ಬೆಂಗಳೂರು,ಜು.23- ರೈತರ ಸಾಲಮನ್ನ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಸ್ಪಷ್ಟಪಡಿಸಿದ್ದಾರೆ. ವಿಧಾನಪರಿಷತ್‍ನಲ್ಲಿ ಸದಸ್ಯ ಸಿ.ಟಿ.ರವಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರೈತರಿಗೆ ಸಾಲ ಸೇರಿದಂತೆ ಅವರಿಗೆ ಆರ್ಥಿಕ ನೆರವು ನೀಡಲು ಸರ್ಕಾರ ಬದ್ಧವಾಗಿದೆ. ಆದರೆ ರೈತರ ಸಾಲಮನ್ನ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಪುನರುಚ್ಚರಿಸಿದರು.
ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಸಹಕಾರ ಸಂಘಗಳ ಮೂಲಕ ರೈತರಿಗೆ 25 ಸಾವಿರ ಕೋಟಿ ಅಲ್ಪಾವಧಿ, ಮಧ್ಯಮಾವಧಿ ಸಾಲವನ್ನು ನೀಡುತ್ತಿದೆ. ಹಣಕಾಸಿನ ಲಭ್ಯತೆ ನೋಡಿಕೊಂಡು ರೈತರಿಗೆ ಸಾಲ ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು. ಈ ಹಿಂದೆ ಯುಪಿಎ ಆಡಳಿತದಲ್ಲಿದ್ದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು 75 ಕೋಟಿ ಸಾಲವನ್ನು ಮನ್ನ ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು 50 ಸಾವಿರವರೆಗೂ ರೈತರ ಸಾಲ ಮನ್ನ ಮಾಡಿದ್ದರು.
ಸಮ್ಮಿಶ್ರ ಸರ್ಕಾರ ಇದ್ದಾಗ ಕುಮಾರಸ್ವಾಮಿ ಅವರು ಒಂದು ಲಕ್ಷ ಸಾಲ ಮನ್ನ ಮಾಡಿದ್ದಾರೆ. ಈಗ ಕೇಂದ್ರದಲ್ಲಿ ನಿಮ್ಮದೇ ಸರ್ಕಾರವಿದೆ. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ಸಾಲವನ್ನು ಮನ್ನಾ ಮಾಡುವಂತೆ ಒತ್ತಡ ಹಾಕಿ ಎಂದು ಸವಾಲು ಎಸೆದರು. ಅರ್ಜಿ ಹಾಕಿದ ಎಲ್ಲರಿಗೂ ಸಾಲ ಕೊಡಲು ಸಾಧ್ಯವಿಲ್ಲ. ಹಣಕಾಸಿನ ಲಭ್ಯತೆ ಮೇಲೆ ಸಾಲ ವಿತರಣೆ ಮಾಡುವ ವ್ಯವಸ್ಥೆ ಎಲ್ಲರ ಕಾಲದಲ್ಲೂ ಇದೆ. ಆದ್ಯತೆ ಮೇರೆಗೆ ಸಾಲವನ್ನು ನೀಡುತ್ತಾರೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಸಿ.ಟಿ.ರವಿ ಮಾತನಾಡಿ, ಬಜೆಟ್‍ನಲ್ಲಿ ಸಾಲ ಮನ್ನ ಮಾಡಿರುವುದಾಗಿ ನೀವೇ ಘೋಷಣೆ ಮಾಡಿದ್ದೀರಿ. ಈಗ ಮಾತು ತಪ್ಪುತ್ತಿರುವುದು ಏಕೆ ಎಂದು ಪ್ರಶ್ನೆ ಮಾಡಿದರು.ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.