ಬೆಂಗಳೂರು. ಡಿ.8– ಫೆಂಗಲ್ ಚಂಡಮಾರುತದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಕಟಾವಿಗೆ ಬಂದಿದ್ದ ತರಕಾರಿ ಬೆಳೆಗಳು ನಾಶವಾಗಿ ಬೆಲೆಗಳು ಗಗನಕ್ಕೇರಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.
ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಚಿತ್ರದುರ್ಗ, ರಾಯಚೂರು, ಬಳ್ಳಾರಿ, ದಾವಣಗೆರೆ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಮತ್ತಿತರೆಡೆ ಚಂಡಮಾರುತರ ಪ್ರಭಾವದಿಂದ ಮಳೆಯಾಗಿದ್ದು, ಕೈಗೆ ಬಂದ ಫಸಲು ನಾಶವಾದ ಹಿನ್ನೆಲೆಯಲ್ಲಿ ಉತ್ಪಾದನೆ ಕುಂಠಿತವಾಗಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
ಮಾರುಕಟ್ಟೆಗೆ ಈಗಾಗಲೇ ಆವರೆಕಾಯಿ ಹಾಗೂ ತೊಗರಿಕಾಯಿ ಬಂದಿದ್ದು, ಈ ಸಮಯದಲ್ಲಿ ತರಕಾರಿ ಬೆಲೆ ಸಾಮಾನ್ಯವಾಗಿ ಕಡಿಮೆಯಾಗಬೇಕಾಗಿತ್ತು. ಆದರೆ ಮಳೆ ಪರಿಣಾಮದಿಂದ ಬೆಳೆ ನಾಶವಾಗಿ ಬೇಡಿಕೆ ಹೆಚ್ಚಾಗಿದ್ದರಿಂದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
ಈ ಸಮಯದಲ್ಲಿ ಮದುವೆ, ದೇವರಕಾರ್ಯ ಸೇರಿದಂತೆ ಮತ್ತಿತರ ಶುಭಕಾರ್ಯಗಳು ಹೆಚ್ಚಾಗಿ ನಡೆಯುತ್ತವೆ. ಆದ್ದರಿಂದ ಬೆಲೆಯೂ ಕೂಡ ಹೆಚ್ಚಾಗಿದೆ. ಆದರಲ್ಲೂ ನುಗ್ಗೆಕಾಯಿಯಂತೂ ಕೆಜಿಗೆ 500 ರೂ. ತಲುಪಿದೆ ತರಕಾರಿಗಳು ಅಂಗಡಿಗಳಲ್ಲಿ ಕಾಣುತ್ತಲೆ ಇಲ್ಲ.
ಹಾವು-ಏಣಿ ಆಟವಾಡುವ ಟೊಮ್ಯಾಟೋ ಅಂತೂ ಕಳೆದ ಕೆಲ ದಿನಗಳಿಂದ ಸ್ಥಿರವಾಗಿದ್ದು, 50 ರಿಂದ 60 ರೂ.ಗೆ ಮಾರಾಟವಾಗುತ್ತಿದೆ. ಬೆಳ್ಳುಳ್ಳಿ 500ರೂ., ಹಸಿಬಟಾಣಿ 200ರೂ., ಆಲೂಗೆಡ್ಡೆ 50ರೂ., ಬೀನ್‌್ಸ 70ರೂ., ಬಿಟ್ರೂಟ್ 60ರೂ., ತೊಂಡೆಕಾಯಿ 80ರೂ., ಸೌತೆಕಾಯಿ 30ರೂ., ಕ್ಯಾರೆಟ್ 80ರೂ., ಮೂಲಂಗಿ 50ರೂ., ಹಸಿಮೇಣಸಿನಕಾಯಿ 80ರೂ., ಬೆಂಡೆಕಾಯಿ 60ರೂರೂ.,ಗೆ ಬೆಂಗಳೂರಲ್ಲಿ ಮಾರಾಟ ಮಾಡಲಾಗುತ್ತಿದೆ.
ಕಳೆದ ಕೆಲ ತಿಂಗಳುಗಳಿಂದ ಸ್ಥಿರತೆ ಕಾಯ್ದುಕೊಂಡಿರುವ ಈರುಳ್ಳಿ ಕೆಜಿಗೆ 80 ರೂ., ತಲುಪಿದೆ. ಸಾಮಾನ್ಯವಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ 100 ರೂ.,ಗೆ 2 ಕೆಜಿ, 3 ಕೆಜಿ ಅಂತಾ ಮಾರಾಟ ಮಾಡಲಾಗುತ್ತಿದೆ. ಪ್ರಸ್ತುತದಲ್ಲಿ ನೂರು ರೂ.ಗೆ ಒಂದು ಕಾಲು ಕೆಜಿ ಮಾತ್ರ ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ.
ಹೆಚ್ಚಾಗಿ ಈರುಳ್ಳಿ ಬೆಳೆಯುವ ಬಳ್ಳಾರಿ, ರಾಯಚೂರು, ದಾವಣಗೆರೆ, ಚಿತ್ರದುರ್ಗ, ಹುಬ್ಬಳ್ಳಿ, ಧಾರವಾಡ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗಿ ಬೆಳೆ ನಾಶವಾಗಿದ್ದು, ಉತ್ಪಾದನೆ ಕುಂಠಿತವಾಗಿ ಬೆಲೆ ಹೆಚ್ಚಳವಾಗಿದೆ.