ಬೆಳ್ತಂಗಡಿ, ಆ.10– ಧರ್ಮಸ್ಥಳ ಗ್ರಾಮದ ಪಾಂಗಳ ಕ್ರಾಸ್ ನಲ್ಲಿ ಆ.6 ರಂದು ಸಂಜೆ ಯೂಟ್ಯೂಬರ್ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸರು ನಿನ್ನೆ ಧರ್ಮಸ್ಥಳ ನಿವಾಸಿಗಳಾದ ಪದಪ್ರಸಾದ್, ಸುಹಾಸ್, ಗುರುಪ್ರಸಾದ್, ಶಶಿಕುಮಾರ್, ಕಲಂದರ್ ಮತ್ತು ಚೇತನ್ ಅವರುಗಳನ್ನು ಬಂಧಿಸಿ, ಬೆಳ್ತಂಗಡಿ ನ್ಯಾಯಾಧೀಶರ ಮನೆಯಲ್ಲಿ ಹಾಜರುಪಡಿಸಿದರು.
ನ್ಯಾಯಾಧೀಶರು 6 ಮಂದಿಗೂ ಮಧ್ಯಂತರ ಜಾಮೀನು ಮಂಜೂರು ಮಾಡಿ, ಎಲ್ಲರೂ ನಾಳೆ(ಆ.11) ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.
ಎರಡು ಗುಂಪುಗಳು ಅಕ್ರಮ ಕೂಟ ಸೇರಿ ಗಲಾಟೆ ಮಾಡಿದ ಸಂಬಂಧ ಧರ್ಮಸ್ಥಳ ಠಾಣೆಯ ಸಬ್ ಇನ್‌್ಸಪೆಕ್ಟರ್ ಸಮರ್ಥ ಆರ್. ಗಾಣಿಗೇರ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸುಮೊಟೋ ಪ್ರಕರಣಗಳನ್ನು ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.
ನಾಳೆಯಿಂದ ಮತ್ತೆ ಉತ್ಖನನ
ಬೆಂಗಳೂರು, ಆ.10- ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶವಗಳನ್ನು ಹೂತಿಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಸೋಮವಾರ ಮತ್ತೆ ಉತ್ಖನನ ಆರಂಭಿಸಲಿದೆ.
ಇಂದು ಭಾನುವಾರ. ಆದ್ದರಿಂದ ಎಸ್‌ಐಟಿ ಉತ್ಖನನ ಕಾರ್ಯವನ್ನು ಸ್ಥಗಿತಗೊಳಿಸಿದೆ. ಕಳೆದ 11 ದಿನಗಳಿಂದ ದೂರುದಾರ ತೋರಿಸಿದ ಸುಮಾರು 16 ಸ್ಥಳಗಳಲ್ಲಿ ಉತ್ಖನನ ನಡೆಸಿದರೂ ಯಾವುದೇ ಮಹತ್ವದ ಕುರುಹುಗಳು ಎಸ್‌ಐಟಿಗೆ ಲಭ್ಯವಾಗಿಲ್ಲ.
ನಿನ್ನೆ ಧರ್ಮಸ್ಥಳದ ಬಾಹುಬಲಿ ಬೆಟ್ಟದ ಪಕ್ಕದಲ್ಲಿ ದೂರುದಾರ ತೋರಿಸಿದ 16ನೆ ಸ್ಥಳದಲ್ಲಿ ಉತ್ಖನನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆರನೆ ಜಾಗದಲ್ಲಿ ದೊರೆತಿರುವ ಅಸ್ಥಿಪಂಜರದ ಮೂಳೆಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಅವುಗಳ ತನಿಖೆ ನಡೆಯುತ್ತಿದೆ.
ದೂರುದಾರ ದಿನಕ್ಕೊಂದು ಜಾಗ ತೋರಿಸುತ್ತಿರುವುದು ಎಸ್‌ಐಟಿಗೆ ತಲೆನೋವಾಗಿ ಪರಿಣಮಿಸಿದೆ. 11 ದಿನಗಳ ಉತ್ಖನನ ವೇಳೆ ನಿಖರವಾದ ಯಾವುದೇ ಪುರಾವೆಗಳು ಲಭ್ಯವಾಗಿಲ್ಲದ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಡಿಜಿ ಪ್ರಣವ್ ಮೊಹಾಂತಿ ಅವರ ನೇತೃತ್ವದಲ್ಲಿ ಸಭೆ ಸೇರಿ ಚರ್ಚೆ ಸಹ ನಡೆಸಿದ್ದಾರೆ.