ಬೆಂಗಳೂರು, ಮಾ.27- ನೆತ್ತಿ ಸುಡುವ ಬಿಸಿಲು, ವಿದ್ಯುತ್ ಕಣ್ಣಾಮುಚ್ಚಾಲೆ ನಡುವೆ ಸಾಲಸೋಲ ಮಾಡಿ ಕಷ್ಟಪಟ್ಟು ಬೆಳೆದ ಟೊಮ್ಯಾಟೋ ಬೆಲೆ ಪಾತಾಳ ತಲುಪಿದ್ದು, ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನದಿದಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ನೀರಿನ ಅಭಾವದಿಂದ ಭಾರೀ ತೊಂದರೆಪಟ್ಟು ಬೆಳೆದಿದ್ದ ಟೊಮ್ಯಾಟೋ ಬೆಲೆಯಲ್ಲಿ ಭಾರೀ ಕುಸಿತವಾಗಿದ್ದು, ಇಟ್ಟ ಖರ್ಚು ಕೂಡ ಬಾರದೆ ತೋಟದಲ್ಲಿ ಬಿಟ್ಟಿದ್ದು, ಹಣ್ಣಾಗಿ ಜಮೀನಿನಲ್ಲಿ ಕೆಂಡದಂತೆ ಕಾಣುತ್ತಿವೆ.
ಲಾಟರಿ ಬೆಳೆ ಎಂದು ಕರೆಯಲಾಗಿರುವ ಟೊಮ್ಯಾಟೋ ಒಮ್ಮೊಮ್ಮೆ ಶತಕ ಬಾರಿಸುವುದು…. ತಡಚಿರುವುದಿಲ್ಲ ಕುಸಿಯುವುದು ತಡವಿಲ್ಲ. ಟೊಮ್ಯಾಟೋ ಇಲ್ಲದೆ ಯಾವ ಅಡುಗೆ ತಿಂಡಿಯೂ ಕೂಡ ರುಚಿಕೊಡುವುದಿಲ್ಲ. ಹಾಗಿಗಿದ್ದರೂ ಸಹ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದಿಲ್ಲ.
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಮಾಗಡಿ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಟೊಮ್ಯಾಟೋ ಬೆಳೆಯಲಾಗುತ್ತಿದೆ.
ಈ ಬಾರಿ ಬಿಸಿಲು ಹೆಚ್ಚಾಗಿರುವುದಿರಂದ ರೋಗಬಾಧೆ ಕಾಡದೆ ಇಳುವರಿ ಹೆಚ್ಚಾಗಿ ಬಂದಿದ್ದು, ಮಾರುಕಟ್ಟೆಗೆ ಹೆಚ್ಚು ಮಾಲು ಬರುತ್ತಿದ್ದು, ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಮಾರುಕಟ್ಟೆಯಿಂದ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳು ನಾಡು, ಕೇರಳಕ್ಕೆ ಹೆಚ್ಚು ಟೊಮ್ಯಾಟೋ ರಫ್ತಾಗುತ್ತಿತ್ತು. ಆದರೆ ಅಲ್ಲೂ ಕೂಡ ಹೆಚ್ಚು ಬೆಳೆ ಬೆಳೆಯಲಾಗಿದ್ದು, ಅಲ್ಲಿನ ವ್ಯಾಪಾರಿಗಳು ರಾಜ್ಯಕ್ಕೆ ಬಾರದಿರುವುದರಿಂದ ಬೇಡಿಕೆ ಕಡಿಮೆಯಾಗಿದೆ.
ಇದರ ಜತೆಗೆ ಬಿಸಿಲು ಹೆಚ್ಚಾಗಿರುವುದರಿಂದ ಟೊಮ್ಯಾಟೋ ಬೇಗ ಬರುತ್ತದೆ. ಹಣ್ಣೂ ಕೂಡ ಬೇಗ ಆಗುತ್ತವೆ. ಆದ್ದರಿಂದ ಉತ್ಪಾದನೆ ಹೆಚ್ಚಾಗಿ ಬೇಡಿಕೆ ಕಡಿಮೆಯಾಗಿದೆ. ಈ ಬಾರಿ ಬೇಸಿಗೆ ಇರುವುದರಿಂದ ತರಕಾರಿ ಬೆಲೆ ಹೆಚ್ಚಾಗಲಿದೆ ಎಂದು ಬಹಳಷ್ಟು ರೈತರು ಹೆಚ್ಚು ಬೆಳೆ ಬೆಳೆದಿದ್ದಾರೆ. ಆದ್ದರಿಂದ ಬೆಲೆ ಕುಸಿತವಾಗಿದೆ.
ಮಾರುಕಟ್ಟೆಯಲ್ಲಿ 15 ಕೆಜಿ ತೂಕದ ಒಂದು ಕ್ರೇಟ್ 80 ರಿಂದ 100 ರೂ.ಗೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ ಚಿಲ್ಲರೆಯಾಗಿ ಕೆಜಿಗೆ 10 ರೂ.ಗೆ ಮಾರಾಟವಾಗುತ್ತಿದೆ. ಇದರಿಂದ ಕೂಲಿ, ಸಾಗಾಟ, ಕಮಿಷನ್, ಸೇರಿದರೆ ರೈತನಿಗೆ ಏನೂ ಉಳಿಯುವುದಿಲ್ಲ. ಇದರಿಂದ ಮನನೊಂದ ಹಲವು ರೈತರು ಟೊಮ್ಯಾಟೋ ಕಟಾವು ಮಾಡದೆ ಜಮೀನಿನಲ್ಲಿ ಬಿಟ್ಟಿದ್ದಾರೆ. ಇನ್ನೂ ಕೆಲವು ರೈತರು ಮಾರುಕಟ್ಟೆಗೆ ತಂದರೂ ಕೂಡ ಬೆಲೆ ಸಿಗದೆ ಮಾರಾಟ ವಾಗದೆ ಇರುವುದರಿಂದ ರಸ್ತೆಬದಿ ಸುರಿದು ಹಾಗೂ ಜಾನುವಾರುಗಳಿಗೆ ಹಾಕುವಂತಾಗಿದೆ.