ಬೆಂಗಳೂರು,ಸೆ.17– ರಾಜ್ಯದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಪರಭಾಷಿಗರ ಹಾವಳಿ ಮಿತಿಮೀರಿದೆ. ಖಾಸಗಿ ಶಾಲೆಗಳು ಕನ್ನಡ ಶತ್ರುಗಳು, ಕನ್ನಡಿಗರನ್ನು ಹೀನಾಯವಾಗಿ ಕಾಣುತ್ತಿರುವ ಧೋರಣೆ ಅತ್ಯಂತ ಖಂಡನೀಯ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.
ಇಂಗ್ಲಿಷ್ ಮಾಧ್ಯಮ ಶಾಲೆಗಳು ಕನ್ನಡವನ್ನು ಅಪಮಾನ ಮಾಡುವುದಷ್ಟೇ ಅಲ್ಲ, ಕನ್ನಡಿಗರನ್ನು ನಿರಂತರವಾಗಿ ಲೂಟಿ ಮಾಡುತ್ತಿವೆ. ಸಿಂಧಿ ಶಾಲೆಯಲ್ಲಿ ಕನ್ನಡ ಮಾತನಾಡಿದವರಿಗೆ ದಂಡ ವಿಧಿಸುವ ಮೂಲಕ ಕನ್ನಡ ಭಾಷೆಗಷ್ಟೇ ಅಲ್ಲ, ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಇದು ತೀವ್ರ ಖಂಡನೀಯ. ಇದು ಒಂದು ಶಾಲೆಯ ಪರಿಸ್ಥಿತಿ ಅಲ್ಲ. ಬಹುತೇಕ ಶಾಲೆಗಳಲ್ಲಿ ಇದೇ ಪರಿಸ್ಥಿತಿ ಇದೆ. ಕನ್ನಡಕ್ಕೆ ರಕ್ಷಣೆ ಇಲ್ಲದಂತಾಗಿದೆ. ಕನ್ನಡ ಶಕ್ತಿಹೀನವಾಗುತ್ತಿದೆ. ಇದರ ವಿರುದ್ಧ ಕೆಲವು ಕನ್ನಡ ಹೋರಾಟಗಾರರು ದನಿ ಎತ್ತುವುದನ್ನು ಹೊರತುಪಡಿಸಿದರೆ ಬೇರೆ ಯಾರೂ ಕೂಡ ಹೋರಾಟ ಮಾಡುವುದಿಲ್ಲ. ಇದು ದುರದೃಷ್ಟಕರ ಎಂದರು.
ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಸರ್ಕಾರಿ ಶಾಲೆಗಳಿಗೆ ಅನುದಾನವಿಲ್ಲ. ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಕನ್ನಡವಿಲ್ಲ. ಹೀಗಾದರೆ ಕನ್ನಡ ಮಕ್ಕಳ ಪರಿಸ್ಥಿತಿ ಏನಾಗಬೇಕು? ಎಂದು ವಾಟಾಳ್ ಕಿಡಿಕಾರಿದರು.
ಕನ್ನಡದ ಬಗ್ಗೆ ಸಂಸತ್‌ನಲ್ಲಿ, ಶಾಸನ ಸಭೆಗಳಲ್ಲಿ ಹೋರಾಟ ಮಾಡದವರಿಂದ ಕನ್ನಡದ ಪರಿಸ್ಥಿತಿ ಕರುಣಾಜನಕವಾಗಿದೆ ಎಂದು ನೋವು ವ್ಯಕ್ತಪಡಿಸಿದರು.ಈ ಧೋರಣೆ ಮುಂದುವರೆದರೆ ನಾವು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.