ಹುಬ್ಬಳ್ಳಿ , ಜೂ.2- ನೇಹಾ ಹಿರೇಮಠ ಕೊಲೆ ಪ್ರಕರಣ ದೇಶದ್ಯಂತ ಸಾಕಷ್ಟು ಸದ್ದು ಮಾಡಿತ್ತು. ಈ ಕೊಲೆ ಪ್ರಕರಣ ತನಿಖೆಯನ್ನು ಸಿಐಡಿ ನಡೆಸುತ್ತಿರುವಾಗಲೇ ಮತ್ತೊಂದು ಆರೋಪವನ್ನು ದಲಿತ ಸಂಘಟನೆಗಳು ಹೊರ ಹಾಕಿವೆ. ನಿರಂಜನ ಹಿರೇಮಠ ಅವರ ಮಗಳು ನೇಹಾ ಹೆಸರಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ದಾಖಲೆ ಸೃಷ್ಟಿ ಮಾಡಿದ್ದಾರೆ ಎಂದು ವಿವಿಧ ದಲಿತ ಸಂಘಟನೆಗಳು ಹಾಗೂ ಸಮತಾ ಸೇನೆ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಆರೋಪಿಸಿದ್ದು, ಈ ಬಗ್ಗೆ ಜಿಲ್ಲಾಡಳಿತ ಸೇರಿದಂತೆ ತಾಲ್ಲೂಕಾಡಳಿತಕ್ಕೂ ಸತ್ಯಾಸತ್ಯದ ಪರಿಶೀಲನೆಗೆ ಮನವಿ ಮಾಡಿದ್ದಾರೆ.
ದೂರಿನಲ್ಲಿ ಏನಿದೆ? :
ನೇಹಾ ಹಿರೇಮಠ ಹತ್ಯೆಯ ತನಿಖೆ ನಡೆದಿರುವಾಗಲೇ ಮತ್ತಷ್ಟು ಹೊಸ ವಿಷಯಗಳು ಹೊರಗೆ ಬರುತ್ತಿವೆ. ಪ್ರಬಲ ಲಿಂಗಾಯತ ಸಮಾಜದ ನಿರಂಜನ ಹಿರೇಮಠ ಮಗಳು ಬೇಡ ಜಂಗಮ ದಳ ಪರಿಶಿಷ್ಟ ಜಾತಿ (ಎಸ್ಸಿ) ಪ್ರಮಾಣ ಪತ್ರ ಪಡೆದಿದ್ದು, ಇದನ್ನು ರದ್ದು ಮಾಡಿ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಸಮತಾ ಸೇನಾ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳದಿಂದ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ (ಡಿಸಿಆರ್‌ಇ) ದೂರು ನೀಡಿದ್ದಾರೆ.
ನೇಹಾ ಹುಬ್ಬಳ್ಳಿಯ ರಹವಾಸಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ರೆ ಬೆಂಗಳೂರು ವಿಳಾಸ ತೋರಿಸಿ ಜಾತಿ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ. ಬೇಗೂರ ರೋಡ್ ಹೊಂಗಸಂದ್ರ ವಾರ್ಡ್ ನಂಬರ್ 135 ರಲ್ಲಿ ಬೇಡ ಜಂಗಮ ಸರ್ಟಿಫಿಕೇಟ್ ಪಡೆದುಕೊಂಡಿದ್ದು, ನೇಹಾ ಜಾತಿ ಸರ್ಟಿಫಿಕೇಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸರ್ಟಿಫಿಕೆಟ್ ನಕಲಿಯಾಗಿದೆ. ಇದರ ಸಮಗ್ರ ತನಿಖೆಯಾಗಬೇಕು. ನಿರಂಜನ ಹಿರೇಮಠ ರಾಜಕೀಯ ಲಾಭಕ್ಕಾಗಿ ಈ ಕೃತ್ಯ ಎಸಗಿರಬೇಕು ಎಂಬ ಅನುಮಾನವಿದ್ದು ಸಮಗ್ರ ತನಿಖೆಗೆ ಸಂಘಟನೆಗಳು ಒತ್ತಾಯಿಸಿವೆ.
ಆದರೆ ಈ ಆರೋಪವನ್ನು ನೇಹಾ ತಂದೆ ನಿರಂಜನ ಹಿರೇಮಠ ಅಲ್ಲಗಳೆದಿದ್ದಾರೆ. ನಾವು ಬೇಡ ಜಂಗಮ ಸರ್ಟಿಫಿಕೆಟ್ ಖೊಟ್ಟಿಯಾಗಿ ತಗೆದುಕೊಂಡಿಲ್ಲ. ಕಾನೂನುಬದ್ಧವಾಗಿ ತಗೆದುಕೊಳ್ಳಲಾಗಿದೆ. ಈ ಬಗ್ಗೆ ಅನುಮಾನ ಇದ್ದವರು ತನಿಖೆ ನಡೆಸಲಿ ನಾನು ಎಲ್ಲಾ ತನಿಖೆಗೂ ಸಿದ್ಧ.
ಆದ್ರೆ ನನ್ನ ಮಗಳ ಸಾವಿನ ನಂತರ ಕೆಲವರು ಷಡ್ಯಂತ್ರ ಮಾಡಿ ಇಂತಹ ಆರೋಪ ಮಾಡುತ್ತಿದ್ದಾರೆ. ನಾನು ಸಿಐಡಿ ಅಧಿಕಾರಿಗಳಿಗೆ ಮಾತ್ರ ನಾನು ಬೇಡ ಜಂಗಮ ಎಸ್ಸಿ ಸರ್ಟೀಫಿಕೆಟ್ ಕೊಟ್ಟ್ದೆಿ. ಅದು ಆರೋಪ ಮಾಡಿದವರ ಕೈಗೆ ಹೇಗೆ ಸಿಕ್ಕಿತು ಎಂಬ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.