ಬೆಂಗಳೂರು,ನ.5- ಭೂಸ್ವಾಧೀನಗೊಂಡ ಜಮೀನಿಗೆ ಹಲವಾರು ವರ್ಷಗಳಿಂದ ಪರಿಹಾರ ಸಿಕ್ಕಿಲ್ಲ, ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ನಿನ್ನೆ ಬೆಂಕಿ ಹಚ್ಚಿಕೊಂಡು ಆತಹತ್ಯೆಗೆ ಯತ್ನಿಸಿದ್ದ ರೈತ ಮಂಜೇಗೌಡ ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ ಮೃತಪಟ್ಟಿದ್ದಾರೆ.
ಕೆ.ಆರ್‌ಪೇಟೆ ತಾಲ್ಲೂಕಿನ ಮೂಡನಹಳ್ಳಿಯ ಮಂಜೇಗೌಡ ಅವರು ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಬಳಿ ಬಂದು ತಮ ಜಮೀನನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದ್ದರು.
ಆದರೆ ಅಲ್ಲಿನ ಅಧಿಕಾರಿಗಳು ಸ್ಪಂದಿಸದೇ, ಜಿಲ್ಲಾಧಿಕಾರಿ ಭೇಟಿಗೂ ಅವಕಾಶ ಕೊಡದ ಹಿನ್ನಲೆಯಲ್ಲಿ ಸಮೀಪದಲ್ಲೇ ಇದ್ದ ಉದ್ಯಾವನಕ್ಕೆ ಹೋಗಿ ಮೈಮೇಲೆ ಪೆಟ್ರೋಲ್ ಸುರಿದು ಕೊಂಡು ಮಂಜೇಗೌಡ ಆತಹತ್ಯೆಗೆ ಪ್ರಯತ್ನಿಸಿದ್ದರು. ಸ್ಥಳದಲ್ಲಿ ಇದ್ದ ಸಾರ್ವಜನಿಕರು ಬೆಂಕಿಯನ್ನು ನಂದಿಸಿ ಅವರನ್ನು ರಕ್ಷಿಸಿ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು.
ಈ ವೇಳೆ ಕೆಲ ಮಾಧ್ಯಮದ ಜೊತೆ ಮಾತನಾಡಿದ್ದ ಮಂಜೇಗೌಡ ಅವರು, ತಹಸೀಲ್ದಾರ್ ಸೇರಿದಂತೆ ಯಾವೊಬ್ಬ ಅಧಿಕಾರಿಯು ನನಗೆ ಸಹಾಯ ಮಾಡುತ್ತಿಲ್ಲ. ನನಗಿದ್ದ ಜಮೀನನ್ನು ಅರಣ್ಯ ಇಲಾಖೆಯವರು ವಶಪಡಿಸಿಕೊಂಡಿದ್ದಾರೆ. ಸರ್ಕಾರವೂ ಕೂಡ ನೆರವಾಗುತ್ತಿಲ್ಲವೆಂದು ನೋವು ತೋಡಿಕೊಂಡಿದ್ದರು.ಆದರೆ ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ವಿಷಯ ತಿಳಿದು ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದೆ.
