ಬೆಂಗಳೂರು,ಮೇ 2- ಎಸ್ ಎಸ್ ಎಲ್ ಸಿ ಪರೀಕ್ಷೆ-1ರಲ್ಲಿ ವಿಫಲರಾದ ವಿದ್ಯಾರ್ಥಿಗಳಿಗಾಗಿ ನಡೆಯುವ ಪರೀಕ್ಷೆ-2 ಮತ್ತು 3ರ ದಿನಾಂಕವನ್ನು ಶಾಲಾ ಶಿಕ್ಷಣ ಹಾಗೂ ಸಾಕ್ಷಾರತಾ ಸಚಿವ ಮಧುಬಂಗಾರಪ್ಪ ಘೋಷಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಅವರು ಪರೀಕ್ಷೆ-2 ಮೇ 26ರಂದು ಜೂ.2ರ ನಡುವೆ ನಡೆಯಲಿದೆ.
ಪರೀಕ್ಷೆ-3 ಜೂನ್ 23ರಿಂದ 30ರವರೆಗೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಫಲಿತಾಂಶ ಪಡೆದಿರುವ ಮತ್ತು ಫಲಿತಾಂಶ ಉತ್ತಮಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳು ಮೇ 3ರಿಂದ 10ರೊಳಗೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಉತ್ತರಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಆನ್‌ಲೈನ್ ಮೂಲಕ ಮೇ2ರಿಂದ 7ರ ನಡುವೆ ಅರ್ಜಿ ಸಲ್ಲಿಸಬೇಕು. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯ ಇಲ್ಲದವರು, ಆನ್‌ಲೈನ್‌ನಲ್ಲಿ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಅರ್ಜಿ ಸಲ್ಲಿಸಿದ ನಂತರ ಆಫ್‌ಲೈನ್ ಚಲನ್ ಡೌನ್‌ಲೋಡ್ ಮಾಡಿಕೊಂಡು ಬ್ಯಾಂಕ್ ಮೂಲಕ ಶುಲ್ಕ ಪಾವತಿಸಲು ಮೇ 2ರಿಂದ 8ವರೆಗೂ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಉತ್ತರಪತ್ರಿಕೆಗಳ ಮರು ಎಣಿಕೆ ಮತ್ತು ಮರು ಮೌಲ್ಯಮಾಪನಕ್ಕೆ ಆನ್‌ಲೈನ್ ಅರ್ಜಿ ಸಲ್ಲಿಸಲು ಮೇ 4ರಿಂದ 11ರವರೆಗೆ ಅರ್ಜಿ ಸಲ್ಲಿಸಬಹುದು. ಆಫ್‌ಲೈನ್‌ನಲ್ಲಿ ಶುಲ್ಕ ಪಾವತಿಸುವವರಿಗೆ ಮೇ 12ರವರೆಗೂ ಕಾಲಾವಕಾಶವಿದೆ.
ಈ ಬಾರಿ ಆ್ಯಪ್‌ನ್ನು ರೂಪಿಸಲಾಗಿದ್ದು, ಆನ್‌ಲೈನ್ ಮೂಲಕವೇ ಎಲ್ಲಾ ರೀತಿಯ ಪ್ರಕ್ರಿಯೆಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ವಿವರಿಸಿದರು.