ಬೆಂಗಳೂರು,ಜು.28- ಅಪ್ಪ-ಅಮನ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಿತ್ತಾಟದಲ್ಲಿ ನಾಡಿನ ಅನ್ನದಾತ ಯೂರಿಯಾ ಗೊಬ್ಬರವಿಲ್ಲದೆ ಆಕಾಶದತ್ತ ಮುಖ ಮಾಡಿದ್ದಾನೆ. ರಾಜ್ಯದ ಸುಮಾರು 15ರಿಂದ 18 ಜಿಲ್ಲೆಗಳಿಗೆ ಗೊಬ್ಬರದ ಅಗತ್ಯವಿದ್ದು, ಸಕಾಲಕ್ಕೆ ತಮ ಬೆಳೆಗಳಿಗೆ ಅಗತ್ಯವಿರುವ ಗೊಬ್ಬರ ಸಿಗದೆ ರೈತರು ಕಂಗಾಲಾಗಿದ್ದಾರೆ. ಮೆಕ್ಕೆಜೋಳ, ಭತ್ತ ಸೇರಿದಂತೆ ಕೆಲವು ವಾಣಿಜ್ಯ ಬೆಳೆಗಳಿಗೆ ಗೊಬ್ಬರದ ಅಗತ್ಯತೆ ಕಂಡುಬರುತ್ತಿದ್ದು, ಸರ್ಕಾರಿ ಮತ್ತು ಖಾಸಗಿ ಗೋದಾಮುಗಳಲ್ಲಿ ಎಲ್ಲಿ ನೋಡಿದರೂ ನೋ ಸ್ಟಾಕ್ ಫಲಕ ಕಾಣುತ್ತಿದೆ.
ರೈತರು ತಮ ಹೊಲ-ಗದ್ದೆಗಳಲ್ಲಿ ನಾಟಿ ಮಾಡಿದ್ದು, ಪೈರುಗಳು ಒಣಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಬೆಳೆಗೆ ಗೊಬ್ಬರ ಅತ್ಯಗತ್ಯವಾಗಿದೆ. ಈ ಕಾರಣದಿಂದ ಗೊಬ್ಬರಕ್ಕಾಗಿ ರೈತರು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಯೂರಿಯಾ ಪಡೆಯುತ್ತಿರುವ ದೃಶ್ಯ ಕಂಡು ಬರುತ್ತಿದೆ. ಸಾಮಾನ್ಯವಾಗಿ ಜುಲೈ ಮತ್ತು ಆಗಸ್ಟ್ ತಿಂಗಳ ಮಧ್ಯ ಭಾಗದಲ್ಲಿ ರೈತರು ತಮ ಬೆಳೆದ ಬೆಳೆಗಳಿಗೆ 2ನೇ ಹಂತದ ಗೊಬ್ಬರ ಹಾಕುವುದು ವಾಡಿಕೆ. ಈ ಹಂತದಲ್ಲಿ ಗೊಬ್ಬರ ಹಾಕಿದರೆ ಬೆಳೆಗಳು ಉತ್ತಮ ಫಸಲು ತರುತ್ತವೆ ಎಂಬುದು ರೈತರ ನಂಬಿಕೆ.
ಆದರೆ ಸಕಾಲಕ್ಕೆ ಸರಿಯಾಗಿ ಗೊಬ್ಬರ ಕೈಗೆಟುಕದೆ ರೈತರು ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ, ಬಳ್ಳಾರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಕಲಬುರಗಿ, ಯಾದಗಿರಿ,ಬೀದರ್ ಸೇರಿದಂತೆ ಸುಮಾರು 15ರಿಂದ 18 ಜಿಲ್ಲೆಗಳಲ್ಲಿ ಗೊಬ್ಬರದ ಬೇಡಿಕೆ ಹೆಚ್ಚಾಗಿದೆ.
ರಾಜ್ಯ ಸರ್ಕಾರದ ಮೇಲೆ ಕೇಂದ್ರ ಸರ್ಕಾರ, ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಾ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿವೆ.
ಸಾಮಾನ್ಯವಾಗಿ ಮುಂಗಾರು ಆರಂಭಕ್ಕೂ ಮುನ್ನವೇ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಪ್ರಸಕ್ತ ವರ್ಷ ರಾಜ್ಯಕ್ಕೆ ಇಂತಿಷ್ಟು ಗೊಬ್ಬರವನ್ನು ಪೂರೈಕೆ ಮಾಡಬೇಕೆಂಬ ಬೇಡಿಕೆ ಪಟ್ಟಿಯನ್ನು ಸಲ್ಲಿಸಬೇಕು. ಇದು ಕರ್ನಾಟಕ ಮಾತ್ರವಲ್ಲದೆ ಎಲ್ಲಾ ರಾಜ್ಯಗಳು ಪ್ರತಿ ವರ್ಷ ಅನುಸರಿಸಿಕೊಂಡು ಬಂದಿರುವ ಅಲಿಖಿತ ಸಂಪ್ರದಾಯ.
ಏಕೆಂದರೆ ಗೊಬ್ಬರ ಉತ್ಪನ್ನವನ್ನು ಕೇಂದ್ರ ಸರ್ಕಾರವೇ ಮಾಡುವುದರಿಂದ ವಿತರಣೆ ಮತ್ತು ಪೂರೈಕೆ ಕೇಂದ್ರದ ಮೇಲಿರುತ್ತದೆ. ನಾವು ಈ ವರ್ಷ ಮುಂಗಾರು ಆರಂಭಕ್ಕೂ ಮುನ್ನವೇ ಕೇಂದ್ರಕ್ಕೆ ಗೊಬ್ಬರದ ಬೇಡಿಕೆ ಪಟ್ಟಿಯನ್ನು ಸಲ್ಲಿಸಿದ್ದೇವೆ. ಅಗತ್ಯವಿರುವಷ್ಟು ಪೂರೈಕೆ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ರಾಜ್ಯ ಸರ್ಕಾರದ ಸರಣಿ ವಾದ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಅನೇಕರು ರಾಜ್ಯದ ಕ್ರಮವನ್ನು ಸಮರ್ಥಿಸಿಕೊಂಡು ಕೇಂದ್ರದ ಮೇಲೆಯೇ ಬೊಟ್ಟು ಮಾಡುತ್ತಿದ್ದಾರೆ.
ಆದರೆ ಕೇಂದ್ರ ಸರ್ಕಾರ ನಾವು ಯಾವುದೇ ರಾಜ್ಯಗಳಿಗೂ ಗೊಬ್ಬರ ಪೂರೈಕೆ ಮಾಡುವಲ್ಲಿ ವಿಳಂಬ ಮಾಡಿಲ್ಲ. ಮುಂಗಾರು ಆರಂಭಕ್ಕೂ ಮುನ್ನ ಯಾವ ಯಾವ ರಾಜ್ಯಗಳು ಎಷ್ಟು ಬೇಡಿಕೆ ಇಟ್ಟಿದ್ದಾವೋ ಅಷ್ಟನ್ನು ಪೂರೈಕೆ ಮಾಡಿದ್ದೇವೆ. ಕರ್ನಾಟಕ ವಿಳಂಬವಾಗಿ ಪತ್ರ ವ್ಯವಹಾರ ನಡೆಸಿದೆ. ಅಲ್ಲದೆ ಪೂರೈಕೆ ಮಾಡಿರುವ ಗೊಬ್ಬರ ಖಾಸಗಿಯವರ ಬಳಿ ದಾಸ್ತಾನು ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಅನುವು ಮಾಡಿಕೊಟ್ಟಿದೆ ಎಂದು ದೂರುತ್ತಿದ್ದಾರೆ.
ದುಪ್ಪಟ್ಟಾದ ಬೆಲೆ
ಕಬ್ಬಿಣ ಕಾದಾಗಲೇ ಹಣಿಯಬೇಕು ಎಂಬ ನಾಣ್ಣುಡಿಯಂತೆ ಯೂರಿಯ ಗೊಬ್ಬರ ಬೇಡಿಕೆ ಹೆಚ್ಚಾಗಿರುವಂತೆ ಖಾಸಗಿಯವರು ಕಾಳಸಂತೆಯಲ್ಲಿ ದುಪ್ಪಟ್ಟು ದರದಲ್ಲಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸರ್ಕಾರ ನಿಗದಿಪಡಿಸಿದ ದರದಲ್ಲೇ ಮಾರಾಟ ಮಾಡಬೇಕೆಂಬ ನಿಯಮವಿದ್ದರೂ ಕೆಲವು ಕಡೆ ಕೃತಕ ಅಭಾವ ಸೃಷ್ಟಿಸಿ ಖಾಸಗಿಯವರು ಹೆಚ್ಚಿನ ದರದಲ್ಲಿ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಸಿಕ್ಕಿತ್ತೋ ಇಲ್ಲವೋ ಎಂಬ ಭಯದಲ್ಲಿರುವ ರೈತರು ಹೆಚ್ಚಿನ ಹಣ ಕೊಟ್ಟು ಖರೀದಿ ಮಾಡುತ್ತಿದ್ದಾರೆ.
ಎಚ್ಚರಿಕೆ
ಖಾಸಗಿಯವರು ಗೋದಾಮುಗಳಲ್ಲಿ ಅನಗತ್ಯವಾಗಿ ಗೊಬ್ಬರ ಸಂಗ್ರಹಣೆ ಮಾಡಿರುವುದು ಕಂಡುಬಂದರೆ ತಕ್ಷಣವೇ ದಾಳಿ ನಡೆಸಿ ವಶಕ್ಕೆ ತೆಗೆದುಕೊಳ್ಳುವಂತೆ ಸರ್ಕಾರ ಕೃಷಿ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ.
ದುಪ್ಪಟ್ಟು ಬೆಲೆಯ ಆಸೆಗೆ ಬಿದ್ದಿರುವ ಖಾಸಗಿಯವರು ಕೃತಕ ಅಭಾವ ಸೃಷ್ಟಿಸಿ ನಿಗದಿತ ದರಕ್ಕಿಂತ ಮೂರು ಪಟ್ಟು ದರದಲ್ಲಿ ಮಾರಾಟ ಮಾಡುತ್ತಿರುವ ಪ್ರಕರಣಗಳು ಕೇಳಿಬಂದಿವೆ. ಕೆಲವು ಕಡೆ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ದಾಸ್ತಾನು ಮಾಡಿದ್ದರೆ ಮುಲಾಜಿಲ್ಲದೆ ಜಪ್ತಿ ಮಾಡುವಂತೆ ಸೂಚನೆ ಕೊಡಲಾಗಿದೆ.
ಬಿಜೆಪಿ ಹೋರಾಟ
ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆಗೆ ಮುಂದಾಗಿದ್ದು, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ರೈತ ಮೋರ್ಚಾ ವತಿಯಿಂದ ಸರ್ಕಾರದ ವಿರುದ್ಧ ಹೋರಾಟ ನಡೆಸಿ ಧಿಕ್ಕಾರದ ಘೋಷಣೆಗಳನ್ನು ಕೂಗಲಾಯಿತು.
- ರಷ್ಯಾದ ಕಮ್ಚಟ್ಕಾ ಪ್ರದೇಶದ ಪೂರ್ವ ಕರಾವಳಿಯಲ್ಲಿ 7.0 ತೀವ್ರತೆಯ ಭೂಕಂಪ
- ಕುಸಿದ ಹೂವಿನ ಬೆಲೆ, ಸಂಕಷ್ಟದಲ್ಲಿ ಬೆಳೆಗಾರರು
- ರಷ್ಯಾದ ಅತಿದೊಡ್ಡ ತೈಲ ಟರ್ಮಿನಲ್ ಮೇಲೆ ಉಕ್ರೇನ್ ಡ್ರೋನ್ ದಾಳಿ
- ಗುಜರಾತ್ನಲ್ಲಿ ಕಳೆದ ಎರಡು ವರ್ಷಗಳಲ್ಲಿ ಕನಿಷ್ಠ 307 ಏಷ್ಯಾಟಿಕ್ ಸಿಂಹಗಳ ಸಾವು
- ಬೆಂಗಳೂರಲ್ಲಿ ಸರಣಿ ಅಪಘಾತ : ಇಬ್ಬರ ಸಾವು