ಮೈಸೂರು, ಫೆ.20- ಸಾರ್ವಜನಿಕರ ದೃಷ್ಟಿ ಬೀಳಬಾರದೆಂಬ ಕಾರಣಕ್ಕೆ ಭೂತದ ಮುಖವಾಡ ಇರುವ ಬೊಂಬೆಗಳನ್ನ ಹಾಕುವುದನ್ನು ನೋಡಿದ್ದೇವೆ. ಆದರೆ ಜಿಲ್ಲೆಯ ನಂಜನಗೂಡು ತಾಲೂಕಿನ ಕಕ್ಕರಹಟ್ಟಿ ಗ್ರಾಮದ ರೈತನೊಬ್ಬ ವಿನೂತನ ಐಡಿಯಾ ಹುಡುಕಿದ್ದಾನೆ. ಅರೆಬೆತ್ತಲೆಯಾಗಿ ಇರುವ ಮಾಡೆಲ್‌ಗಳ ಫೋಟೋಗಳನ್ನು ತನ್ನ ಜಮೀನಿನ ಸುತ್ತ ಅಳವಡಿಸಿ ಗ್ರಾಮಸ್ಥರ ಚರ್ಚೆಗೆ ಗ್ರಾಸವಾಗಿದ್ದಾರೆ.
ನಂಜನಗೂಡಿನಿಂದ ಮಡಹಳ್ಳಿ ಹಾಗೂ ತಗಡೂರು ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಇರುವ ಕಕ್ಕರಹಟ್ಟಿ ಗ್ರಾಮದ ರೈತ ಸೋಮೇಶ್ ಇಂತಹ ವಿನೂತನವಾದ ಐಡಿಯಾ ಹುಡುಕಿ ಚರ್ಚೆಗೆ ಗ್ರಾಸವಾಗಿದ್ದಾನೆ.
ತನ್ನ ನಾಲ್ಕು ಎಕರೆಯಲ್ಲಿ ಬೆಳೆದ ಬಾಳೆ ಬೆಳೆ ಸೊಗಸಾಗಿ ಮೂಡಿ ಬಂದಿದೆ. ಬೆಳೆ ಮೇಲೆ ಸಾರ್ವಜನಿಕರ ದೃಷ್ಟಿ ಬೀಳಬಾರದು ಎಂಬ ಕಾರಣಕ್ಕೆ ದೃಷ್ಟಿ ಬೊಂಬೆಗಳನ್ನು
ಅಳವಡಿಸುವ ಬದಲು ಮಾಡೆಲ್‌ಗಳ ಅರೆಬೆತ್ತಲೆ ಫೋಟೋಗಳನ್ನು ಅಳವಡಿಸಿದ್ದಾನೆ.
ಜಮೀನಿನ ಸುತ್ತು ಸುಮಾರು 10 ಸ್ಥಳಗಳಲ್ಲಿ ಮಾಡೆಲ್‌ಗಳ ಚಿತ್ರಗಳು ರಾರಾಜಿಸುತ್ತಿವೆ.
ದಾರಿಹೋಕರಂತೂ ಸೊಗಸಾಗಿ ಸಮೃದ್ಧಿಯಾಗಿ ಬೆಳೆದ ಬಾಳೆ ಗಿಡಗಳ ಮೇಲೆ ದೃಷ್ಟಿ ಹರಿಸದೆ ಮಾಡೆಲ್ಗಳನ್ನು ಕಣ್ಣುಂಬಿಕೊಂಡು ಸಾಗುತ್ತಿದ್ದಾರಂತೆ.
ರೈತ ಸೋಮೇಶ್ ಐಡಿಯಾ ಕೆಲವು ಗ್ರಾಮಸ್ಥರನ್ನು ಕೆರಳಿಸಿದರೆ ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವುದಂತೂ ನಿಜ.
ಒಟ್ಟಾರೆ ಸೋಮೇಶ್‌ರವರ ಐಡಿಯಾನ ಹೊಗಳಬೇಕೋತೆ? ಅಥವಾ ತೆಗಳಬೇಕೋ? ಗ್ರಾಮಸ್ಥರ ನಿರ್ಧಾರಕ್ಕೆ ಬಿಟ್ಟಿದ್ದು.