Tuesday, August 5, 2025
Homeರಾಜ್ಯಸತ್ತ ವ್ಯಕ್ತಿ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಠಿಸಿ ಕೋಟ್ಯಂತರ ರೂ. ಆಸ್ತಿ ಕಬಳಿಕೆ..!

ಸತ್ತ ವ್ಯಕ್ತಿ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಠಿಸಿ ಕೋಟ್ಯಂತರ ರೂ. ಆಸ್ತಿ ಕಬಳಿಕೆ..!

Fake document created in the name of a dead person and crores of rupees. Property seized..!

ಮೈಸೂರು,ಆ.2- ಸತ್ತ ವ್ಯಕ್ತಿಯ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಠಿಸಿ ಜಿಪಿಎ ಮಾಡಿಸಿ ಮೈಸೂರು ಹೊರವಲಯದ ಮಂಡಕಳ್ಳಿ ಬಳಿ ಕೋಟ್ಯಾಂತರ ರೂ. ಬೆಲೆ ಬಾಳುವ ಆಸ್ತಿ ಕಬಳಿಸಿ ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು ತಾಲೂಕು ಮಂಡಕಹಳ್ಳಿ ಗ್ರಾಮದ ಪತ್ರಪ್ಪ ಎಂಬ ವ್ಯಕ್ತಿಯ 4 ಎಕರೆ 19 ಗುಂಟೆ ಭೂಮಿಯನ್ನು ಕಬಳಿಸಲು ಸತ್ತು ಹೋದ ವ್ಯಕ್ತಿಯ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿರುವ ಘಟನೆ ನಡೆದಿದೆ. ನೀಲಕಂಠ ನರಸಿಂಹ ಶರ್ಮ ಎಂಬವರು 2018ರಲ್ಲಿ ಮೃತಪಟ್ಟಿದ್ದು, ಅವರ ಮರಣ ಪ್ರಮಾಣ ಪತ್ರವು ಕೂಡ ಪ್ರಾಯೋಗಿಕ ದಾಖಲೆಯಾಗಿದೆ.

ಆದರೆ, ಅವರ ಸಾವಿನ ಆರು ವರ್ಷಗಳ ನಂತರ, 2024ರಲ್ಲಿ ಅವರ ಹೆಸರಿನಲ್ಲಿ ಜಿಪಿಎ ಮಾಡಲಾಗಿದೆ. ಅವರೇ ಬಂದು ಜಿಪಿಎ ಮಾಡಿಕೊಟ್ಟ ಬಗ್ಗೆ ದಾಖಲೆ ಸೃಷ್ಟಿ ಮಾಡಲಾಗಿದೆ. ಈ ಜಿಪಿಎ ಕುರಿತು ನಕಲಿ ದಾಖಲೆ ಸೃಷ್ಟಿಸಿದ್ದು, ಈ ಮೂಲಕ ಭೂಮಿಯನ್ನು ಕಬಳಿಸುವ ಪ್ರಯತ್ನ ನಡೆದಿದೆ.

ಈ ಸಂಬಂಧ ವಿವೇಕ್‌ ಹಟ್ಟಿ, ಸುಮಾ, ಅನಿತಾ, ಪುಷ್ಪಾ ಮತ್ತು ಮೃತ ನೀಲಕಂಠ ನರಸಿಂಹ ಶರ್ಮ ಹೆಸರಿನಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿಗೆ ತೆರಳಿ ಜಿಪಿಎ ನೋಂದಾಯಿಸಿಕೊಟ್ಟ ವ್ಯಕ್ತಿ ಸೇರಿದಂತೆ ಐವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ನೀಲಕಂಠ ನರಸಿಂಹ ಶರ್ಮ ಎಂಬುವರು 2018ರ ಸೆ.23ರಂದು ಮೃತಪಟ್ಟಿದ್ದರು. ಆದರೆ ಅವರು 2024ರ ಡಿ.20ರಂದು ಸದರಿ ಭೂಮಿಗೆ ಮಹಿಳೆಯೊಬ್ಬರ ಹೆಸರಿನಲ್ಲಿ ಜಿಪಿಎ ಮಾಡಿ, ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿರುವುದಾಗಿ ಆರೋಪಿಗಳು ದಾಖಲೆ ಸೃಷ್ಟಿಸಿದ್ದಾರೆ. ನಂತರ ಈ ಭೂಮಿಯನ್ನು ವಿಧಾನ ಪರಿಷತ್‌ ಸದಸ್ಯ ಸಿ.ಎನ್‌.ಮಂಜೇಗೌಡ ಸೇರಿದಂತೆ ಮೂವರಿಗೆ ಮಾರಾಟ ಮಾಡಿದ್ದಾರೆ.

ಪಿ.ಪತ್ರಪ್ಪ ಎಂಬುವರಿಗೆ ಮಂಡಕಳ್ಳಿ ಸರ್ವೆ ನಂ.89ರಲ್ಲಿ 4 ಎಕರೆ 19 ಗುಂಟೆ ಭೂಮಿಯು ಭೂ ನ್ಯಾಯ ಮಂಡಳಿಯಿಂದ ಮಂಜೂರಾಗಿತ್ತು. ಪಿ.ಪತ್ರಪ್ಪ ಅವರಿಗೆ ಪಿ.ಪ್ರಭುದೇವ್‌ ಮತ್ತು ಪಿ. ವಿಶ್ವನಾಥ್‌ ಎಂಬ ಇಬ್ಬರು ಮಕ್ಕಳಿದ್ದು, ಅವರಲ್ಲಿ ಪಿ.ವಿಶ್ವನಾಥ್‌ ಹುಟ್ಟಿನಿಂದಲೇ ಅಂಧರಾಗಿದ್ದಾರೆ. ಈ ಮಧ್ಯೆ 1990ರ ಸೆಪ್ಟೆಂಬರ್‌ 7ರಂದು ಪತ್ರಪ್ಪ ಅವರು ನಿಧನರಾದ ನಂತರ ಸಹೋದರ ಪ್ರಭುದೇವ್‌ ಈ ಆಸ್ತಿಯನ್ನು ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡು ಅದನ್ನು ನೀಲಕಂಠ ನರಸಿಂಹ ಶರ್ಮ ಎಂಬುವರಿಗೆ 2006ರ ಆಗಸ್ಟ್‌ 10ರಂದು ಮಾರಾಟ ಮಾಡಿದ್ದರು.

ಈ ಸಂಬಂಧ ವಿಶ್ವನಾಥ್‌ ಪುತ್ರ ಎಂ.ವಿ.ಕಿಶೋರ್‌ ಅವರು ಮೈಸೂರಿನ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು, 2013ರ ಜ.10ರಂದು ಅವರ ಪರವಾಗಿಯೇ ತೀರ್ಪು ಬಂದಿತ್ತು. ಆದರೆ ಈ ತೀರ್ಪನ್ನು ಪ್ರಶ್ನಿಸಿ ನೀಲಕಂಠ ನರಸಿಂಹ ಶರ್ಮ ಮತ್ತು ಪ್ರಭುದೇವ್‌ ಅವರು ಹೈಕೋರ್ಟ್‌ಗೆ ಮೇಲನವಿ ಸಲ್ಲಿಸಿದ್ದರು.

ಈ ನಡುವೆ 2018ರ ಸೆ.23ರಂದು ನೀಲಕಂಠ ನರಸಿಂಹ ಶರ್ಮ ಅವರು ಹಾಗೂ 2020ರ ಆಗಸ್ಟ್‌ 4ರಂದು ಪ್ರಭುದೇವ್‌ ಮೃತಪಟ್ಟಿದ್ದು ನೀಲಕಂಠ ನರಸಿಂಹ ಶರ್ಮ ಪುತ್ರ ವಿವೇಕ್‌ ಹಟ್ಟಿ ಅವರು ಹೈಕೋರ್ಟ್‌ನಲ್ಲಿ ತಮ್ಮ ತಂದೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಹಿಂಪಡೆದಿದ್ದರು. ಇದಾದ ನಂತರ ವಿವೇಕ್‌ ಹಟ್ಟಿ ಅವರು 2024ರ ಆಗಸ್ಟ್‌ 26ರಂದು ಅದಾಗಲೇ ಮೃತಪಟ್ಟಿದ್ದ ನೀಲಕಂಠ ಶರ್ಮ ಅವರ ಹೆಸರಿನಲ್ಲಿ ಆನ್‌ಲೈನ್‌‍ ಮೂಲಕ ನಾಡಕಚೇರಿಗೆ ಅರ್ಜಿ ಸಲ್ಲಿಸಿ ಮಂಡಕಳ್ಳಿ ಸರ್ವೆ ನಂ.89/2ಕ್ಕೆ ಪೋಡಿ ಮಾಡಿಕೊಡುವಂತೆ ಕೋರಿದ್ದು, ಅಧಿಕಾರಿಗಳು ಈ ಭೂಮಿಗೆ 39/3 ಸಂಖ್ಯೆ ನೀಡಿ ಪೋಡಿ ಮಾಡಿಕೊಟ್ಟಿದ್ದಾರೆ.

ಬಳಿಕ ವಿವೇಕ್‌ ಹಟ್ಟಿ, ಸುಮಾ, ಅನಿತಾ ಮತ್ತು ಪುಷ್ಪಾ ಎಂಬುವರು ಸೇರಿ 2024ರ ಡಿಸೆಂಬರ್‌ 23ರಲ್ಲಿ ವಿಧಾನ ಪರಿಷತ್‌ ಸದಸ್ಯ ಸಿ.ಎನ್‌‍.ಮಂಜೇಗೌಡ, ಎಸ್‌‍.ಶಂಕರ್‌ ರಾವ್‌ ಮತ್ತು ಸತೀಶ್‌ ಅಂಚಟ್ಕರ್‌ ಅವರಿಗೆ ಮಾರಾಟ ಮಾಡಿದ್ದಾರೆ. ಖರೀದಿದಾರರು ಸದರಿ ಭೂಮಿಗೆ ಖಾತೆ ಬದಲಾವಣೆಗಾಗಿ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿದ್ದಾರೆ, ಸದರಿ ದಾಖಲೆಗಳನ್ನು ಪರಿಶೀಲಿಸಿದ್ದ ತಹಶೀಲ್ದಾರರು, ಜಿಪಿಎ ಮಾಡಿಕೊಟ್ಟಿದ್ದ ನೀಲಕಂಠ ನರಸಿಂಹ ಶರ್ಮ 2018ರಲ್ಲೇ ಮರಣ ಹೊಂದಿದ ಬಗ್ಗೆ ಉಲ್ಲೇಖಿಸಿ, ಶರ್ಮ ಅವರು ಮರಣ ಹೊಂದಿದ ನಂತರ ಜಿಪಿಎ ನೋಂದಣಿ ಆಗಿದ್ದ ಕಾರಣ ಭೂಮಿ ಖರೀದಿದಾರರಿಗೆ ಖಾತೆ ಮಾಡಿಕೊಡದೆ ಅವರ ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಇನ್ನು ಈ ಸಂಬಂಧ ಇದೀಗ ವಿವೇಕ್‌ ಹಟ್ಟಿ, ಸುಮಾ, ಅನಿತಾ, ಪುಷ್ಪಾ ಮತ್ತು ಮೃತ ನೀಲಕಂಠ ನರಸಿಂಹ ಶರ್ಮ ಹೆಸರಿನಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿಗೆ ತೆರಳಿ ಜಿಪಿಎ ನೋಂದಾಯಿಸಿಕೊಟ್ಟ ವ್ಯಕ್ತಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. 89/2 ರಲ್ಲಿ ನ್ಯಾಷನಲ್‌ ಹೈವೇಗೆ 18 ಗುಂಟೆ ಭೂಸ್ವಾಧೀನವಾಗಿದ್ದು ಪೋಡಿ ಮಾಡುವ ಸಮಯದಲ್ಲಿ ಸರ್ಕಾರ ಗಮನಕ್ಕೆ ತರದೆ ನೋಟಿಸ್‌‍ ಜಾರಿ ಮಾಡದೇ ಪೋಡಿ ಮಾಡಿರುವುದು ಕ್ರಮ ಬದ್ದವಾಗಿರುವುದಿಲ್ಲ. ಆದ್ದರಿಂದ ಸರ್ವೇ ಸೂಪರ್‌ವೈಸರ್‌ ಮತ್ತು ಇಲಾಖೆಯ ವ್ಯವಸ್ಥಾಪಕರ ಮೇಲೆ ಕಾನೂನು ಕ್ರಮ ಜರುಗಿಸುವವರೇ ಎಂಬ ಪ್ರಶ್ನೆ ಉದ್ಭವವಾಗಿದೆ.

RELATED ARTICLES

Latest News