Sunday, June 30, 2024
Homeರಾಜಕೀಯವಿಧಾನಪರಿಷತ್‌ ಚುನಾವಣೆಯಲ್ಲೂ ಕುಟುಂಬ ರಾಜಕಾರಣ : ಕಾರ್ಯಕರ್ತರ ಅಸಮಾಧಾನ

ವಿಧಾನಪರಿಷತ್‌ ಚುನಾವಣೆಯಲ್ಲೂ ಕುಟುಂಬ ರಾಜಕಾರಣ : ಕಾರ್ಯಕರ್ತರ ಅಸಮಾಧಾನ

ಬೆಂಗಳೂರು, ಮೇ 25- ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯಲ್ಲೂ ಕುಟುಂಬ ರಾಜಕಾರಣಕ್ಕೆ ಹಾಗೂ ಈಗಾಗಲೇ ಸಾಕಷ್ಟು ಅವಕಾಶ ಪಡೆದವರಿಗೆ ಮತ್ತೆ ಮಣೆ ಹಾಕುತ್ತಿರುವುದು ಕಾರ್ಯಕರ್ತರ ಅಸಹನೆಗೆ ಕಾರಣವಾಗಿದೆ. 2023 ರ ಜೂನ್‌ 23 ರಂದು ಸಚಿವ ಎನ್‌.ಎಸ್‌‍.ಬೋಸರಾಜ್‌ ಅವರನ್ನು ವಿಧಾನಪರಿಷತ್‌ಗೆ ನೇಮಕ ಮಾಡಲಾಗಿತ್ತು. ಈಗ ಮರಳಿ ಅವರನ್ನು ಮೇಲ್ಮನೆಗೆ ಕಳುಹಿಸಲು ತಯಾರಿಗಳಾಗುತ್ತಿವೆ. ಕೆ.ಎ.ಗೋವಿಂದರಾಜು ಕೂಡ ಎರಡನೇ ಬಾರಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಇದರ ಜೊತೆಗೆ ಮಾಜಿ ಸಚಿವ ಎಚ್‌.ಎಂ.ರೇವಣ್ಣ ಪಂಚಖಾತ್ರಿಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿದ್ದು, ಕ್ಯಾಬಿನೇಟ್‌ ದರ್ಜೆಯ ಸ್ಥಾನಮಾನ ಹೊಂದಿದ್ದಾರೆ. ಆದರೂ ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಆರ್‌.ವಿ.ವೆಂಕಟೇಶ್‌, ವಿ.ಆರ್‌.ಸುದರ್ಶನ್‌, ಬಿ.ಎಲ್‌.ಶಂಕರ್‌, ವಿ.ಎಸ್‌‍.ಉಗ್ರಪ್ಪ, ರಾಣಿಸತೀಶ್‌, ಬಿ.ಆರ್‌.ಪಾಟೀಲ್‌, ಎಂ.ಸಿ.ವೇಣುಗೋಪಾಲ್‌, ಪಿ.ಆರ್‌.ರಮೇಶ್‌, ಐವಾನ್‌ ಡಿಸೋಜಾ, ನಾರಾಯಣ ಸ್ವಾಮಿ, ಧರ್ಮಸೇನ, ಜಲಜಾ ನಾಯಕ್‌, ಮಲ್ಲಾಜಮ, ತೇಜಸ್ವಿನಿ ಗೌಡ, ಆರ್‌.ಶಂಕರ್‌, ಎಸ್‌‍.ಜಿ.ನಂಜಯ್ಯ ಹಿರೇಮಠ್‌, ಕೆ.ಶಿವಮೂರ್ತಿ, ಎಲ್‌.ಹನುಮಂತಯ್ಯ ಸೇರಿದಂತೆ ಅನೇಕರು ಈಗಾಗಲೇ ಅವಕಾಶ ಪಡೆದಿದ್ದು, ಮತೊಮ್ಮೆ ಪ್ರಯತ್ನಿಸುತ್ತಿದ್ದಾರೆ.

ಸಂಭವನೀಯ ಪಟ್ಟಿಯಲ್ಲಿರುವವರ ಪೈಕಿ ಯತೀಂದ್ರ ಸಿದ್ದರಾಮಯ್ಯ ಕುಟುಂಬ ರಾಜಕಾರಣದ ಅಪವಾದಕ್ಕೆ ಗುರಿಯಾಗಿದ್ದಾರೆ. ಇನ್ನು ಬಿಜೆಪಿಯಿಂದ ಕಾಂಗ್ರೆಸ್‌‍ಗೆ ವಲಸೆ ಬಂದಿರುವ ಕಲಬುರಗಿಯ ಬಾಬುರಾಜ್‌ ಚಿಂಚನಸೂರು ಮತ್ತು ಮಾಲೀಕಯ್ಯ ಗುತ್ತೇದಾರ್‌ ಅವರು ಟಿಕೆಟ್‌ಗಾಗಿ ಹಿರಿಯ ನಾಯಕರ ದುಂಬಾಲು ಬಿದ್ದಿದ್ದಾರೆ.

ಒಂದು ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ತವರು ಜಿಲ್ಲೆಯ ನಾಯಕರಿಗೆ ಅವಕಾಶ ನೀಡಲು ಇಚ್ಛಿಸಿದರೆ 7 ಸ್ಥಾನಗಳಲ್ಲಿ ಒಂದು ಕಡಿತಗೊಳ್ಳುತ್ತದೆ. ಹಾಗೂ ಹೀಗೂ ಉಳಿಯುವ ಮೂರ್ನಾಲ್ಕು ಸ್ಥಾನಗಳಿಗೆ ಮತ್ತದೇ ಹಳಬರು ಕುಟುಂಬದ ಹಿನ್ನಲೆಯುಳ್ಳವರೇ ಲಾಬಿ ನಡೆಸುತ್ತಿದ್ದಾರೆ. ಪಕ್ಷಕ್ಕಾಗಿ ದುಡಿದವರು ಪ್ರತಿಬಾರಿಯಂತೆ ಮೂಲೆಗುಂಪಾಗುವ ಚಡಪಡಿಕೆ ಕಂಡುಬರುತ್ತಿದೆ.

ಈ ಹಿಂದೆ ಮೂರು ನಾಮನಿರ್ದೇಶನದ ಸ್ಥಾನಗಳಿಗೆ ಐಆರ್‌ಎಸ್‌‍ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದು ಹೊಸದಾಗಿ ರಾಜಕಾರಣಕ್ಕೆ ಬಂದ ಸುಧಾಂದಾಸ್‌‍ ಅವರಿಗೆ ತೀವ್ರ ವಿರೋಧದ ನಡುವೆಯೂ ಮಣೆ ಹಾಕಲಾಯಿತು.

ಮಾಜಿ ಸಚಿವ ಎಂ.ಆರ್‌.ಸೀತಾರಾಮ್‌ ಕಾಂಗ್ರೆಸ್‌‍ನಿಂದ ಒಂದು ಕಾಲು ಹೊರಗಿಟ್ಟಿದ್ದರು. ಅವರಿಗೆ ಎಂ.ಎಲ್‌.ಸಿ ಸ್ಥಾನ ನೀಡಿದ್ದಲ್ಲದೆ, ಅವರ ಪುತ್ರ ರಕ್ಷಾ ರಾಮಯ್ಯ ಅವರಿಗೆ ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ. ಮಾಜಿ ಸಚಿವೆ ಉಮಾಶ್ರೀ ಕೂಡ ಅವಕಾಶ ಪಡೆದುಕೊಂಡರು.

ಮೂರು ಸ್ಥಾನಗಳಲ್ಲಿ ಸಾಮಾನ್ಯ ಕಾರ್ಯಕರ್ತರನ್ನು ಪರಿಗಣಿಸಲೇ ಇಲ್ಲ. ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌‍ ಪಕ್ಷಕ್ಕೆ ಗೆಲ್ಲುವ ಅನಿವಾರ್ಯತೆ ಇರುವುದರಿಂದಾಗಿ ಕುಟುಂಬ ರಾಜಕಾರಣ ಹಣದ ಪ್ರಭಾವಕ್ಕೆ ಅವಕಾಶ ನೀಡುವುದನ್ನು ಕಾರ್ಯಕರ್ತರು ಸಹಿಸಿಕೊಳ್ಳುತ್ತಿದ್ದಾರೆ.

ಆದರೆ ಪ್ರಸ್ತುತ ಪ್ರಮುಖ ಚುನಾವಣೆಗಳು ಮುಗಿದಿವೆ. ಈಗಲಾದರೂ ನಿಷ್ಠಾವಂತರನ್ನು ಗುರುತಿಸದೇ ಇದ್ದರೆ ಪಕ್ಷಕ್ಕೆ ಉಳಿಗಾಲ ಇರುವುದಿಲ್ಲ ಎಂಬ ಚರ್ಚೆಗಳು ನಡೆಯುತ್ತಿವೆ. ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವವರು ಅಥವಾ ಕನಿಷ್ಠ 5 ವರ್ಷ ಜವಾಬ್ದಾರಿ ನಿಭಾಯಿಸುವವರಿಗೆ ಅವಕಾಶ ನೀಡಬೇಕು. ದಶಕದಿಂದ ಅವಕಾಶ ವಂಚಿತರನ್ನು ಪರಿಗಣಿಸಬೇಕು.

ನಿಷ್ಠಾವಂತ ಹಾಗೂ ಹೊಸ ಮುಖಗಳನ್ನು ಪರಿಗಣಿಸಬೇಕು. 7 ವಿಧಾನಪರಿಷತ್‌ನ ಸ್ಥಾನಗಳ ಪೈಕಿ ಕನಿಷ್ಠ ಮೂರಕ್ಕಾದರೂ ಪ್ರಭಾವರಹಿತ, ಕೌಟುಂಬಿಕ ಹಿನ್ನೆಲೆ ಇಲ್ಲದಿರುವ ಪಕ್ಷನಿಷ್ಠರಿಗೆ ಅವಕಾಶ ನೀಡಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ.

RELATED ARTICLES

Latest News