ಬೆಂಗಳೂರು,ಆ.30- ದ್ವಿತೀಯ ದರ್ಜೆ ಸಹಾಯಕ ಬ್ಯಾಕ್‌ಲ್ಯಾಗ್ ಹುದ್ದೆಗೆ ನಕಲಿ ದಾಖಲೆ ಸಲ್ಲಿಸಿ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ವಂಚನೆ ಮಾಡಿ ಉದ್ಯೋಗ ಪಡೆಯಲು ನಕಲಿ ಅಂಕಪಟ್ಟಿ ಒದಗಿಸಿದ್ದ 11 ಮಧ್ಯವರ್ತಿಗಳು ಹಾಗೂ 37 ಅನರ್ಹ ಅಭ್ಯರ್ಥಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 40 ಲಕ್ಷ ಬೆಲೆಯ 2 ಕಾರುಗಳು, 17 ಮೊಬೈಲ್‌ಗಳು, ಹಾರ್ಡ್ ಡಿಸ್ಕ್‌ನ್ನು ವಶಪಡಿಸಿಕೊಂಡಿದ್ದಾರೆ.
ಈ ಮಧ್ಯವರ್ತಿಗಳ ಪೈಕಿ ಮೂವರು ಆರೋಪಿತರು ವಿವಿಧ ಇಲಾಖೆಯಲ್ಲಿ ಸರ್ಕಾರಿ ನೌಕರರಾಗಿರುತ್ತಾರೆ. ಶೇಷಾದ್ರಿಪುರಂನಲ್ಲಿರುವ ಜಲಸಂಪನೂಲ ಇಲಾಖೆಯಿಂದ 2022ನೇ ಸಾಲಿನ ಅಕ್ಟೋಬರ್ ತಿಂಗಳಿನಲ್ಲಿ ಸಿ ವೃಂದದ ದ್ವಿತೀಯ ದರ್ಜೆ ಸಹಾಯಕ ಬ್ಯಾಕ್‌ಲಾಗ್ ಹುದ್ದೆಗಳಿಗೆ ನೇರ ನೇಮಕಾತಿಯಡಿ ಆನ್‌ಲೈನ್ ಮೂಲಕ 182 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿಲಾಗಿತ್ತು.
ಈ ನೇಮಕಾತಿಗೆ ಒಟ್ಟು 62 ಅಭ್ಯರ್ಥಿಗಳು ಇಲಾಖೆಯು ಸೂಚಿಸಿದಂತಹ ಮಾನದಂಡಗಳ ವ್ಯಾಪ್ತಿಗೊಳಪಟ್ಟಿರಲಿಲ್ಲ. ಇವರು ಅನ್ಯಮಾರ್ಗದ ಮೂಲಕ ಉದ್ಯೋಗವನ್ನು ಪಡೆಯಬೇಕೆನ್ನುವ ದುರುದ್ದೇಶದಿಂದ ನಕಲಿ ಅಂಕಪಟ್ಟಿಗಳನ್ನು ತಯಾರಿಸುವ ಜಾಲದೊಂದಿಗೆ ಸಂಪರ್ಕ ಹೊಂದಿದ್ದರು. ಪ್ರತಿ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿರುವಂತೆ ಕಂಡುಬರುವ ಅನಧಿಕೃತವಾಗಿ ಸೃಷ್ಟಿಸಿದ ದ್ವಿತೀಯ ಪಿಯುಸಿ, 12ನೇ ತರಗತಿಯ ಸಿಬಿಎಸ್‌ಸಿ ಮತ್ತು ದ್ವಿತೀಯ ಪಿಯುಸಿಗೆ ತತ್ಸಮಾನವಾದ ಎನ್‌ಐಓಎಸ್ ಅಂಕಪಟ್ಟಿಗಳನ್ನು ಪಡೆದುಕೊಂಡಿದ್ದರು.
ಈ ರೀತಿ ಪಡೆದ ಅಂಕಪಟ್ಟಿಯನ್ನು ಜಲಸಂಪನೂಲ ಇಲಾಖೆಗೆ ಆನ್‌ಲೈನ್ ಮೂಲಕ ಸಲ್ಲಿಸಿದ್ದರು. ಇದರಿಂದಾಗಿ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ವಂಚನೆಯಾಗಿತ್ತು. ದಾಖಲಾತಿಗಳ ಪರಿಶೀಲನೆಯನ್ನು ನಡೆಸಿದ ಇಲಾಖೆಯವರು ಅಂಕಪಟ್ಟಿಗಳಲ್ಲಿ ಅಕ್ರಮ ಕಂಡುಬಂದ ಹಿನ್ನೆಲೆಯಲ್ಲಿ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ಸಿ.ಸಿ.ಬಿ ಘಟಕಕ್ಕೆ ವಹಿಸಲಾಗಿತ್ತು. ತನಿಖೆ ಮುಂದುವರೆಸಿದ ಸಿಸಿಬಿ ಪೊಲೀಸರು, ರಾಜ್ಯದ ವಿವಿಧ ಜಿಲ್ಲೆಗಳ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅನಧಿಕೃತವಾಗಿ ಸೃಷ್ಟಿಸಿದ್ದ ಅಂಕಪಟ್ಟಿಯನ್ನು ಸಲ್ಲಿಸಿದ್ದ ಒಟ್ಟು 12 ಜಿಲ್ಲೆಗಳಿಂದ ಪತ್ತೆಹಚ್ಚಿದ್ದಾರೆ.ಅರ್ಜಿ ಸಲ್ಲಿಸಿದ್ದ 62 ಅಭ್ಯರ್ಥಿಗಳ ಪೈಕಿ ಕಲ್ಬುರ್ಗಿ ಜಿಲ್ಲೆಯಿಂದ 25 ಅಭ್ಯರ್ಥಿಗಳು, ಹಾಸನ 12, ವಿಜಯಪುರ 8, ಬೀದರ್ 6, ಬೆಳಗಾವಿ 3, ಯಾದಗಿರಿ 2, ಚಿತ್ರದುರ್ಗ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ವಿಜಯನಗರದ ತಲಾ ಒಬ್ಬರು, ನಕಲಿ ಅಂಕಪಟ್ಟಿಗಳನ್ನು ಸಲ್ಲಿಸಿರುವುದನ್ನು ಪತ್ತೆ ಮಾಡಿರುವ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.