Wednesday, July 30, 2025
Homeರಾಜ್ಯರಸಗೊಬ್ಬರದ ಕೊರತೆ : ಬಿಜೆಪಿಯವರೇ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಎಂದ ಡಿಕೆಶಿ

ರಸಗೊಬ್ಬರದ ಕೊರತೆ : ಬಿಜೆಪಿಯವರೇ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಎಂದ ಡಿಕೆಶಿ

Fertilizer shortage: BJP is protesting against the central government, says DK

ಬೆಂಗಳೂರು,ಜು.29- ರಸಗೊಬ್ಬರದ ಕೊರತೆ ವಿಚಾರದಲ್ಲಿ ಬಿಜೆಪಿಯವರ ಪ್ರತಿಭಟನೆ ಕೇಂದ್ರ ಸರ್ಕಾರದ ಕೃಷಿ ಸಚಿವರು ಹಾಗೂ ರಸಗೊಬ್ಬರಗಳ ಸಚಿವರ ವಿರುದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ, ವ್ಯವಸಾಯದ ಭೂಮಿ ವಿಸ್ತರಣೆಯಾಗಿದೆ, ರೈತರಿಗೆ ಒಳ್ಳೆಯದಾಗುತ್ತಿದೆ. ಇದು ಸ್ವಾಗತಾರ್ಹ ಎಂದರು.

ಬಿಜೆಪಿಗರು ಯಾವ ಕಾರಣಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ?, ರಸಗೊಬ್ಬರ ನಮ ಬಳಿ ಇಲ್ಲ. ಕೇಂದ್ರ ಸರ್ಕಾರ ಕೊಡಬೇಕು ನಾವು ಹಂಚಿಕೆ ಮಾಡಬೇಕು. ಹಂಚಿಕೆಯಲ್ಲಿ ಯಾವುದಾದರೂ ಲೋಪಗಳಾಗಿದ್ದರೆ ಅದರ ಪರಿಶೀಲನೆ ಮಾಡಲಿ. ಯಾವ ಸೊಸೈಟಿಗೆ ಎಷ್ಟು ಗೊಬ್ಬರ ಹೋಗಿದೆ, ಎಷ್ಟು ಹಂಚಿಕೆಯಾಗಿದೆ, ಯಾವ ಜಿಲ್ಲೆಗೆ ಬಂದಿರುವುದೆಷ್ಟು, ಉಳಿದಿರುವುದೆಷ್ಟು…. ಎಲ್ಲವೂ ಕರಾರುವಕ್ಕಾದ ಲೆಕ್ಕಪತ್ರಗಳಿವೆ ಎಂದು ಹೇಳಿದರು.

ಈ ಹಿಂದೆ ಗೊಬ್ಬರ ಕೊಡಲಾಗದೆ ಬಿಜೆಪಿ ಸರ್ಕಾರ ರೈತರ ಮೇಲೆ ಗೋಲಿಬಾರ್‌ ನಡೆಸಿತ್ತು. ನಾವು ಆ ರೀತಿ ಯಾವುದನ್ನೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಸಭೆಯ ಬಗ್ಗೆ ಅಸಹನೆ :
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಸಕರ ಜೊತೆ ಸಭೆ ನಡೆಸುತ್ತಿರುವುದಕ್ಕೆ ತಮಗೆ ಆಹ್ವಾನ ನೀಡದೇ ಇರುವುದರಿಂದ ಕಷ್ಟವೇನೂ ಆಗಿಲ್ಲ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಈ ಹಿಂದೆ ಶಾಸಕರ ಜೊತೆ ಪ್ರತ್ಯೇಕ ಸಭೆ ನಡೆಸಿದಾಗ ಕೆಲವು ದೂರುಗಳು ಕೇಳಿಬಂದಿದ್ದವು. ಅವುಗಳನ್ನು ಬಗೆಹರಿಸುವಂತೆ ಸುರ್ಜೇವಾಲ ಮುಖ್ಯಮಂತ್ರಿಯವರಿಗೆ ಸಲಹೆ ನೀಡಿದ್ದರು. ಹಾಗಾಗಿ ಸಿದ್ದರಾಮಯ್ಯ ಪ್ರತ್ಯೇಕ ಸಭೆ ಮಾಡುತ್ತಿದ್ದಾರೆ ಎಂದರು.

ಮೊದಲು ಗ್ರಾಮೀಣ ಭಾಗದ ಶಾಸಕರ ಸಭೆಗಳು ಮುಗಿಯಲಿ. ಬೆಂಗಳೂರಿನ ಸಮಸ್ಯೆಗಳು ಭಿನ್ನವಾಗಿವೆ. ಅವುಗಳ ಪರಿಹಾರಕ್ಕೆ ಭಾರೀ ಪ್ರಮಾಣದ ಹಣಕಾಸಿನ ಸೌಲಭ್ಯ ಬೇಕು. ಅದರ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಈಗಾಗಲೇ ಚರ್ಚೆ ಮಾಡಿದ್ದೇನೆ ಎಂದು ಹೇಳಿದರು. ನಾವು ತುಂಬಾ ದೂರ ಸಾಗಬೇಕಿದೆ. ಬಿಬಿಎಂಪಿ ಚುನಾವಣೆ ಬಗ್ಗೆ ನ್ಯಾಯಾಲಯಕ್ಕೆ ಇಂದು ಪ್ರಮಾಣಪತ್ರ ಸಲ್ಲಿಸಬೇಕು. ಗ್ರೇಟರ್‌ ಬೆಂಗಳೂರು ರಚನೆಯಾಗಿದೆ. ಅದನ್ನು ಮತ್ತಷ್ಟು ವಿಸ್ತರಣೆ ಮಾಡಬೇಕು. ವಿರೋಧಪಕ್ಷದ ಶಾಸಕರ ಜೊತೆ ಚರ್ಚೆ ಮಾಡಿದ್ದೇನೆ. ಅವರ ಅನುಮತಿಯನ್ನೂ ಪಡೆಯಲಾಗಿದೆ. ಸಾರ್ವಜನಿಕವಾಗಿ ವಿರೋಧಪಕ್ಷಗಳು ಆರೋಪ, ಟೀಕೆ ಮಾಡುತ್ತವೆ. ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

ರಾಜ್ಯ ಹಾಗೂ ಬೆಂಗಳೂರಿನ ಹಿತದೃಷ್ಟಿಯಿಂದ ನಾವು ಭೌಗೋಳಿಕವಾಗಿ ವ್ಯಾಪ್ತಿಯನ್ನು ವಿಂಗಡಿಸಿಕೊಂಡಿದ್ದೇವೆ. ಆಡಳಿತಾತಕ, ಹಣಕಾಸು ಮತ್ತು ಭೌಗೋಳಿಕತೆಯ ವಿಚಾರವಾಗಿ ನಾವು ಪರಾಮರ್ಶೆ ಮಾಡಬೇಕಿದೆ ಎಂದು ತಿಳಿಸಿದರು.ಬಿಜೆಪಿಯವರು ಮೊದಲು ಹದಗೆಟ್ಟಿರುವ ಅವರ ಪಕ್ಷವನ್ನು ಸರಿಪಡಿಸಿಕೊಳ್ಳಲಿ. ಅನಂತರ ಕಾಂಗ್ರೆಸ್‌‍ ಬಗ್ಗೆ ಮಾತನಾಡಲಿ ಎಂದರು.

ಖರ್ಗೆ ಹೇಳಿಕೆಯಲ್ಲಿ ತಪ್ಪಿಲ್ಲ :
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಸ್ಥಾನ ತಪ್ಪಿದ್ದಕ್ಕಾಗಿ ನೀಡಿರುವ ಹೇಳಿಕೆ ತಪ್ಪೇನಿಲ್ಲ. ಅವರೊಬ್ಬ ಹಿರಿಯ ನಾಯಕ. ಪಕ್ಷಕ್ಕಾಗಿ ದುಡಿದಿದ್ದಾರೆ. ತಮ ನೋವು ಹಾಗೂ ಭಾವನೆಗಳನ್ನು ಹೇಳಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದರು.ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಇನ್ನೂ ಇದೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಡಿಕೆಶಿಯವರು ಖರ್ಗೆಯವರ ಹೇಳಿಕೆಯನ್ನು ಆಧರಿಸಿ ಸಚಿವರು, ಶಾಸಕರು ಚರ್ಚೆ ಮಾಡಲಿ. ಆದರೆ ಸಾರ್ವಜನಿಕವಾಗಿ ಮಾತನಾಡಬಾರದು ಎಂದು ಸೂಚನೆ ನೀಡಿದರು.

RELATED ARTICLES

Latest News