ವರದಿ : ರಮೇಶ ಎಚ್. ವಿ.
ತುಮಕೂರು ಜಿಲ್ಲೆಯ ಪಾವಗಡ ವಿಶೇಷವಾದ ಭೌಗೋಳಿಕ ಹಿನ್ನೆಲೆ ಹೊಂದಿರುವ ತಾಲ್ಲೂಕು ಕೇಂದ್ರವಾಗಿದೆ.ಸುತ್ತಲೂ ಆಂದ್ರ ಗಡಿಯನ್ನು ಹಂಚಿಕೊಂಡಿ ರುವ ದ್ವೀಪ ಪ್ರದೇಶದಂತ್ತಿದಿದ್ದು, ತಾಲ್ಲೂಕಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳ ದಂಧೆ ಹೆಚ್ಚುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ.
ನಿಡಗಲ್ ಹೋಬಳಿಯನ್ನು ಹೊರತುಪಡಿಸಿದರೆ ಮಿಕ್ಕ ಹೋಬಳಿಗಳಲ್ಲಿ ಮಾತನಾಡುವ ಬಹುತೇಕ ಮಂದಿ ತೆಲುಗು ಭಾಷಿಕರು ,ತೆಲುಗು ಭಾಷೆಯ ಪ್ರಭಾವಕ್ಕೆ ಒಳಗಾಗಿರುವವರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಂತಹ ಭಿನ್ನ ಹಿನ್ನೆಲೆ ಉಳ್ಳ ಪಾವಗಡ ತಾಲ್ಲೂಕಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳದ್ದೇ ಅಬ್ಬರ.
ಪಾವಗಡ ತಾಲ್ಲೂಕಿನಲ್ಲಿ ನಾಲ್ಕು ಹೋಬಳಿ ಕೇಂದ್ರಗಳಿವೆ.ವೈ ಎನ್. ಹೊಸಕೋಟೆ, ನಾಗಲ ಮಡಿಕೆ, ನಿಡುಗಲ್,ಹಾಗೂ ಪಾವಗಡ ಕಸಬಾ , ಈ ಎಲ್ಲಾ ಹೋಬಳಿಗಳು ಆಂಧ್ರ ಗಡಿಯನ್ನು ಹಂಚಿಕೊಂಡಿವೆ.ಆಂಧ್ರಗಡಿಭಾಗದ ಕೆಲವು ಹಳ್ಳಿಗರು ಪಾವಗಡ ತಾಲ್ಲೂಕಿನ ವಿವಿಧ ಹಳ್ಳಿಗಳಿಗೆ ಉದ್ಯೋಗ ಗಳನ್ನು ಬಯಸಿ ಬಂದು ಇಲ್ಲೇ ನೆಲಸಿದ್ದರೆ,ಇನ್ನೂ ಕೆಲವರು ಕರ್ನಾಟಕದ ಗಡಿ ಹಳ್ಳಿಗಳಲ್ಲಿ ಜಮೀನು ಹೊಂದಿ,ಆಂಧ್ರದಲ್ಲೇ ವಾಸ ಮಾಡುತ್ತಿದ್ದಾರೆ. ಕೆಲವು ಕುಟುಂಬಗಳೂ ಮೀಸಲಾತಿ ಯಿಂದ ಸರ್ಕಾರಿ ಸೌಲಭ್ಯಗಳು ದೊರೆಯು ತ್ತವೆ ಎಂಬ ಕಾರಣಕ್ಕೂ ವಲಸೆ ಬಂದಿದ್ದಾರೆ.
ಆಂಧ್ರದಲ್ಲಿ ಬರುವ ಕೆಲ ಜಾತಿಗಳು:
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ,ಪಂಗಡಕ್ಕೆ ಸೇರುವುದಿಲ್ಲ,ಕರ್ನಾಟಕದಲ್ಲಿನ ಕೆಲವು ಪರಿಶಿಷ್ಟ ಜಾತಿ ಪಂಗಡದ ಜಾತಿಗಳು ಆಂಧ್ರದಲ್ಲಿ ಮೇಲ್ವರ್ಗದ ಜಾತಿ ಪಟ್ಟಿಯಲ್ಲಿ ಬರುತ್ತವೆ.ಇದನ್ನೇ ಬಂಡವಾಳ ಮಾಡಿಕೊಂಡಿರುವ ಬಹುತೇಕರು ಆಂಧ್ರದಿಂದ ಪಾವಗಡಕ್ಕೆ ಬಂದು ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆದು ಮೀಸಲಾತಿಯ ಲಾಭವನ್ನು ಪಡೆಯುತ್ತಿದ್ದಾರೆ.ಇದ್ದರಿಂದ ಸ್ಥಳೀಯರಿಗೆ ಉದ್ಯೋಗ, ಸರ್ಕಾರಿ ಸೌಲಭ್ಯಗಳು ಸೇರಿದಂತೆ ಚುನಾವಣೆಗಳಲ್ಲೂ ಹಿನ್ನಡೆಯಾಗುತ್ತಿದೆ.
ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿ ಕೇಂದ್ರ ಒಂದರಲ್ಲೇ 150 ಕ್ಕೂ ಹೆಚ್ಚು ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆಯಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇವರಲ್ಲಿ ಹಲವರು ಸರ್ಕಾರಿ ಸೌಲಭ್ಯಗಳನ್ನು ಪಡೆದಿದ್ದಾರೆ, ಇನ್ನೂ ಕೆಲವರು ಸರ್ಕಾರಿ ಉದ್ಯೋಗಗಳನ್ನು ಸಹ ಗಿಟ್ಟಿಸಿದ್ದಾರೆ ಎನ್ನಲಾಗಿದೆ.
ಪಾವಗಡ ತಾಲ್ಲೂಕು ಆಂದ್ರದ ಕಲ್ಯಾಣದುರ್ಗ, ಪೆನುಗೊಂಡ, ಹಿಂದೂಪುರ, ಮಡಕಸಿರಾ ತಾಲ್ಲೂಕುಗಳ ಗಡಿಯನ್ನು ಹಂಚಿಕೊಂಡಿದೆ.
ಆಂಧ್ರದ ಕಲ್ಯಾಣ ದುರ್ಗ ತ್ಲಾಲೂಕಿನ ಕುಂದರ್ಫಿ ಮಂಡಲದ ಕರಿಗಾನಪಲ್ಲಿಯಿಂದ ಕೆಲವು ಕುಟುಂಬಗಳು ವೈ ಎನ್ ಹೊಸಕೋಟೆ ಹೋಬಳಿ ಕೇಂದ್ರಕ್ಕೆ ನೇಕಾರಿಕ್ಕೆ ವೃತ್ತಿಗೆ ಬಂದವರು ಇಲ್ಲೇ ನೆಲಸಿ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆದು ನಮ ಸೌಲಭ್ಯ ಕಸಿಯುತ್ತಿದ್ದಾರೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಆಂಧ್ರದಲ್ಲಿ ಜಂಗಾಲು ಜಾತಿ ಹಿಂದಳಿದ ವರ್ಗದಲ್ಲಿ, ಒಡ್ಡರು, ನಾಯಕ ಸಮುದಾಯದವರು ಪ್ರವರ್ಗ (ಬಿಸಿ1) ರಲ್ಲಿ ಬರುತ್ತಾರೆ. ಇವರು ಕರ್ನಾಟಕದಲ್ಲಿ ಒಡ್ಡರು ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಹಾಗೂ ನಾಯಕ, ಬೇಡ, ಬೋಯ ಜನಾಂಗದವರು ಪರಿಶಿಷ್ಟ ಪಂಗಡ ಪ್ರಮಾಣ ಪತ್ರಗಳನ್ನು ಹಾಗೂ ಜಂಗಾಲು ಜಾತಿಯವರು ಸುಡುಗಾಡು ಸಿದ್ದ ಮತ್ತು ನಾಯಕ ಜನಾಂಗದ ಸುಳ್ಳು ಪ್ರಮಾಣ ಪತ್ರಗಳನ್ನು ಪಡೆಯುತ್ತಿದ್ದಾರೆ .
ಚುನಾವಣೆಗಳಲ್ಲೂ ಸ್ಪರ್ಧೆ.!
ಪಾವಗಡ ತಾಲ್ಲೂಕಿನಲ್ಲಿ ಆಂಧ್ರ ಮೂಲದಿಂದ ವಿವಾಹ ಸಂಬಂಧಗಳನ್ನು ಮಾಡಿಕೊಂಡಿರುವ ಹಿನ್ನೆಲೆ ಉಳ್ಳವರು ಗ್ರಾಮ ಪಂಚಾಯತಿ,ಪುರಸಭೆ , ತಾ.ಪಂ. ಮತ್ತು ಜಿ.ಪಂ. ಚುನಾವಣೆಯಲ್ಲೂ ಅನಾಯಸವಾಗಿ ಸ್ಪರ್ಧೆ ಮಾಡಿರುವ ಪ್ರಕರಣಗಳೂ ಇವೆ. ಆಂಧ್ರ ಮೂಲದ ಒಡ್ಡರು, ಬೋಯ, ಬೇಡ, ನಾಯಕ ಜನಾಂಗದವರು ಪ್ರವರ್ಗ ಬಿಸಿ 1 ರಲ್ಲಿ ಬರುವುದರಿಂದ ಈ ವರ್ಗಗಳಲ್ಲಿ ವಿವಾಹ ಮಾಡಿಕೊಂಡಿರುವ ಮಹಿಳೆಯರಾಗಲಿ, ಪುರುಷರಾಗಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಬರುವುದಿಲ್ಲ. ವಿವಾಹವನ್ನೇ ನೆಪ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಸೇರಿದಂತೆ ಉದ್ಯೋಗ ಮತ್ತು ಸರ್ಕಾರಿ ಸೌಲಭ್ಯಗಳನ್ನು ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಕ್ರಮ ಜರುಗಿಸುತ್ತಾರಾ ಜಿಲ್ಲಾಧಿಕಾರಿಗಳು.?!
ಪಾವಗಡ ತಾಲೂಕಿನಲ್ಲಿರುವ ಗ್ರಾಮಲೆಕ್ಕಿಗರು,ಕಂದಾಯ ನಿರೀಕ್ಷಕರು,ಹಾಗೂ ತಹಸೀಲ್ದಾರರ ತಪ್ಪುಗಳಿಂದ ಮತ್ತು ಹಣದ ಆಮಿಷಕ್ಕೆ ಅಧಿಕಾರಿಗಳು ಒಳಗಾಗಿ ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ನೀಡಿದ್ದಾರೆ ಎಂಬ ಆರೋಪವಿದ್ದು, ಜಿಲ್ಲಾಧಿಕಾರಿಗಳು ಸಮಗ್ರ ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಾರ,ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ರದ್ದುಪಡಿಸಲು ಮುಂದಾಗುತ್ತಾರಾ ಕಾದು ನೋಡಬೇಕಿದೆ.
ಕ್ರಮ ಜರುಗಿಸುತ್ತೇವೆ
ಲೋಕಸಭಾ ಚುನಾವಣಾ ನಿಮಿತ್ತ ಬೇರೆ ಕಡೆ ನಿಯುಕ್ತಿಗೊಂಡಿದ್ದೆ, ಮತ್ತೆ ಬಂದು ಅಧಿಕಾರ ವಹಿಸಿಕೊಂಡಿದ್ದೇನೆ. ಈ ಸುಳ್ಳು ಜಾತಿ ಪ್ರಮಾಣ ಪತ್ರಗಳು ಆಗಿದ್ದರೆ ಯಾರ ಕಾಲದಲ್ಲಿ ಆಗಿವೆ ಪರಿಶೀಲನೆ ನಡೆಸುತ್ತೇವೆ, ಸುಳ್ಳು ಎಂದು ಕಂಡು ಬಂದರೆ ಕ್ರಮ ಜರುಗಿಸುವಂತೆ ಮೇಲಧಿಕಾರಿಗಳಿಗೆ ಮಾಹಿತಿ ರವಾನೆ ಮಾಡುತ್ತೇವೆ.
-ವರದರಾಜು
ಪಾವಗಡ ತಾಲ್ಲೂಕು ತಹಸೀಲ್ದಾರ್