ಸಿಂಗ್ ಅವರ ಆಡಳಿತಾತ್ಮಕ ಕುಶಾಗ್ರಮತಿಯಿಂದ ಪ್ರಭಾವಿತರಾಗಿ ಬಿಹಾರ ರಾಜಕಾರಣಕ್ಕೆ ಬರಲು ಮನವೊಲಿಸಿದರು. ಅದರಂತೆ 2010 ರಲ್ಲಿ, ಸಿಂಗ್ ಸ್ವಯಂಪ್ರೇರಿತ ನಿವೃತ್ತಿ ಪಡೆದು ಜೆಡಿ(ಯು) ಸೇರಿದರು.
ರಾಜ್ಯ ಸಭೆಯಲ್ಲಿ ಸತತ ಎರಡು ಅವಧಿಗಳಿಗೆ ಆಯ್ಕೆಯಾಗಿದ್ದರು. ಜೆಡಿ(ಯು) ರಾಷ್ಟ್ರೀಯ ಅಧ್ಯಕ್ಷರನ್ನಾಗಿಯೂ ಕೆಲಸ ಮಾಡಿದ್ದರು. 2021 ರಲ್ಲಿ ಕೇಂದ್ರ ಸಚಿವ ಸಂಪುಟಕ್ಕೆ ಅವರ ಸೇರ್ಪಡೆ ನಿತೀಶ್ ಅವರಿಗೆ ಇಷ್ಟವಾಗಲಿಲ್ಲ. ಅದರಿಂದಾಗಿ ಜೆಡಿ(ಯು) ನ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕಾಯಿತು.
ಒಂದು ವರ್ಷದ ನಂತರ ಮತ್ತೊಂದು ಅವಧಿಯ ರಾಜ್ಯ ಸಭಾ ಅವಧಿಗೆ ಸಿಂಗ್ ರನ್ನು ಆಯ್ಕೆ ಮಾಡಲಿಲ್ಲ. ನಂತರದ ಬೆಳಣಿಗೆಯಲ್ಲಿ ಜೆಡಿ(ಯು) ತೊರೆದ ಸಿಂಗ್ 2023 ರಲ್ಲಿ ಬಿಜೆಪಿ ಸೇರಿದರು. ಅಲ್ಲಿಂದಲೂ ಹೊರ ಬಂದು ಸ್ವಂತ ಪಕ್ಷ ಕಟ್ಟಿದ್ದರು.