ಬೆಂಗಳೂರು : ಇಡೀ ರಾಷ್ಟ್ರದಲ್ಲಿಯೇ ಸೂಜಿಗಲ್ಲಿನಂತೆ ಜನರ ಗಮನ ಸೆಳೆದಿರುವ ಲೋಕಸಭಾ ಕ್ಷೇತ್ರ ಬೆಂಗಳೂರು ಗ್ರಾಮಾಂತರ. ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರು ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಸಂಸದ ಡಿ.ಕೆ.ಸುರೇಶ್ ಘೋಷಣೆಯಾಗಿದ್ದು, ನಾಲ್ಕನೇ ಬಾರಿಗೆ ಸ್ಪರ್ಧೆಗಿಳಿಯಲಿದ್ದಾರೆ.
ಸತತ ಮೂರು ಬಾರಿ ಗೆದ್ದಿರುವ ಸುರೇಶ್ ಹಾಗೂ ಮೊದಲ ಬಾರಿಗೆ ಸ್ಪರ್ಧೆ ಮಾಡುತ್ತಿರುವ ಮಂಜುನಾಥ್ ಅವರ ಸ್ಪರ್ಧೆಯಿಂದಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಲೋಕಸಭಾ ಚುನಾವಣೆಯಲ್ಲಿ ಹೈ ವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿದೆ. ಹೀಗಾಗಿ ರಾಜ್ಯ ಮಾತ್ರವಲ್ಲದೆ ದೇಶದಲ್ಲಿಯೇ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರವಾಗಿದೆ.
ಈ ಕ್ಷೇತ್ರದ ಮತ್ತೊಂದು ಪ್ರಮುಖ ವಿಶೇಷವೆಂದರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕುಟುಂಬಗಳ ರಾಜಕೀಯ ಕಾರ್ಯಕ್ಷೇತ್ರವೂ ಆಗಿದೆ. ಎರಡೂ ಕುಟುಂಬಗಳು ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸೋಲು-ಗೆಲುವನ್ನು ಕಂಡಿವೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕ್ಷೇತ್ರ ಪುನರ್‍ವಿಂಗಡಣೆಗೂ ಮುನ್ನ ಇದ್ದ ಕನಕಪುರ ಲೋಕಸಭಾ ಕ್ಷೇತ್ರದಲ್ಲಿ 1996 ರಲ್ಲಿ ಮೊದಲ ಬಾರಿಗೆ ಜನತಾದಳದಿಂದ ಸ್ರ್ಪಧಿಸಿ ಲೋಕಸಭೆ ಪ್ರವೇಶ ಮಾಡಿದ್ದರು. ಬಳಿಕ 1999 ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಸ್ರ್ಪಧಿಸಿ ಪರಾಭವಗೊಂಡಿದ್ದರು. ಇಲ್ಲಿಂದ ಡಿ.ಕೆ.ಶಿವಕುಮಾರ್ ಮತ್ತು ದೇವೇಗೌಡರ ಕುಟುಂಬದ ಸದಸ್ಯರ ನಡುವಿನ ಮುಖಾಮುಖಿ ಸ್ಪರ್ಧೆ ಆರಂಭಗೊಂಡಿದೆ.
ದೇವೇಗೌಡರಿಗೆ ಗೆಲುವು :
ದೇವೇಗೌಡರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಹಾಸನದಲ್ಲಿ ಪರಾಭವಗೊಂಡಿದ್ದರು. ಕನಕಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿದ್ದ ಎಂ.ವಿ.ಚಂದ್ರಶೇಖರ್ ಮೂರ್ತಿಯವರು ನಿಧನರಾದ ನಂತರ 2002 ರಲ್ಲಿ ಈ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ದೇವೇಗೌಡರು ಜೆಡಿಎಸ್‍ನಿಂದ ಸ್ರ್ಪಧಿಸಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ವಿರುದ್ಧ ಜಯ ಗಳಿಸಿದರು.
ಕನಕಪುರ ಕ್ಷೇತ್ರವು ನನಗೆ ರಾಜಕೀಯ ಪುನರ್‍ಜನ್ಮ ನೀಡಿದೆ ಎಂದು ದೇವೇಗೌಡರು ಬಿಂಬಿಸಿಕೊಂಡಿದ್ದರು. ಬಳಿಕ 2004 ರಲ್ಲಿ ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ದೇವೇಗೌಡರು ಕನಕಪುರ ಮತ್ತು ಹಾಸನ ಎರಡೂ ಕ್ಷೇತ್ರಗಳಲ್ಲಿ ಸ್ರ್ಪಧಿಸಿದ್ದರು.
ಹಾಸನದಲ್ಲಿ ಜಯ ಗಳಿಸಿದ್ದರೆ ಕನಕಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ತೇಜಸ್ವಿನಿ ಶ್ರೀ ರಮೇಶ್ ಅವರ ವಿರುದ್ಧ ಪರಾಭವಗೊಂಡಿದ್ದರು. ಕ್ಷೇತ್ರ ಪುನರ್ ವಿಂಗಡಣೆ ನಂತರ ಕನಕಪುರ ಲೋಕಸಭಾ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಕ್ಷೇತ್ರವಾಗಿ ಮಾರ್ಪಾಡಾಯಿತು. ಸಾತನೂರು ವಿಧಾನಸಭಾ ಕ್ಷೇತ್ರ ಇತಿಹಾಸದ ಪುಟ ಸೇರಿ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ವಿಲೀನವಾಯಿತು. ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ರ್ಪಧಿಸಿದ್ದ ಕುಮಾರಸ್ವಾಮಿ ಜಯಗಳಿಸಿ ಎರಡನೇ ಬಾರಿಗೆ ಲೋಕಸಭೆ ಪ್ರವೇಶ ಮಾಡಿದರು.
ಅನಿತಾ ಕುಮಾರಸ್ವಾಮಿ ಸೋಲು :
2013 ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾದ ಕುಮಾರಸ್ವಾಮಿ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಡಿ.ಕೆ.ಸುರೇಶ್ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ರ್ಪಧಿಸಿ ಜಯ ಗಳಿಸಿದರು.
ಈ ಚುನಾವಣೆಯಲ್ಲಿ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಜೆಡಿಎಸ್‍ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆನಂತರ 2014 ಹಾಗೂ 2019 ರ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಕಾಂಗ್ರೆಸ್‍ನಿಂದ ಸ್ರ್ಪಧಿಸಿ ಚುನಾಯಿತರಾದರು. 2014ರಲ್ಲಿ ದೇವೇಗೌಡರ ಕುಟುಂಬಕ್ಕೆ ಸೇರಿದ ಯಾರೂ ಕೂಡ ಈ ಕ್ಷೇತ್ರದಿಂದ ಸ್ರ್ಪಧಿಸಿರಲಿಲ್ಲ. 2019 ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದ ಪರಿಣಾಮ ಡಿ.ಕೆ.ಸುರೇಶ್ ಅವರಿಗೆ ಜೆಡಿಎಸ್ ಬೆಂಬಲ ನೀಡಿತ್ತು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡ ಬೆನ್ನಲ್ಲೇ ಉಭಯ ಪಕ್ಷಗಳ ನಡುವಿನ ಮೈತ್ರಿಗೂ ತಿಲಾಂಜಲಿ ನೀಡಲಾಯಿತು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ತಮ್ಮ ತಮ್ಮ ವೈರತ್ವ ಮರೆತು ಪ್ರಸಕ್ತ ಲೋಕಸಭಾ ಚುನಾವಣೆಗೂ ಮುನ್ನ ಒಂದಾಗಿವೆ. ಜೆಡಿಎಸ್-ಎನ್‍ಡಿಎ ಮೈತ್ರಿಕೂಟ ಸೇರಿದ್ದು, ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು, 3 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡುತ್ತಿದೆ.
ಮೂರನೇ ಬಾರಿ ಮುಖಾಮುಖಿ :
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಜೆಡಿಎಸ್ ಪಕ್ಷ ಬಿಜೆಪಿಗೆ ಬಿಟ್ಟುಕೊಟ್ಟಿದೆ. ಆದರೆ ದೇವೇಗೌಡರ ಅಳಿಯ ಡಾ.ಸಿ.ಎನ್.ಮಂಜುನಾಥ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ ಈ ಚುನಾವಣೆ ದೇವೇಗೌಡರ ಕುಟುಂಬ ಮತ್ತು ಡಿ.ಕೆ.ಶಿವಕುಮಾರ್ ಕುಟುಂಬದ ನಡುವಿನ ತೀವ್ರ ಹಣಾಹಣಿ ಸ್ಪರ್ಧೆಯಾಗಿದೆ. ಈ ಕ್ಷೇತ್ರದಲ್ಲಿ ಎರಡೂ ಕುಟುಂಬಗಳ ನಡುವೆ ನೇರ ಸ್ಪರ್ಧೆ ಏರ್ಪಟ್ಟು ನಡೆಯುತ್ತಿರುವ ಮೂರನೇ ಚುನಾವಣೆ ಇದಾಗಿದೆ. ಈ ಕ್ಷೇತ್ರದಲ್ಲಿ ಬೇರೆ ಅಭ್ಯರ್ಥಿಗಳು ಕಣಕ್ಕಿಳಿದರೂ ಪರೋಕ್ಷವಾಗಿ ಈ ಎರಡೂ ಕುಟುಂಬದ ನಡುವೆಯೇ ಪೈಪೋಟಿ ಕಂಡುಬರುತ್ತದೆ.
ಪ್ರಬಲ ರಾಜಕೀಯ ಕುಟುಂಬಗಳ ನಡುವಿನ ಜಿದ್ದಾಜಿದ್ದಿನ ರಾಜಕೀಯ ಸ್ಪರ್ಧೆಯಾಗಿ ಚುನಾವಣೆ ಕಂಡುಬರುತ್ತಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಎರಡನೇ ಕ್ಷೇತ್ರವೆಂದರೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ. ಇದು ತಮಿಳುನಾಡು ಗಡಿಯಿಂದ ಶಿವಗಂಗೆ ಬೆಟ್ಟದವರೆಗೂ ಭೌಗೋಳಿಕ ವ್ಯಾಪ್ತಿಯನ್ನು ಹೊಂದಿದೆ. ಈ ಕ್ಷೇತ್ರದಲ್ಲಿ 27,63,910 ಮತದಾರರಿದ್ದು, ಈ ಪೈಕಿ 14,06,042 ಪುರುಷ, 13,57,547 ಮಹಿಳಾ ಹಾಗೂ 321 ತೃತೀಯ ಲಿಂಗಿ ಮತದಾರರಿದ್ದಾರೆ. 241 ಸಾಗರೋತ್ತರ, 20,405 ದಿವ್ಯಾಂಗ, 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು 24,514, ಯುವ ಮತದಾರರು 47,356 ಹಾಗೂ 375 ಸೇವಾ ಮತದಾರರಿದ್ದಾರೆ.
ಕಾಂಗ್ರೆಸ್-5, ಎನ್‍ಡಿಎ-3 ಕ್ಷೇತ್ರಗಳಲ್ಲಿ ಗೆಲುವು :
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕನಕಪುರ, ಆನೇಕಲ್, ರಾಮನಗರ, ಮಾಗಡಿ, ಕುಣಿಗಲ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. ಬೆಂಗಳೂರು ದಕ್ಷಿಣ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ(ಕುಮಾರಸ್ವಾಮಿ) ಗೆದ್ದಿದ್ದಾರೆ.
ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಚುನಾಯಿತರಾಗಿದ್ದರೂ ಬಿಜೆಪಿ ಮತ್ತು ಜೆಡಿಎಸ್ ಗಳಿಸಿದ್ದ ಮತಗಳು ಕಾಂಗ್ರೆಸ್‍ಗಿಂತ ಹೆಚ್ಚಾಗಿವೆ. ಜೆಡಿಎಸ್‍ಗಿಂತ ಬಿಜೆಪಿ ಪಡೆದ ಮತಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಂಜುನಾಥ್ ಅವರನ್ನು ಜೆಡಿಎಸ್ ಬದಲಾಗಿ ಬಿಜೆಪಿಯಿಂದ ಕಣಕ್ಕಿಳಿಸಲು ಎನ್‍ಡಿಎ ಮೈತ್ರಿಕೂಟದ ನಾಯಕರು ನಿರ್ಧರಿಸಿದ್ದಾರೆ.
ಜೆಡಿಎಸ್ ಮತ್ತು ಬಿಜೆಪಿ ಮತಗಳು ಒಗ್ಗೂಡಿದರೆ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ಎನ್‍ಡಿಎ ನಾಯಕರಲ್ಲಿದೆ. ಹಾಗೆಯೇ ಐದು ಕ್ಷೇತ್ರಗಳಲ್ಲಿ ಶಾಸಕರನ್ನು ಹೊಂದಿರುವ ಹಾಗೂ ಹಾಲಿ ಸಂಸದರಾಗಿರುವ ಸುರೇಶ್ ಅವರಿಗೆ ಅನುಕೂಲಕರವಾಗಲಿದೆ, ರಾಜ್ಯಸರ್ಕಾರದ ಪಂಚ ಗ್ಯಾರಂಟಿಗಳು ನೆರವಿಗೆ ಬರಲಿವೆ ಎಂಬ ಲೆಕ್ಕಾಚಾರ ಕೂಡ ಕಾಂಗ್ರೆಸ್‍ನಲ್ಲಿದೆ.
ಚುನಾವಣೆ ಘೋಷಣೆಯಾಗಿದ್ದು, ಇನ್ನೂ ಅಧಿಸೂಚನೆ ಹೊರಬಿದ್ದಿಲ್ಲ. ಆದರೂ ಕ್ಷೇತ್ರದೆಲ್ಲೆಡೆ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕಣಕ್ಕಿಳಿಯಲಿರುವ ಈ ಇಬ್ಬರೂ ಅಭ್ಯರ್ಥಿಗಳ ಬಗ್ಗೆಯೇ ಚರ್ಚೆಗಳಾಗುತ್ತಿದ್ದು, ಬಿರುಸಿನ ಪ್ರಚಾರವೂ ನಡೆಯುತ್ತಿದೆ.