ಬೆಂಗಳೂರು,ಆ.31– ಕೋವಿಡ್ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆಗೆ ಸಂಬಂಧಿಸಿದಂತೆ ರಚಿಸಲಾಗಿರುವ ತನಿಖಾ ಆಯೋಗದ ಅವಧಿಯನ್ನು ಆರು ತಿಂಗಳು ವಿಸ್ತರಣೆ ಮಾಡಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯೋಗದ ಕೋರಿಕೆ ಮೇರೆಗೆ ಇನ್ನು ಆರು ತಿಂಗಳು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿನ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡಲು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹ ಅವರ ನೇತೃತ್ವದ ತನಿಖಾ ಆಯೋಗ ರಚಿಸಲಾಗಿತ್ತು.
ಆಯೋಗವು ಮಧ್ಯಂತರ ವರದಿಯನ್ನು ನೀಡಬಹುದಷ್ಟೆ. ಆದರೆ ಪೂರ್ಣ ಪ್ರಮಾಣದ ವರದಿ ನೀಡಲು ಇನ್ನು ಸಮಯ ಅವಕಾಶವಿದೆ ಎಂದು ಹೇಳಿದರು.ಬಳ್ಳಾರಿ ಜೈಲಿನಲ್ಲಿರುವ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಅವರನ್ನು ಮೊದಲ ಅಥವಾ 2ನೇ ಆರೋಪಿ ಮಾಡಬೇಕೆಂಬುದನ್ನು ತನಿಖಾ ಅಧಿಕಾರಿಗಳು ನಿರ್ಧರಿಸುತ್ತಾರೆ. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಫೋನ್ ಕಾಲ್, ವಿಡಿಯೋ ಕಾಲ್ ಮಾಡಿರುವ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ.
ಈ ಬಗ್ಗೆ ತನಿಖೆ ನಡೆಸಲು ಸಿಸಿಬಿ ಮುಖ್ಯಸ್ಥರಾದ ಚಂದ್ರಗುಪ್ತ ಅವರನ್ನು ನೇಮಕ ಮಾಡಲಾಗಿದೆ. ತನಿಖೆ ನಡೆಸಿ ಅವರು ವರದಿ ನೀಡಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮುಡಾ ನಿವೇಶನ ಪಡೆಯಲು ಪ್ರಭಾವ ಬೀರಿರುವ ಆರೋಪ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಈಗಾಗಲೇ ನಾವೆಲ್ಲ ಹೇಳಿದ್ದೇವೆ. ಹೀಗಾಗಿ ಊಹಾಪೋಹಕ್ಕೆ ಅವಕಾಶವಿಲ್ಲ ಎಂದು ಅವರು ತಿಳಿಸಿದರು.