ಬೆಂಗಳೂರು,ನ.6-ಅತ್ತ ಹಾವು ಸಾಯಲಿಲ್ಲ, ಇತ್ತ ಕೋಲು ಮುರಿಯಲಿಲ್ಲ ಎಂಬಂತಾಗಿದೆ ಕಬ್ಬುಬೆಳೆಗಾರರ ಹೋರಾಟ. ಸರ್ಕಾರ ತಮ ಬೆಳೆಗೆ ಸೂಕ್ತವಾದ ಬೆಲೆ ನಿಗಧಿ ಮಾಡುವಂತೆ ನಡೆಸುತ್ತಿರುವ ರೈತರ ಹೋರಾಟ 8ನೇ ದಿನಕ್ಕೆ ಕಾಲಿಟ್ಟಿದ್ದರೂ, ಸರ್ಕಾರ ಮಾತ್ರ ಕೇಂದ್ರದ ಕಡೆ ಕೈ ತೋರಿಸಿ ತನ್ನ ಜವಬ್ದಾರಿಯಿಂದ ನುಣಿಚಿಕೊಳ್ಳುವ ಚಾಣಕ್ಷತನ ಮೆರದಿದೆ.
ಪ್ರತಿ ಟನ್ ಕಬ್ಬಿಗೆ 3,500 ರೂ. ನಿಗಧಿ ಮಾಡಬೇಕೆಂದು ಪಟ್ಟು ಹಿಡಿದಿರುವ ಕಬ್ಬು ಬೆಳೆಗಾರರು, ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದು, 8ನೇ ದಿನಕ್ಕೆ ಕಾಲಿಟ್ಟಿದೆ.
ಇದರ ನಡುವೆಯೇ ಸಚಿವ ಸಂಪುಟ ಸಭೆ ಇಂದು ನಡೆಯಲಿದ್ದು, ಸರ್ಕಾರ ಬೆಲೆ ನಿಗಧಿ ಮಾಡುವ ಸಾಧ್ಯತೆ ಇದೆ. ಸಂಜೆಯೊಳಗೆ ರೈತರ ಬೇಡಿಕೆಗೆ ಸರ್ಕಾರ ಒಪ್ಪಿಕೊಳ್ಳದಿದ್ದರೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ.
ರೈತರ ಕಿಚ್ಚು ಹೆಚ್ಚಾಗುತ್ತಿದ್ದಂತೆಯೇ ಸರ್ಕಾರ ಹಿರಿಯ ಸಚಿವ ಹೆಚ್.ಕೆ.ಪಾಟೀಲ್ರನ್ನು ಸಂಧಾನಕ್ಕೆ ಕಳುಹಿಸಿದ್ದು ಮಾತುಕತೆ ವಿಫಲವಾಗಿದೆ. ಹಲವು ಸಂಘಟನೆಗಳು ರೈತರ ಹೋರಾಟಕ್ಕೆ ಬೆಂಬಲ ನೀಡಿವೆ. ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಭಟನೆಯ ಆಖಾಡಕ್ಕಿಳಿದ ನಂತರ ರೈತರ ಹೋರಾಟ ತೀವ್ರಗತಿ ಪಡೆದುಕೊಂಡಿದೆ.
ಬೆಳಗಾವಿ ಹಾಗೂ ವಿಜಯಪುರ ಕಬ್ಬು ಹೋರಾಟಗಾರರು ಸಚಿವರ ಮನವಿಗೆ ಮಣೆ ಹಾಕದೇ ಸಂಜೆವರೆಗಿನ ಅಂತಿಮ ಗಡುವು ಕೊಟ್ಟಿದ್ದಾರೆ. ಸಂಜೆಯೊಳಗೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವಿಗೆ ಬರದಿದ್ದರೆ ಪಂಜಾಬ್ ಮಾದರಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯಿಂದ ಆರಂಭವಾದ ಹೋರಾಟ ರಾಜ್ಯದ ಎಲ್ಲ ಭಾಗಗಳಿಗೂ ವ್ಯಾಪಿಸಿದೆ.
ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ರೈತರು ರಸ್ತೆ ತಡೆ, ಧರಣಿ, ರ್ಯಾಲಿ ಮತ್ತು ಪ್ರತಿಭಟನೆಗಳ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬೆಳಗಾವಿಯ ಪ್ರಮುಖ ಹೆದ್ದಾರಿಗಳು ಹಾಗೂ ನಗರ ಪ್ರದೇಶಗಳಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಪ್ರತಿಭಟನೆಗಳ ತೀವ್ರತೆ ಹೆಚ್ಚುತ್ತಿರುವಂತೆ ಹಾಲು, ಹಣ್ಣು, ತರಕಾರಿ ಪೂರೈಕೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಸಣ್ಣಪುಟ್ಟ ವ್ಯಾಪಾರ ಮಳಿಗೆಗಳು ಮುಚ್ಚಲ್ಪಟ್ಟಿದ್ದು, ಹಳ್ಳಿಗಳಿಂದ ನಗರಗಳಿಗೆ ಸರಕು ಸಾಗಣೆ ನಿಂತು ಹೋಗಿದೆ. ಹಲವೆಡೆ ಸಭೆ, ಮದುವೆ, ಸಾರ್ವಜನಿಕ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿವೆ.
ಕಳೆದ ಮೂರು ದಿನಗಳಿಂದ ಅನೇಕ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಓದು ಹಾಳಾಗುತ್ತಿರುವಂತೆಯೇ, ದಿನಗೂಲಿ ಆದಾಯದ ಮೇಲೆ ಬದುಕುವ ವರ್ಗಕ್ಕೆ ಸಂಕಷ್ಟ ಎದುರಾಗಿದೆ. ರೈತರು ತಮ ಬೇಡಿಕೆಗಳ ಬಗ್ಗೆ ಸರ್ಕಾರದಿಂದ ಸ್ಪಷ್ಟ ಪ್ರತಿಕ್ರಿಯೆ ಬಯಸುತ್ತಿದ್ದರೂ, ಸರ್ಕಾರ ಮೌನ ಕಾಯ್ದುಕೊಂಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಹೋರಾಟಗಾರರು ಹಿಂದೆ ಸರಿಯುವ ಸೂಚನೆ ಇಲ್ಲದಿರುವುದರಿಂದ ರಾಜ್ಯದಲ್ಲಿ ಆರ್ಥಿಕ ಅಸ್ತವ್ಯಸ್ತತೆ ಹೆಚ್ಚುವ ಸಾಧ್ಯತೆಗಳಿವೆ.
ಈ ಹೋರಾಟ ಮುಂದುವರಿದರೆ ರಾಜ್ಯದ ಕೃಷಿ ವಲಯದ ಜೊತೆಗೆ ಸಾರಿಗೆ, ವಾಣಿಜ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೂ ತೀವ್ರ ನಷ್ಟ ಸಂಭವಿಸಬಹುದು. ಸರ್ಕಾರ ತಕ್ಷಣ ಮಧ್ಯಸ್ಥಿಕೆ ವಹಿಸಿ ರೈತರ ಬೇಡಿಕೆಗಳಿಗೆ ತುರ್ತು ಪರಿಹಾರ ನೀಡದಿದ್ದರೆ, ಆರ್ಥಿಕ ಸಂಕಷ್ಟ ರಾಜ್ಯದ ಎಲ್ಲ ವರ್ಗಗಳಿಗೂ ತಟ್ಟುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
ಸರ್ಕಾರ ಮತ್ತು ರೈತರ ಮಧ್ಯೆ ಮಾತುಕತೆ ನಡೆಯದಿದ್ದರೆ, ಹೋರಾಟ ಇನ್ನಷ್ಟು ಉಗ್ರಗೊಳ್ಳುವ ಲಕ್ಷಣಗಳಿವೆ. ಜನಜೀವನ ಈಗಾಗಲೇ ಅಸ್ತವ್ಯಸ್ತಗೊಂಡಿದೆ. ಒಟ್ಟಾರೆಯಾಗಿ ಈ ಬಿಕ್ಕಟ್ಟಿನ ಹೊರೆ ಯಾರು ನಿಭಾಯಿಸಲಿದ್ದಾರೆ? ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಈ ಕುರಿತು ಮಾತನಾಡಿರುವ ರೈತ ಮುಖಂಡ ಶಶಿಕಾಂತ ಗುರೂಜಿ, ಕಳೆದ ಏಳು ದಿನಗಳಿಂದ ನಮ ಹೋರಾಟದ ಫಲವಾಗಿ ಇಂದು ಸಚಿವರು ಕಬ್ಬಿಗೆ ಸೂಕ್ತವಾದ ಬೆಲೆ ನಿಗದಿಪಡಿಸುತ್ತಾರೆಂದು ತಿಳಿದುಬಂದಿದೆ. ಆದರೆ ಸಚಿವರು ಎಲ್ಲಾ ವಿಚಾರವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರುತ್ತೇನೆ, ನಾನು ಕಬ್ಬಿಗೆ ಬೆಲೆ ನಿಗಧಿಪಡಿಸುವುದಿಲ್ಲ ಎಂದು ಹೇಳಿದ್ದಾರೆ.
ಗುರುವಾರ ರಾತ್ರಿ 8 ಗಂಟೆವರೆಗೆ ಸರ್ಕಾರಕ್ಕೆ ಕಾಲಾವಕಾಶ ನೀಡಿದ್ದೇವೆ. ಒಂದು ವೇಳೆ ನಮಗೆ ಸೂಕ್ತ ಬೆಲೆ ನೀಡದಿದ್ದರೆ, ಶುಕ್ರವಾರ ರಾಜ್ಯಾದ್ಯಂತ ಸುಮಾರು 50 ಲಕ್ಷ ಕಬ್ಬು ಬೆಳೆಗಾರರು ಆಯಾ ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ಹೋರಾಟ ಮುಂದುವರಿಸುತ್ತೇವೆ. ನಮ ಹೋರಾಟ ಮುಂದುವರಿಯುತ್ತದೆ. ನಾವು ಕಬ್ಬಿಗೆ ಸೂಕ್ತ ಬೆಲೆಯನ್ನು ಪಡೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಕಬ್ಬು ಬೆಳೆಗಾರರು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಸಕ್ಕರೆ ಕಾರ್ಖಾನೆಗಳಿಂದ 3,500 ರೂ. ದರ ನಿಗಧಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಕಳೆದ ಭಾನುವಾರ ಪ್ರತಿಭಟನಾ ಸ್ಥಳಕ್ಕಾಗಮಿಸಿದ್ದ ಬೆಳಗಾವಿ ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರು ನೇತೃತ್ವದಲ್ಲಿ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿದ್ದರು. ಆದರೆ ಈ ಸಂಧಾನ ಸಭೆ ವಿಫಲವಾಗಿತ್ತು.
