Saturday, August 9, 2025
Homeರಾಜ್ಯಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲೂ ನಕಲಿ ಮತದಾರರ ನೋಂದಣಿ : ಗುಂಡೂ ರಾವ್‌ ಗಂಭೀರ ಆರೋಪ

ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲೂ ನಕಲಿ ಮತದಾರರ ನೋಂದಣಿ : ಗುಂಡೂ ರಾವ್‌ ಗಂಭೀರ ಆರೋಪ

Fake voter registration in Gandhinagar assembly constituency too: Gundu Rao

ಬೆಂಗಳೂರು, ಆ.8– ನಗರದ ಮಹದೇವಪುರ ಕ್ಷೇತ್ರದಲ್ಲಷ್ಟೇ ಅಲ್ಲ, ತಾವು ಪ್ರತಿನಿಧಿಸುವ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲೂ ಸಾಕಷ್ಟು ನಕಲಿ ಮತದಾರರ ನೋಂದಣಿಯಾಗಿದೆ. ಇದಕ್ಕೆ ಪೂರಕವಾದ ದಾಖಲೆಗಳು ತಮ ಬಳಿ ಇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ಗುಂಡೂ ರಾವ್‌ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ನೇತೃತ್ವದಲ್ಲಿ ನಡೆದ ಬೃಹತ್‌ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಚಿಕ್ಕಪೇಟೆಯ 10X10 ಅಡಿ ಅಳತೆಯ 100 ಚದರ ಅಡಿ ವಿಸ್ತೀರ್ಣದ ಅಂಗಡಿಯ ವಿಳಾಸವೊಂದರಲ್ಲೇ 70 ರಿಂದ 100 ಮತದಾರು ನೋಂದಣಿಯಾಗಿದ್ದಾರೆ. ನಾವು ಅದನ್ನು ಪರಿಶೀಲನೆ ನಡೆಸಿದಾಗ ಅಲ್ಲಿ ಯಾರು ಇಲ್ಲ ಎಂದು ಸ್ಪಷ್ಟವಾಗಿದೆ ಎಂದರು.

ಇದರ ಬಗ್ಗೆ ಚುನಾವಣಾ ಆಯೋಗಕ್ಕೆ ನಾನು ಖುದ್ದಾಗಿ ಪತ್ರ ಬರೆದಿದ್ದೇನೆ ಆದರೂ ಯಾವುದೇ ಕ್ರಮಕೈಗೊಂಡಿಲ್ಲ. ನಿನ್ನೆ ರಾಹುಲ್‌ಗಾಂಧಿ ಆರೋಪ ಮಾಡಿದ ಬಳಿಕ ಚುನಾವಣಾ ಆಯೋಗ ನಿಗದಿತ ನಮೂನೆಯಲ್ಲಿ ಪ್ರಮಾಣ ಪತ್ರ ಸಲ್ಲಿಕೆ ಮಾಡಿ ಎಂದು ಕೇಳುತ್ತಿದೆ. ನಾನು ಗಾಂಧಿ ನಗರ ಕ್ಷೇತ್ರದಲ್ಲಿನ ಲೋಪಗಳ ಬಗ್ಗೆ ಆಯೋಗಕ್ಕೆ ಪತ್ರ ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ರಾಹುಲ್‌ಗಾಂಧಿ ಅವರಿಗೆ ಪ್ರಮಾಣ ಪತ್ರ ಸಲ್ಲಿಸಿ ಎಂದು ಹೇಳುತ್ತಿರುವುದು ಎಷ್ಟು ಸರಿ ಎಂದರು.

ಚುನಾವಣಾ ಆಯೋಗ ಗಂಭೀರ ಆರೋಪಗಳು ಕೇಳಿ ಬಂದಾಗ ಲೋಪಗಳನ್ನು ಸರಿಪಡಿಸಲು ತುದಿಗಾಲಲ್ಲೇ ನಿಲ್ಲಬೇಕು. ಆದರೆ ತನ್ನ ಜವಾಬ್ದಾರಿ ನಿರ್ವಹಿಸದ ಅಯೋಗ ಪ್ರತಿಪಕ್ಷಗಳ ನಾಯಕರನ್ನೇ ಟೀಕೆ ಮಾಡುತ್ತಿದೆ. ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಎಷ್ಟೇ ಟೀಕೆ, ಟಿಪ್ಪಣಿ ಪ್ರತಿರೋಧಗಳು ಎದುರಾದರೂ ರಾಹುಲ್‌ಗಾಂಧಿ ಜಗ್ಗುವ ನಾಯಕನಲ್ಲ. ಧೈರ್ಯವಾಗಿ ಸತ್ಯ ಹೇಳುತ್ತಾರೆ. ಈ ಹಿಂದೆ ಕೋವಿಡ್‌ ಸಂದರ್ಭದಲ್ಲಿ, ಚೀನಾ ಅತಿಕ್ರಮಣ, ನೋಟು ಅಮಾನೀಕರಣ, ಅವೈಜ್ಞಾನಿಕ ಜಿಎಸ್‌‍ಟಿ ಸೇರಿದಂತೆ ಹಲವಾರು ವಿಚಾರಗಳಲ್ಲಿ ಸತ್ಯ ಹೇಳಿದರು. ಬಿಜೆಪಿ ಅವರನ್ನು ಅಪಹಾಸ್ಯ ಮಾಡಿತ್ತು. ಆದರೂ ರಾಹುಲ್‌ಗಾಂಧಿ ಸತ್ಯ ಮಾತನಾಡುವುದು ನಿಲ್ಲಿಸಿಲ್ಲ, ನಿಲ್ಲಿಸುವುದೂ ಇಲ್ಲ. ಪ್ರಧಾನಿ ಮೋದಿ ಸೇರಿದಂತೆ ಯಾರೇ ಆದರೂ ರಾಹುಲ್‌ಗಾಂಧಿ ಅವರ ಬಾಯಿ ಮುಚ್ಚಿಸುವುದಿಲ್ಲ ಎಂದು ಹೇಳಿದರು.ನೆಹರು, ಇಂದಿರಾಗಾಂಧಿ ಅವರ ಕಾಲದಲ್ಲಿ ಭಾರತದ ವಿದೇಶಾಂಗ ನೀತಿ ಸದೃಢವಾಗಿತ್ತು. ಈಗ ಅದು ಘಾಸಿಗೊಂಡಿದೆ. ದೇಶದ ಆರ್ಥಿಕತೆ ಅಪಾಯದಲ್ಲಿದೆ ಎಂದು ಎಚ್ಚರಿಸಿದರು.

RELATED ARTICLES

Latest News