ಬೆಂಗಳೂರು,ಜ.24- ರಾಜ್ಯ ಬಿಜೆಪಿಯಲ್ಲೂ ಬಣ ಬಡಿದಾಟ ತಾರಕಕ್ಕೇರಿರುವ ಬೆನ್ನಲ್ಲೇ ಬಿ.ವೈ.ವಿಜಯೇಂದ್ರ ದಿಢೀರನೆ ದೆಹಲಿಗೆ ಪ್ರಯಾಣ ಬೆಳೆಸಿರುವುದು ಕುತೂಹಲ ಕೆರಳಿಸಿದೆ. ಇಂದು ಬೆಳಗ್ಗೆ ನವದೆಹಲಿಗೆ ತೆರಳಿರುವ ವಿಜಯೇಂದ್ರ ಅವರು ಪಕ್ಷದ ಕೆಲವು ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿಯ ಪರಮಾಪ್ತರಾಗಿದ್ದ ಮಾಜಿ ಸಚಿವರಾದ ಜರ್ನಾದನ ರೆಡ್ಡಿ, ಶ್ರೀರಾಮುಲು ನಡುವಿನ ಹಾದಿಬೀದಿ ಜಗಳ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಬೀದಿ ರಂಪಾಟದ ನಡುವೆ ವಿಜಯೇಂದ್ರ ದಿಢೀರನೆ ದೆಹಲಿಗೆ ತೆರಳಿರುವುದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.
ದೆಹಲಿ ಪ್ರಯಾಣದ ಬಗ್ಗೆ ಗುಟ್ಟನ್ನು ಎಲ್ಲಿಯೂ ರಟ್ಟು ಮಾಡದಿರುವ ವಿಜಯೇಂದ್ರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತಿತರರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕೆಂದು ಒಂದು ಬಣ ಪಟ್ಟು ಹಿಡಿದಿದೆ. ಇದರ ನಡುವೆ ಜಿಲ್ಲಾಧ್ಯಕ್ಷರ ನೇಮಕಾತಿ, ಪದಾಧಿಕಾರಿಗಳ ನೇಮಕ ಸೇರಿದಂತೆ ಮತ್ತಿತರ ವಿಚಾರಗಳ ಬಗ್ಗೆ ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಬಸನಗೌಡ ಪಾಟೀಲ್ ಯತ್ನಾಳ್ ಬಣದಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸುಳಿವು ನೀಡಿದ್ದಾರೆ. ಆದರೆ ವಿಜಯೇಂದ್ರ ಅವಿರೋಧವಾಗಿ ಅಯ್ಕೆಯಾಗಲು ರಣತಂತ್ರ ರೂಪಿಸಿದ್ದಾರೆ. ಈ ಬೆಳವಣಿಗೆಗಳ ನಡುವೆಯೇ ವಿಜಯೇಂದ್ರ ದೆಹಲಿಗೆ ದೌಡಾಯಿಸಿರುವುದು ನಾನಾ ವ್ಯಾಖ್ಯಾನಗಳನ್ನು ಸೃಷ್ಟಿ ಮಾಡಿದೆ.