Saturday, July 26, 2025
Homeಜಿಲ್ಲಾ ಸುದ್ದಿಗಳು | District News4 ಲಕ್ಷ ರೂ. ಮೌಲ್ಯದ ಖೋಟಾ ನೋಟು ವಶ : ನಾಲ್ವರ ಬಂಧನ

4 ಲಕ್ಷ ರೂ. ಮೌಲ್ಯದ ಖೋಟಾ ನೋಟು ವಶ : ನಾಲ್ವರ ಬಂಧನ

Fake currency worth Rs 4 lakh seized: Four arrested

ದಾವಣಗೆರೆ, ಜು.25- ಖೋಟಾ ನೋಟು ಚಲಾವಣೆ ದಂಧೆಯಲ್ಲಿ ತೊಡಗಿಕೊಂಡಿದ್ದ ನಾಲ್ವರನ್ನು ಬಸವಾಪಟ್ಟಣ ಠಾಣೆ ಪೊಲೀಸರು ಬಂಧಿಸಿ 3.75 ಲಕ್ಷ ಖೋಟಾ ನೋಟನ್ನು ವಶಪಡಿಸಿಕೊಂಡಿದ್ದಾರೆ.

ಹೂವಿನಹಡಗಲಿ ತಾಲೂಕಿನ ನಡುವಿನ ತಾಂಡದ ಸಂತೋಷಕುಮಾರ(32), ಕೊಟ್ಟೂರು ತಾಲೂಕಿನ ಬೇವೂರು ಗ್ರಾಮದ ವಿರೇಶ(37), ದಾವಣಗೆರೆ ತಾಲೂಕು ಕುಕ್ಕವಾಡ ಗ್ರಾಮದ ಕುಬೇರಪ್ಪ(60) ಹಾಗೂ ಕೊಟ್ಟೂರಿನ ಬೇವೂರು ಗ್ರಾಮದ ಹನುಮಂತಪ್ಪ(75) ಬಂಧಿತ ಆರೋಪಿಗಳಾಗಿದ್ದಾರೆ.

ಚಿರಡೋಣಿ ಗ್ರಾಮದಲ್ಲಿ ಖೋಟಾ ನೋಟು ಚಲಾವಣೆಯಾಗುತ್ತಿದೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದು ಚನ್ನಗಿರಿ ಉಪವಿಭಾಗದ ಸಹಾಯಕ ಪೊಲೀಸ್‌‍ ಅಧೀಕ್ಷಕರ ಮಾರ್ಗದರ್ಶನದಲ್ಲಿ ಹಾಗೂ ಸಂತೇಬೆನ್ನೂರು ವೃತ್ತ ನಿರೀಕ್ಷಕರಾದ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಬಸವಾಪಟ್ಟಣ ಪೊಲೀಸ್‌‍ ಠಾಣೆ ಪಿಎಸ್‌‍ಐ ಇಮ್ತಿಯಾಜ್‌ ಹಾಗೂ ಸಿಬ್ಬಂದಿ ತನಿಖೆ ಕೈಗೊಂಡರು.

ಚಿರಡೋಣಿ ಗ್ರಾಮದ ದೊಡ್ಡಘಟ್ಟ ರಸ್ತೆಯ ಶಾಂತಿವನದ ಸಶಾನದ ಬಳಿ ಆರೋಪಿಗಳಾದ ಸಂತೋಷಕುಮಾರ ಹಾಗೂ ರಾಮಪ್ಪ ಅವರನ್ನು ವಶಕ್ಕೆ ಪಡೆದು ಪರಿಶೀಲನೆ ಕೈಗೊಂಡಾಗ ಅವರ ಬಳಿ ಇದ್ದ 500 ರೂ. ಮುಖಬೆಲೆಯ ಸುಮಾರು 2 ಲಕ್ಷ ರೂ. ಖೋಟಾ ನೋಟುಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆದು ಅವರು ಬಳಸಿದ್ದ ಬೈಕ್‌ನ್ನು ಕೂಡ ಜಪ್ತಿ ಮಾಡಿದ್ದಾರೆ.

ನಂತರ ಅವರ ವಿಚಾರಣೆ ವೇಳೆ ಈ ದಂಧೆಯಲ್ಲಿ ಹಳೆ ಆರೋಪಿ ಕುಬೇರಪ್ಪ ಪಾತ್ರ ಇರುವುದು ತಿಳಿದು ಆತ ತಲೆಮರೆಸಿಕೊಂಡಿದ್ದ ಸ್ಥಳದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಆತನ ಸಹಚರ ಹನುಮಂತ ಅವರ ಬಳಿ ಇದ್ದ 500 ಮುಖಬೆಲೆಯ 28 ಸಾವಿರ ಮೌಲ್ಯದ ಖೋಟಾ ನೋಟು ಹಾಗೂ 200 ರೂ. ಮುಖಬೆಲೆಯ 47.400 ಬೆಲೆಯ ಖೋಟಾ ನೋಟನ್ನು ವಶಪಡಿಸಿಕೊಳ್ಳಲಾಗಿತ್ತು.

ನಂತರ ಮತ್ತೊಬ್ಬ ಆರೋಪಿ ಸಿಕ್ಕಿಬಿದ್ದು ಆತನ ಬಳಿ 500 ರೂ. ಹಾಗೂ 200 ಮುಖಬೆಲೆಯ 1 ಲಕ್ಷ ನಕಲಿ ನೋಟು ಪತ್ತೆಯಾಗಿದೆ.ಒಟ್ಟಾರೆ 3,75,400 ಮೌಲ್ಯದ ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇತ್ತೀಚೆಗೆ ರಾಯಚೂರು ಭಾಗದಲ್ಲಿ ಖೋಟಾ ನೋಟು ದಂಧೆ ವ್ಯಾಪಕವಾದ ಹಿನ್ನೆಲೆಯಲ್ಲಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದರು. ಈಗ ದಾವಣಗೆರೆಯಲ್ಲೂ ಇದು ಹಬ್ಬಿದ್ದು, ಈ ಆರೋಪಿಗಳು ಈಗಾಗಲೇ ಮೈಸೂರು, ತುಮಕೂರು ಸೇರಿದಂತೆ ವಿವಿಧೆಡೆ ಖೋಟಾ ನೋಟುಗಳನ್ನು ಚಲಾವಣೆ ಮಾಡಿರುವುದರ ಬಗ್ಗೆ ಮಾಹಿತಿ ಸಿಕ್ಕಿದೆ. ಇದರ ಬಗ್ಗೆ ವಿಸ್ತೃತ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News