ಬೆಂಗಳೂರು, ಅ.10– ಬೀದಿ ಬದಿ ಕಸ ಎಸೆಯಬೇಡಿ ಎಂದು ಬುದ್ದಿಮಾತು ಹೇಳಿದ ಪೌರ ಕಾರ್ಮಿಕನ ಮೇಲೆ ಹಲ್ಲೆ ನಡೆಸಿ ಧಿಮಾಕು ಪ್ರದರ್ಶಿಸಿ ಪರಾರಿಯಾಗಿರುವ ತಂದೆ-ಮಗಳ ವಿರುದ್ದ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೌರ ಕಾರ್ಮಿಕನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ತಂದೆ-ಮಗಳ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇಲೆ ಅವರ ಬಂಧನಕ್ಕೆ ಕಾರ್ಯಚರಣೆ ನಡೆಸಲಾಗುತ್ತಿದೆ.
ರಸ್ತೆ ಬದಿ ಕಸ ಎಸೆಯುವವರನ್ನು ಪತ್ತೆ ಹಚ್ಚಿ ಫೈನ್ ಹಾಕಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿಕೊಂಡಿರುವ ಸಂದರ್ಭದಲ್ಲೇ ಕಸ ಎಸೆದವರನ್ನು ಪ್ರಶ್ನಿಸಿದ ಪೌರ ಕಾರ್ಮಿಕನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಪೌರ ಕಾರ್ಮಿಕನ ಮೇಲೆ ಹಲ್ಲೆ ಮಾಡಿದ್ದೇ ಅಲ್ಲದೆ, ನಾನು ಯಾರು ಅಂತಾ ಗೊತ್ತಾ ನಿನಗೆ ನಾನು ವಿಧಾನಸೌಧದ ಅಧ್ಯಕ್ಷ ಎಂದು ಬೆದರಿಕೆ ಹಾಕಿರುವ ಅನಾಮಧೇಯ ಅಧ್ಯಕ್ಷನಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.ತಂದೆ-ಮಗಳ ಕ್ರೌರ್ಯ ಕುರಿತಂತೆ ನಾಗೇಂದ್ರ ಎಂಬ ಪೌರ ಕಾರ್ಮಿಕ ನೀಡಿದ ದೂರಿನ ಆಧಾರದ ಮೇಲೆ ಗೋವಿಂದರಾಜನಗರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ನಾನು ಬೆಳಿಗ್ಗೆ ಠಾಣಾ ವ್ಯಾಪ್ತಿಯ ಶ್ರೀನಿವಾಸ ನಗರದ ಬಳಿ ಕಸ ಸ್ವಚ್ಛಗೊಳಿಸುತ್ತಿದ್ದಾಗ ಆಕ್ಟಿವ್ ಹೋಂಡಾದಲ್ಲಿ ಬಂದ ಅವರಿಬ್ಬರು ನಾನು ಶುಚಿಗೊಳಿಸಿದ್ದ ರಸ್ತೆ ಬದಿ ಕಸ ಎಸೆದು ಹೋಗುತ್ತಿದ್ದರು. ಆ ಸಂದರ್ಭದಲ್ಲಿ ನಾನು ಇಲ್ಲಿ ಕಸ ಹಾಕಬಾರದು ಎಂದು ಬುದ್ದಿವಾದ ಹೇಳಿದೆ.
ಈ ರೀತಿ ರಸ್ತೆ ಬದಿ ಕಸ ಎಸೆಯುವ ಬದಲು ನಿಮ ಮನೆ ಬಳಿ ಬರುವ ಕಸದ ಆಟೋಗೆ ನೀಡಿ ಎಂದಾಗ ಕಸ ಎಸೆದ ವ್ಯಕ್ತಿ ಕೋಪಗೊಂಡು ನೀನು ಕಸ ಗುಡಿಸುವವನು ಅಷ್ಟೇ… ನನಗೆ ಆರ್ಡರ್ ಮಾಡ್ಬೇಡ ಎಂದು ಅವಾಜ್ ಹಾಕಿದ್ದಲ್ಲದೆ, ನಾನು ಯಾರು ಅಂತಾ ಗೊತ್ತಾ ವಿಧಾನಸೌಧದಲ್ಲಿ ಅಧ್ಯಕ್ಷನಾಗಿದ್ದೇನೆ ನನ್ನ ಬಗ್ಗೆ ಗೊತ್ತಿಲ್ಲ ನಿಂಗೆ ಎಂದು ಧಮಕಿ ಹಾಕಿದ್ದ ಎಂದು ಪೌರ ಕಾರ್ಮಿಕ ದೂರು ನೀಡಿದ್ದಾರೆ.
ನೀವು ಯಾರಾದರೂ ಆಗಿರಿ ಇಲ್ಲಿ ಕಸ ಬಿಸಾಡಬೇಡಿ ಎಂದಿದ್ದರಿಂದ ಅವರು ನನ್ನ ಮೇಲೆ ಹೆಲೆಟ್‌ನಿಂದ ಮೂರಿ ಬಾರಿ ಹಲ್ಲೆ ನಡೆಸಿದ್ದಾರೆ ಎಂದು ಪೌರ ಕಾರ್ಮಿಕ ದೂರಿನಲ್ಲಿ ಆರೋಪಿಸಿದ್ದಾರೆ. ಕೊನೆಗೆ ಕಸ ಎಸೆದ ವ್ಯಕ್ತಿ ಇನ್ಮೇಲೆ ಇಲ್ಲಿ ಕಸ ಬಿಸಾಡ್ಬೇಡ ಎಂದು ಹೇಳಿದರೆ ಪರಿಸ್ಥಿತಿ ಸರಿ ಇರಲ್ಲ ನಿನ್ನನ್ನು ಕೆಲಸದಿಂದ ತೆಗೆದು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ನಾಗೇಂದ್ರ ಹೇಳಿಕೊಂಡಿದ್ದಾರೆ.