ಬೆಂಗಳೂರು,ಅ.17- ತನ್ನ ಪತಿಯಿಂದಲೇ ಅನೇಸ್ತೇಶಿಯಾ ಪಡೆದು ಕೊಲೆಯಾದ ವೈದ್ಯೆ ಡಾ.ಕೃತಿಕಾ ರೆಡ್ಡಿಗೆ ಕಟ್ಟಿಸಿಕೊಟ್ಟಿದ್ದ 3 ಕೋಟಿ ಬೆಲೆಬಾಳುವ ಭವ್ಯ ಬಂಗಲೆಯನ್ನು ಮೃತಳ ತಂದೆ ಇಸ್ಕಾನ್‌ಗೆ ದಾನ ಮಾಡಲು ತೀರ್ಮಾನಿಸಿದ್ದಾರೆ.ಅಯ್ಯಪ್ಪಲೇಔಟ್‌ನಲ್ಲಿ ಕೃತಿಕಾ ರೆಡ್ಡಿ ಅವರ ತಂದೆ ಕೆ.ಮುನಿರೆಡ್ಡಿ ಅವರು 3 ಕೋಟಿ ಮೌಲ್ಯದ ಮನೆಯನ್ನು ವಿವಾಹವಾದ ನಂತರ ತಮ ಹಣದಿಂದಲೇ ಖರೀದಿಸಿ ಕೊಟ್ಟಿದ್ದರು.
ಮಗಳು ಕೃತಿಕಾ ರೆಡ್ಡಿ ಹಾಗೂ ಅಳಿಯ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಮಹೇಂದ್ರ ರೆಡ್ಡಿ ತಮ ಮಕ್ಕಳ ಜೊತೆ ಕುಟುಂಬ ಸಮೇತ ಚೆನ್ನಾಗಿರಲೆಂದು ಅವರೇ ಸ್ವಂತ ದುಡ್ಡಿನಲ್ಲಿ ಬಂಗಲೆ ಖರೀದಿಸಿಕೊಟ್ಟಿದ್ದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ವೈದ್ಯೆಯಾಗಿದ್ದ ಕೃತಿಕಾ ರೆಡ್ಡಿ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಮಹೇಂದ್ರ ರೆಡ್ಡಿ ಯಾರೊಬ್ಬರು ನಿರೀಕ್ಷೆ ಮಾಡದ ರೀತಿಯಲ್ಲಿ ಚಿಕಿತ್ಸೆ ನೆಪದಲ್ಲಿ ಅನೆಸ್ತೇಶಿಯ ನೀಡಿ ಕೊಲೆ ಮಾಡಿದ್ದ.
ಈ ಘಟನೆಯಿಂದ ಭಾರೀ ಆಘಾತಕ್ಕೊಳಗಾಗಿರುವ ಮುನಿರೆಡ್ಡಿ ಹಾಗೂ ಕುಟುಂಬದವರು ನನ್ನ ಮಗಳೇ ಇಲ್ಲದ ಮೇಲೆ ಆ ಮನೆಯಲ್ಲಿ ಯಾರೋಬ್ಬರೂ ಇರಬಾರದು. ಕುಟುಂಬದವರು ಮತ್ತು ಮೊಮಕ್ಕಳು ಚೆನ್ನಾಗಿರಲೆಂದು ಖರೀದಿಸಿಕೊಟ್ಟಿದ್ದ ಈ ಮನೆ ನನ್ನ ಮಗಳಿಲ್ಲದ ಮೇಲೆ ಯಾರಿಗೆ ಕೊಟ್ಟರೂ ಪ್ರಯೋಜನವಿಲ್ಲ. ಹೀಗಾಗಿ ಈ ಮನೆಯನ್ನು ಇಸ್ಕಾನ್‌ಗೆ ದಾನ ಮಾಡುತ್ತೇನೆ ಎಂದು ಹೇಳಿದ್ದಾರೆ.
ನನ್ನ ಮಗಳು ತನ್ನ ಪತಿ ಮತ್ತು ಮಕ್ಕಳೊಂದಿಗೆ ಸಂತೋಷದಿಂದ ಬದುಕುವುದನ್ನು ನೋಡಲು ಮಾತ್ರ ನಾನು ಈ ಮನೆಯನ್ನು ನಿರ್ಮಿಸಿದ್ದೆ. ಈಗ ಅವಳೇ ಇಲ್ಲ ಎಂದಮೇಲೆ ಯಾರಿಗಾಗಿ ಈ ಮನೆ? ಇದನ್ನು ಇಸ್ಕಾನ್‌ಗೆ ದಾನ ಮಾಡುತ್ತೇನೆ. ಅವರು ತಮ ಇಚ್ಛೆಗೆ ಅನುಗುಣವಾಗಿ ಈ ಬಂಗಲೆಯನ್ನು ಬಳಸಿಕೊಳ್ಳಿ ಎಂದು ತಿಳಿಸಿದ್ದಾರೆ. ಅಯ್ಯಪ್ಪಲೇಔಟ್‌ನಲ್ಲಿರುವ ಮನೆಯ ಮುಂದೆ ಡಾ.ಕೃತಿಕಾ .ಎಂ ರೆಡ್ಡಿ ನೆನಪಿಗಾಗಿ ಎಂದು ಬರೆದಿರುವ ನಾಮಫಲಕ ಎಲ್ಲರನ್ನು ಆಕರ್ಷಿಸುತ್ತಿದೆ.
ಪ್ರಕರಣದ ಹಿನ್ನೆಲೆ:
ಏಪ್ರಿಲ್ 24ರಂದು ತನ್ನ ಪತ್ನಿ, ಚರ್ಮರೋಗ ತಜ್ಞೆ ಡಾ. ಕೃತಿಕಾ ರೆಡ್ಡಿ ಅವರಿಗೆ ಅತಿಯಾದ ಅರಿವಳಿಕೆ ಮದ್ದು ನೀಡಿ ಕೊಲೆಗೈದ ಆರೋಪದಲ್ಲಿ ವೈದ್ಯ ಡಾ. ಮಹೇಂದ್ರ ರೆಡ್ಡಿಯನ್ನು ಬಂಧಿಸಲಾಗಿತ್ತು.ಕೃತಿಕಾ ರೆಡ್ಡಿ ಅವರ ಮರಣೋತ್ತರ ಪರೀಕ್ಷೆಯ ಎಫ್‌ಎಸ್‌ಎಲ್ ವರದಿಯಲ್ಲಿ ಅತಿಯಾದ ಅರಿವಳಿಕೆ ನೀಡಿದ್ದರಿಂದಲೇ ಸಾವು ಸಂಭವಿಸಿದೆ ಎಂಬ ವರದಿ ಅನ್ವಯ ಅ.14ರಂದು ಆರೋಪಿಯನ್ನು ಬಂಧನಕ್ಕೊಳಪಡಿಸಲಾಗಿತ್ತು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿದ್ದ ಡಾ.ಮಹೇಂದ್ರ ರೆಡ್ಡಿ, ಶಸ್ತ್ರಚಿಕಿತ್ಸೆಗೆ ಬಳಸುವ ಅರಿವಳಿಕೆಯನ್ನು ಅಕ್ರಮವಾಗಿ ಮನೆಗೆ ತಂದು ಪತ್ನಿ ಕೃತಿಕಾ ರೆಡ್ಡಿಗೆ ನೀಡಿದ್ದಾನೆ ಎಂಬ ಬಲವಾದ ಅನುಮಾನ ಪೊಲೀಸರಲ್ಲಿದೆ.
ಆರೋಪಿ ಮಹೇಂದ್ರ ರೆಡ್ಡಿಯನ್ನು ಪೊಲೀಸರು ಗುರುವಾರ ಆತನ ಗುಂಜೂರು ನಿವಾಸಕ್ಕೆ ಕರೆದೊಯ್ದು ಮಹಜರು ನಡೆಸಿದ್ದಾರೆ. ಅಲ್ಲಿಂದ ಲ್ಯಾಪ್‌ಟಾಪ್, ಹಾರ್ಡ್‌ಡಿಸ್ಕ್, ಕಂಪ್ಯೂಟರ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಮಹೇಂದ್ರ ರೆಡ್ಡಿ ಪತ್ನಿಯನ್ನು ಕೊಲೆ ಮಾಡಿಲ್ಲ ಎಂದು ವಾದಿಸುತ್ತಿದ್ದಾನೆ. ತನಗೆ ಕೊಲೆ ಬಗ್ಗೆ ಗೊತ್ತಿಲ್ಲ ಎಂದು ಪದೇ ಪದೇ ಹೇಳುತ್ತಾ ತನಿಖೆಗೆ ಸಹಕರಿಸುತ್ತಿಲ್ಲ. ಹೀಗಾಗಿ, ಆರೋಪಿಯನ್ನು 9 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯಲಾಗಿದೆ.