ಬೆಂಗಳೂರು, ಸೆ.13- ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಗಗನಕ್ಕೇರಿದ ಹೂವಿನ ಬೆಲೆ ಪಿತೃಪಕ್ಷದಲ್ಲಿ ಪಾತಾಳ ತಲುಪಿದ್ದು, ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ 15 ದಿನಗಳ ಹಿಂದೆ ಒಂದು ಮಾರು ಸೇವಂತಿಗೆ 150ರೂ.ಗೆ ಮಾರಾಟವಾಗುತ್ತಿತ್ತು. ಈಗ ಮಾರುಕಟ್ಟೆಯಲ್ಲಿ 40ರೂ.ಗೆ ಒಂದು ಮಾರು ಸಿಗುತ್ತಿದೆ. ಜತೆಗೆ ಕೆಜಿ 40ರೂ.ಗೆ ಕುಸಿದಿದೆ. ಇದರಿಂದ ಹೂ ಬೆಳೆಗಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಪಿತೃಪಕ್ಷದಲ್ಲಿ ಯಾವುದೇ ಶುಭ ಸಮಾರಂಭಗಳು ನಡೆಯದಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ. ಹೆಚ್ಚಾಗಿ ಹೂ ಬೆಳೆಯುವ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ರಾಮನಗರ ಭಾಗಗಳಲ್ಲಿನ ರೈತರು ಪಿತೃಪಕ್ಷದಲ್ಲಿ ಹೂವಿನ ಬೆಲೆ ಇರುವುದಿಲ್ಲ ಎಂದು ಬೆಳೆ ಬೆಳೆಯಲು ಹಿಂದೇಟು ಹಾಕಿದ್ದು, ದಸರಾಗೆ ಹೂ ಬರುವಂತೆ ನಾಟಿ ಮಾಡಿದ್ದಾರೆ.
ದಸರಾಗೆ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪಕ್ಷ ಹಾಗೂ ಪೂಜೆಗೆ ಮಾತ್ರ ಹೂ ಬಳಸಲಾಗುತ್ತದೆ. ಯಾವುದೇ ಮದುವೆ, ಮುಂಜಿ, ಶುಭ ಕಾರ್ಯಗಳು ನಡೆಯುವುದಿಲ್ಲ. ಹಾಗಾಗಿ ಹೂವಿಗೆ ಬೇಡಿಕೆ ಇಲ್ಲದ ಕಾರಣ ಬೆಲೆ ಕುಸಿತವಾಗಿದೆ.
ರೈತರು ಕೊಯ್ಲು ಮಾಡಿ ಮಾರುಕಟ್ಟೆಗೆ ತಂದ ಹೂವು ಕೊಳ್ಳುವವರಿಲ್ಲದೆ ಕೇಳಿದ್ದಷ್ಟಕ್ಕೆ ಕೊಟ್ಟು ಹೋಗುತ್ತಿದ್ದಾರೆ. ಇದರಿಂದ ಸಾಗಾಣಿಕೆ ಹಾಗೂ ಹೂ ಕೊಯ್ಲಿನ ವೆಚ್ಚವೂ ಕೂಡ ಬರುತ್ತಿಲ್ಲ. ಇನ್ನೂ ಕೆಲವು ರೈತರು ಹೂವನ್ನು ಕಟಾವು ಮಾಡದೆ ಜಮೀನಿನಲ್ಲಿ ಹಾಗೇ ಬಿಟ್ಟಿದ್ದಾರೆ.
ಏನೇ ಬೆಲೆ ಕುಸಿತವಾಗಲಿ, ಏರಲಿ ರೈತರಿಗೆ ಅನುಕೂಲವಾಗುವುದಿಲ್ಲ. ಏನಿದ್ದರೂ ವ್ಯಾಪಾರಿಗಳಿಗೆ, ದಲ್ಲಾಳಿಗಳಿಗೆ, ಮಂಡಿಯವರಿಗೆ ಅನುಕೂಲವಾಗುತ್ತದೆ ಎಂದು ರೈತರೊಬ್ಬರು ತಿಳಿಸಿದ್ದಾರೆ.ಸೇವಂತಿಗೆ ಕೆಜಿಗೆ 40ರೂ., ಮಾರಿಗೋಲ್‌್ಡ 60ರೂ., ಸುನಾಮಿ ರೋಜ್ 50ರೂ., ಕಾಕಡ ಹೂ 250ರೂ., ಸುಗಂಧ ರಾಜ 250ರೂ.ಗೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ.