ಬೆಂಗಳೂರು,ಏ.8- ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ, ಕೂಲಿ ಕಾರ್ಮಿಕರ ಕೊರತೆ, ದುಬಾರಿ ರಸಗೊಬ್ಬರದ ನಡುವೆ ಕಷ್ಟಪಟ್ಟು ಬೆಳೆದ ಟೊಮ್ಯಾಟೊ ಬೆಲೆ ಮಾರುಕಟ್ಟೆಯಲ್ಲಿ ತೀವ್ರ ಕುಸಿತವಾಗಿದ್ದು, ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಟರಿ ಬೆಳೆಯೆಂದೇ ಕರೆಯುವ ಕೆಂಪು ಸುಂದರಿ ಟೊಮ್ಯಾಟೊ ಬೆಲೆ ಒಮ್ಮೊಮ್ಮೆ ಶತಕ ಬಾರಿಸುತ್ತದೆ. ಮತ್ತೊಮ್ಮೆ ಪಾತಾಳ ತಲುಪುತ್ತದೆ. ಇದರಿಂದ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.
ಒಂದು ಎಕರೆಯಲ್ಲಿ ಟೊಮ್ಯಾಟೊ ಬೆಲೆಯು ಕನಿಷ್ಠ 25 ರಿಂದ 30 ಸಾವಿರಕ್ಕೂ ಹೆಚ್ಚು ವೆಚ್ಚವಾಗುತ್ತದೆ. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ 20 ಕೆಜಿ ತೂಕದ ಒಂದು ಟ್ರೇಗೆ 50 ರಿಂದ 100 ರೂ.ಗೆ ಮಾರಾಟವಾಗುತ್ತದೆ. ಚಿಲ್ಲರೆಯಾಗಿ ಕೆಜಿಗೆ 8 ರಿಂದ 10 ರೂ.ಗೆ ಮಾರಾಟಗೊಳ್ಳುತ್ತದೆ. ಇದರಿಂದ ಕೂಲಿ ವೆಚ್ಚವು ಸಿಗುತ್ತಿಲ್ಲ ಎಂದು ಕೆಲ ರೈತರು ಟೊಮ್ಯಾಟೊ ಕೀಳದೇ ತೋಟದಲ್ಲಿಯೇ ಬಿಡುತ್ತಿದ್ದಾರೆ. ಇನ್ನೂ ಕೆಲವರು ಮಾರುಕಟ್ಟೆಗೆ ತಂದು ಬೆಲೆ ಸಿಗದೆ ನೊಂದು ಅಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ.
ಬೆಲೆ ಕುಸಿತದಿಂದ ಮನನೊಂದ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಉತ್ತಂಗಿಯಲ್ಲಿ ರೈತರು ಟೊಮ್ಯಾಟೊವನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ದೊಡ್ಡ ಮಾರುಕಟ್ಟೆಯಾದ ಕೋಲಾರದ ಟೊಮ್ಯಾಟೊ ಮಾರುಕಟ್ಟೆಯಲ್ಲಿ ಕೇಳುವವರಿಲ್ಲದೆ ವ್ಯಾಪಾರ ಭಾರೀ ಕುಸಿತವಾಗಿದೆ.
ಇಲ್ಲಿಂದ ನೆರೆಯ ಆಂಧ್ರ, ತಮಿಳುನಾಡು, ಕೇರಳ ಪ್ರದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮ್ಯಾಟೊ ರಫ್ತಾಗುತ್ತಿತ್ತು. ಆದರೆ ಅಲ್ಲಿಂದಲೂ ಸಹ ವ್ಯಾಪಾರಿಗಳು ಬಾರದಿರುವುದರಿಂದ ಬೆಲೆ ಕುಸಿತವಾಗಿದೆ ಎಂದು ವರ್ತಕರು ತಿಳಿಸಿದ್ದಾರೆ.