Monday, March 31, 2025
Homeರಾಜಕೀಯ | Politicsರಾಜ್ಯ ರಾಜಕೀಯದಲ್ಲಿ ರೋಚಕ ಬೆಳವಣಿಗೆ, ಕುತೂಹಲ ಕೆರಳಿಸಿದ ಸತೀಶ್‌-ಎಚ್‌ಡಿಕೆ ಭೇಟಿ

ರಾಜ್ಯ ರಾಜಕೀಯದಲ್ಲಿ ರೋಚಕ ಬೆಳವಣಿಗೆ, ಕುತೂಹಲ ಕೆರಳಿಸಿದ ಸತೀಶ್‌-ಎಚ್‌ಡಿಕೆ ಭೇಟಿ

Exciting development in state politics, Satish-HDK meeting arouses curiosity

ಬೆಂಗಳೂರು,ಮಾ.26– ಹನಿಟ್ರ್ಯಾಪ್‌, ಫೋನ್‌ ಟ್ರ್ಯಾಪ್‌ಗಳ ಗೊಂದಲದ ನಡುವೆಯೇ ರಾಜ್ಯ ರಾಜಕೀ ಯದಲ್ಲಿ ಬಿರುಗಾಳಿ ಎಬ್ಬಿಸುವಂತಹ ಮತ್ತೊಂದು ಸುದ್ದಿ ಕೇಳಿಬಂದಿದ್ದು, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ , ರಾಜ್ಯ ಲೋಕೋಪಯೋಗಿ ಸಚಿವ ಹಾಗೂ ಸಿದ್ದರಾಮಯ್ಯನವರ ಆಪ್ತ ಸತೀಶ್‌ ಜಾರಕಿಹೊಳಿಯವರೊಂದಿಗೆ ಡಿನ್ನರ್‌ ಮೀಟಿಂಗ್‌ ನಡೆಸಿದ್ದಾರೆ.

ಕಾಂಗ್ರೆಸ್‌‍ ಒಳವಲಯದಲ್ಲೇ ಈವರೆಗೂ ನಡೆಯುತ್ತಿದ್ದ ಡಿನ್ನರ್‌ ಮೀಟಿಂಗ್‌ಗಳು ಸಾಕಷ್ಟು ಗೊಂದಲವನ್ನು ಹುಟ್ಟುಹಾಕಿದ್ದವು. ಹೈಕಮಾಂಡ್‌ ಅವುಗಳಿಗೆ ಬ್ರೇಕ್‌ ಹಾಕಿದ ತರುವಾಯ ಈಗ ಅನ್ಯಪಕ್ಷೀಯರ ಜೊತೆಯಲ್ಲೇ ಸಚಿವರು ಮೀಟಿಂಗ್‌ ನಡೆಸುತ್ತಿರುವುದು ಸರ್ಕಾರದ ಭವಿಷ್ಯದ ಕುರಿತು ಅನುಮಾನದ ಚರ್ಚೆಗಳನ್ನು ಹುಟ್ಟುಹಾಕಿದೆ.

ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಯ ಮಾನದಂಡದ ಪ್ರಕಾರ, ನವೆಂಬರ್‌ ವೇಳೆಗೆ ರಾಜ್ಯದಲ್ಲಿ ಬದಲಾವಣೆಯ ವದಂತಿಗಳಿದ್ದವು. ಅದಕ್ಕೂ ಮುನ್ನವೇ ಪ್ರಬಲ ಆಕಾಂಕ್ಷಿ ಡಿ.ಕೆ.ಶಿವಕುಮಾರ್‌ ಅವರ ಮೇಲೆ ಒಂದರ ಮೇಲೆ ಒಂದರಂತೆ ಆರೋಪಗಳು ಕೇಳಿಬರುತ್ತಿವೆ.

ಸಿದ್ದರಾಮಯ್ಯ ಅವರ ಬೆಂಬಲಿಗರಾಗಿರುವ ಸಚಿವ ಕೆ.ಎನ್‌.ರಾಜಣ್ಣ, ಸತೀಶ್‌ ಜಾರಕಿಹೊಳಿ, ಡಾ.ಜಿ.ಪರಮೇಶ್ವರ್‌, ಎಚ್‌.ಸಿ.ಮಹದೇವಪ್ಪ ಅವರುಗಳು ಮೇಲಿಂದ ಮೇಲೆ ಪ್ರತ್ಯೇಕ ಸಭೆ ನಡೆಸಿ ಉಪಮುಖ್ಯಮಂತ್ರಿ ಹೆಚ್ಚುವರಿ ಹುದ್ದೆಗಳ ಸೃಷ್ಟಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿದಂತೆ ಹಲವಾರು ವಿಚಾರಗಳ ಬಹಿರಂಗ ಚರ್ಚೆಗೆ ಪ್ರಸ್ತಾಪಿಸಿದ್ದರು. ಇವು ಸಾಕಷ್ಟು ವಿವಾದಗಳನ್ನೂ ಸೃಷ್ಟಿಸಿದ್ದವು.

ಇದಕ್ಕೆ ಪ್ರತಿಯಾಗಿ ಡಿ.ಕೆ.ಶಿವಕುಮಾರ್‌ರವರ ಬೆಂಬಲಿಗರು ಎರಡೂವರೆ ವರ್ಷದ ಬಳಿಕ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿಕೆ ನೀಡುವ ಮೂಲಕ ಕೌಂಟರ್‌ ನೀಡುತ್ತಿದ್ದರು.ಈ ಎಲ್ಲಾ ಚರ್ಚೆಗಳ ನಡುವೆಯೇ ಈಗ ದೆಹಲಿಯ ಡಿನ್ನರ್‌ ಮೀಟಿಂಗ್‌ ಭಾರಿ ಸಂಚಲನ ಮೂಡಿಸಿದೆ. ಈ ಮೊದಲು ಜೆಡಿಎಸ್‌‍, ಕಾಂಗ್ರೆಸ್‌‍ನ ಸಮಿಶ್ರ ಸರ್ಕಾರದ ಪತನಕ್ಕೆ ಬೆಳಗಾವಿಯೇ ಮೂಲ ಕಾರಣವಾಗಿತ್ತು. ಸತೀಶ್‌ ಜಾರಕಿಹೊಳಿಯವರ ಸಹೋದರ ರಮೇಶ್‌ ಜಾರಕಿಹೊಳಿ ಆಪರೇಷನ್‌ ಕಮಲದ ಮುನ್ನುಡಿ ಬರೆದರು. ಸರ್ಕಾರವನ್ನೇ ಬದಲಾಯಿಸಿದರು.

ಬೆಳಗಾವಿ ರಾಜ್ಯ ರಾಜಕಾರಣ ಕರ್ನಾಟಕದ ಮಟ್ಟಿಗೆ ಸದಾಕಾಲ ಸ್ಫೋಟಕ್ಕೂ ಮುನ್ನ ಅವಿತು ಕುಳಿತ ಜ್ವಾಲಾಮುಖಿಯಾಗಿರುತ್ತದೆ. ಸತೀಶ್‌ ಜಾರಕಿಹೊಳಿ ರಾಜ್ಯ ರಾಜಕಾರಣದಲ್ಲಿ ಸೈಲೆಂಟ್‌ ಕಿಲ್ಲರ್‌ ಎಂದೇ ಬಿಂಬಿಸಿಕೊಳ್ಳುತ್ತಾರೆ. ಅಪರೂಪಕ್ಕೊಮೆ ಮಾತನಾಡುವ ಸತೀಶ್‌ ಜಾರಕಿಹೊಳಿಯವರ ಹೇಳಿಕೆಯ ಹಿಂದೆ ನಾನಾ ರೀತಿಯ ಗೂಡಾರ್ಥಗಳಿರುತ್ತವೆ.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ಉಪಮುಖ್ಯಮಂತ್ರಿ ಹೆಚ್ಚುವರಿ ಹುದ್ದೆಗಳ ವಿಚಾರವಾಗಿ ಸತೀಶ್‌ ಜಾರಕಿಹೊಳಿ ತಣ್ಣಗೆ ಹೇಳಿಕೆಗಳನ್ನು ನೀಡುವ ಮೂಲಕ ರಾಜಕಾರಣವನ್ನು ಕಾವೇರಿಸಿದ್ದರು. ಹನಿಟ್ರ್ಯಾಪ್‌ ಪ್ರಕರಣ ಬಹಿರಂಗ ಚರ್ಚೆಗೆ ಬರಲು ಸತೀಶ್‌ ಜಾರಕಿಹೊಳಿಯವರ ಪ್ರಚೋದನೆಯೂ ಕಾರಣವಾಗಿತ್ತು.ಹನಿಟ್ರ್ಯಾಪ್‌ ಪ್ರಸ್ತಾಪವಾಗಿ ವಾತಾವರಣದಲ್ಲಿ ಸಂಚಲನ ಸೃಷ್ಟಿಯಾಗುತ್ತಿದ್ದಂತೆ ಕರ್ನಾಟಕ ಭವನ ನಿರ್ಮಾಣ ಕಾಮಗಾರಿಯ ಉಸ್ತುವಾರಿ ನೆಪದಲ್ಲಿ ಸತೀಶ್‌ ಜಾರಕಿಹೊಳಿ ದೆಹಲಿಗೆ ತೆರಳಿದ್ದರು.

ಅಲ್ಲಿ ಕಾಂಗ್ರೆಸ್‌‍ ವರೀಷ್ಠರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣದ ಸಂಪೂರ್ಣ ಚಿತ್ರಣ ಮುಂದಿಟ್ಟಿದ್ದರು. ಜೊತೆಗೆ ಕುಮಾರಸ್ವಾಮಿಯವರ ಜೊತೆ ಡಿನ್ನರ್‌ ಮೀಟಿಂಗ್‌ ನಡೆಸಿರುವುದು ಡಿ.ಕೆ.ಶಿವಕುಮಾರ್‌ಗಷ್ಟೇ ಅಲ್ಲ ಸಿದ್ದರಾಮಯ್ಯ ಬಣಕ್ಕೂ ಅಚ್ಚರಿ ಮೂಡಿಸಿದೆ.

ಔಪಚಾರಿಕ ಭೇಟಿ, ಇಲಾಖೆಯ ಕಾರ್ಯಕ್ರಮಗಳಿಗೆ ಬೆಂಬಲ ಸೇರಿದಂತೆ ನಾನಾ ಕಾರಣಗಳಿಗೆ ಡಿನ್ನರ್‌ ಮೀಟಿಂಗ್‌ ನಡೆದಿದೆ ಎಂದು ಹೇಳಲಾಗಿದೆಯಾದರೂ ಇದು ಭವಿಷ್ಯದಲ್ಲಿ ರಾಜಕೀಯ ವಿಪ್ಲವಗಳಿಗೆ ಮುನ್ನುಡಿಯಾಗಬಹುದು ಎಂಬ ಚರ್ಚೆಗಳು ತೀವ್ರವಾಗಿ ನಡೆಯುತ್ತಿವೆ. ಎಚ್‌.ಡಿ.ರೇವಣ್ಣ ಅಪೆಕ್ಸ್ ಬ್ಯಾಂಕ್‌ ಹಗರಣದಲ್ಲಿ ಕೆ.ಎನ್‌.ರಾಜಣ್ಣ ಅವರ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿದ್ದರು. ಸರ್ಕಾರ ರಚನೆಯಾದ ಬಳಿಕ ಹಾಸನ ಜಿಲ್ಲೆಯ ಉಸ್ತುವಾರಿಯಾದ ಕೆ.ಎನ್‌.ರಾಜಣ್ಣ ಅವರು ಎಚ್‌.ಡಿ.ರೇವಣ್ಣ ಅವರ ವಿರುದ್ಧ ಹಲವಾರು ಬಾರಿ ಬಹಿರಂಗ ಹೇಳಿಕೆಗಳನ್ನು ನೀಡಿದ್ದರು.

ಲೋಕಸಭಾ ಚುನಾವಣೆಯಲ್ಲಿ ಪೆನ್‌ಡ್ರೈವ್‌ ಹಗರಣವಾದಾಗ ತೆರೆಮರೆಯಲ್ಲಿ ಕೆಲಸ ಮಾಡಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು. ಇತ್ತ ರಾಜಣ್ಣ ಮತ್ತು ಸತೀಶ್‌ ಜಾರಕಿಹೊಳಿ ಒಂದೇ ಕಾರಣಕ್ಕಾಗಿ ಪದೇಪದೇ ಭೇಟಿಯಾಗಿ ಚರ್ಚೆ ಮಾಡುತ್ತಿದ್ದಾರೆ. ಅತ್ತ ಎಚ್‌.ಡಿ.ರೇವಣ್ಣ ಮತ್ತು ಎಚ್‌.ಡಿ.ಕುಮಾರಸ್ವಾಮಿ ಸಹೋದರರು ರಾಜ್ಯಸರ್ಕಾರದ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲಾ ಮುಗಿ ಬೀಳುತ್ತಿದ್ದಾರೆ.

ರಾಜಕೀಯದಲ್ಲಿ ಯಾರೂ ಸ್ನೇಹಿತರಲ್ಲ, ಯಾರೂ ವೈರಿಗಳೂ ಅಲ್ಲ ಎಂಬ ಆಡುಮಾತು ಪದೇಪದೇ ನಿಜವಾಗುತ್ತಿದೆ.ವೈರುಧ್ಯ ದಿಕ್ಕಿನಲ್ಲಿರುವ ನಾಯಕರು ಯಾವ ಕಾರಣಕ್ಕೆ, ಎಲ್ಲಿ, ಹೇಗೆ ಒಂದಾಗುತ್ತಾರೆ ಎಂಬುದು ಹಲವಾರು ಬಾರಿ ಪ್ರಶ್ನೆಯಾಗಿವೆ. ಪ್ರಸ್ತುತ ರಾಜಕೀಯದಲ್ಲೂ ಅದೇ ರೀತಿಯ ವಾತಾವರಣ ಕಂಡುಬರುತ್ತಿದೆ.

RELATED ARTICLES

Latest News