ಮುಳಬಾಗಿಲು,ನ.6– ಕೌಟುಂಬಿಕ ಕಲಹದಿಂದ ಐದು ವರ್ಷದ ಮಗಳನ್ನು ಕೊಂದು ತಂದೆ ಆತಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾಹಕ ಘಟನೆ ತಾಲೂಕಿನ ಮುಡಿಯನೂರು ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.ಮುಡಿಯನೂರು ಗ್ರಾಮದ ಲೋಕೇಶ್ (37) ಎಂಬುವರೇ ಮಗಳು ನಿಹಾರಿಕಾ(5)ಳನ್ನು ಕೊಂದು ಆತಹತ್ಯೆಗೆ ಶರಣಾದ ತಂದೆ.
ಲೋಕೇಶ್ ಅವರು ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದು ಕೊಳಿಫಾರಂವೊಂದರ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು.ಇತ್ತೀಚೆಗೆ ಕೌಟುಂಬಿಕ ಕಲಹದಿಂದಾಗಿ ಪತ್ನಿ ನವ್ಯಶ್ರೀ ಮನೆ ತೊರೆದು ಹೋಗಿದ್ದರು. ಇದಲ್ಲದೆ ಕೆಲವರ ಚುಚ್ಚುಮಾತಿನಿಂದ ಅವಮಾನ ಸಹಿಸದೆ ಮನನೊಂದಿದ್ದ ಲೋಕೇಶ್ ಅವರು ಸಾಯಲು ನಿರ್ಧರಿಸಿ ಕಳೆದ ರಾತ್ರಿ ಮಗಳು ನಿಹಾರಿಕಾಳನ್ನು ನೀರಿನ ಡ್ರಮ್‌ನಲ್ಲಿ ಮುಳಿಗಿಸಿ, ಉಸಿರುಗಟ್ಟಿಸಿ ಕೊಲೆಗೈದು ನಂತರ ಶವವನ್ನು ಕಾರಿನಲ್ಲಿಟ್ಟಿದ್ದಾರೆ.
ನಂತರ ಲೋಕೇಶ್ ಮನೆ ಸಮೀಪದಲ್ಲಿರುವ ಕಾಲೇಜಿನ ಬಳಿ ಹೋಗಿ ಮರಕ್ಕೆ ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದಾರೆ. ಇಂದು ಬೆಳಗ್ಗೆ ಈ ಮಾರ್ಗದಲ್ಲಿ ಹೋಗುತ್ತಿದ್ದವರು ಗಮನಿಸಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಮುಳಬಾಗಿಲು ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಶವವನ್ನು ಕೆಳಗಿಳಿಸಿದ್ದಾರೆ.
ಲೋಕೇಶ್ ಅವರಿಗೆ ಒಬ್ಬಳು ಮಗಳಿದ್ದಾಳೆ ಎಂದು ಗ್ರಾಮಸ್ಥರು ತಿಳಿಸಿದಾಗ ಪೊಲೀಸರು ಅವರ ಮನೆ ಬಳಿ ಹೋಗಿ ಮಗಳಿಗಾಗಿ ಹುಡುಕಾಟ ನಡೆಸಿದಾಗ ಕಾರಿನಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಅಪ್ಪ, ಮಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
