ಬೆಂಗಳೂರು,ಮಾ.17- ಗುತ್ತಿಗೆಯಲ್ಲಿ ಯಾವುದೇ ಧರ್ಮ ಆಧಾರಿತ ಗುತ್ತಿಗೆ ಇರುವುದಿಲ್ಲ. ಕರ್ನಾಟಕದಲ್ಲಿ ಮೊದಲ ಬಾರಿಗೆ ಮೀಸಲಾತಿ ತರುವ ಮೂಲಕ ಧರ್ಮಧರ್ಮಗಳ ಮಧ್ಯೆ ಒಡಕು ಉಂಟು ಮಾಡಲು ಕಾಂಗ್ರೆಸ್ ಪಕ್ಷದವರು ಮುಂದಾಗಿದೆ. ಮತಗಳಿಕೆಗಾಗಿ ನಾವು ಏನು ಬೇಕಾದರೂ ಮಾಡುತ್ತೇವೆ ಎಂಬ ಸರ್ವಾಧಿಕಾರಿಯ ಧೋರಣೆ ವಿರುದ್ಧ ನಮ್ಮ ಹೋರಾಟ ಅನಿವಾರ್ಯ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮತ್ತೆ ಮುಸ್ಲಿಮರ ಓಲೈಕೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ನಾವೆಲ್ಲ ದಲಿತರಿಗೆ ಹೆಚ್ಚು ಆದ್ಯತೆ ಕೊಡಬೇಕು. ಜೀವನಮಟ್ಟ ಹೆಚ್ಚಿಸಲು ಹೆಚ್ಚಿಸೋಕೆ ಮೀಸಲಾತಿ ನೀಡಬೇಕು ಎಂದು ಡಾ.ಅಂಬೇಡ್ಕರ್ ಸಂವಿಧಾನದಲ್ಲಿ ಉಲ್ಲೇಖ ಮಾಡಿದ್ದರು. ಅದರ ಪ್ರಕಾರ ದಲಿತರಿಗೆ ಸಂವಿಧಾನ ಹಕ್ಕನ್ನು ಕೊಟ್ಟಿದ್ದಾರೆ. ಆದರೆ, ಕಾಂಗ್ರೆಸ್ ನವರು ಮುಸ್ಲಿಮರು ತಮಗೆ ಮತ ಹಾಕುತ್ತಾರೆ ಎಂಬ ಕಾರಣಕ್ಕಾಗಿ ಮೀಸಲಾತಿ ತರಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಲಾಲಾಸೆಗೋಸ್ಕರ ಗುತ್ತಿಗೆಯಲ್ಲಿ ಶೇ. 4 ರಷ್ಟು ಗುತ್ತಿಗೆಯಲ್ಲಿ ಮೀಸಲಾತಿ ನೀಡಿ ಸಂವಿಧಾನ ಉಲ್ಲಂಘನೆ ಮಾಡಿದ್ದಾರೆ. ಸಂವಿಧಾನದಲ್ಲಿ ಯಾವುದೇ ರೀತಿಯ ಧರ್ಮಾಧಾರಿತ ಮೀಸಲಾತಿ ಇಲ್ಲ, ಹಲವಾರು ಸುಪ್ರೀಂಕೋರ್ಟ್ ತೀರ್ಮಾನಗಳು ಬಂದಿವೆ. ಇಷ್ಟಿದ್ದರೂ ಕೂಡಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೋಪಿ ಹಾಕಿದ್ದು ಆಯಿತು. ಟಿಪ್ಪು ಜಯಂತಿ ಮಾಡಿದ್ದೂ ಆಯಿತು, ಶಾದಿ ಭಾಗ್ಯ ಆಯಿತು ಎಂದು ಟೀಕಾ ಪ್ರಹಾರ ನಡೆಸಿದರು.
ಮುಲ್ಲಾಗಳಿಗೆ 10 ಸಾವಿರ ಕೋಟಿ ರೂ. ಕೊಡುತ್ತೇವೆ ಎಂದು ಹೇಳಿದ್ದರು. ಈಗ ಬಜೆಟ್‌ನಲ್ಲಿ ಎಲ್ಲ ರೀತಿಯ ಅನುದಾನಗಳನ್ನು ಕೊಟ್ಟಿದ್ದಾರೆ. ಅವರು ಏನ್ ಏನ್ ಕೇಳಿದ್ದರೋ ಅದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಅನುದಾನ ಕೊಟ್ಟಿದ್ದಾರೆ. ಈಗ ಗುತ್ತಿಗೆಯಲ್ಲೂ ಕೂಡಾ ಶೇ.4 ರಷ್ಟು ಮೀಸಲಾತಿ ಕೊಡುವುದರ ಮೂಲಕ ಹಿಂದೂಗಳಿಗೆ ಆಘಾತ ಕೊಟ್ಟಿದ್ದಾರೆ. ಗುತ್ತಿಗೆಯಲ್ಲಿ ಯಾವುದೇ ಧರ್ಮ ಆಧಾರಿತ ಗುತ್ತಿಗೆ ಇರುವುದಿಲ್ಲ ಎಂದು ಹೇಳಿದರು.
ಕರ್ನಾಟಕದಲ್ಲಿ ಮೊದಲ ಬಾರಿಗೆ ಗುತ್ತಿಗೆಯಲ್ಲಿ ಮೀಸಲಾತಿ ತರುವ ಮೂಲಕ ಧರ್ಮಧರ್ಮಗಳ ಮಧ್ಯೆ ಒಡಕು ಉಂಟು ಮಾಡುವುದು ಇವರ ಉದ್ದೇಶವಾಗಿದೆ. ಮತಗಳಿಕೆಗಾಗಿ ನಾವು ಏನು ಬೇಕಾದರೂ ಮಾಡುತ್ತೇವೆ. ನಾವು ಮುಸ್ಲಿಂ ಮತಗಳಿಂದಲೇ ಗೆದ್ದಿರುವುದು, ಹಿಂದುಗಳ ಮತಗಳಿಂದ ನಾವು ಗೆದ್ದಿಲ್ಲ ಎಂದು ಸಿದ್ದರಾಮಯ್ಯನವರು ಹೇಳಲಿ ಎಂದು ಆಶೋಕ್ ಅವರು ಸವಾಲು ಹಾಕಿದರು.
ಕಾಂಗ್ರೆಸ್ ಪಕ್ಷಕ್ಕೆ ನಿಜವಾದ ಹಿಂದೂಗಳು ಮತ ಹಾಕಿಲ್ಲ ಎಂಬ ಕಾರಣಕ್ಕಾಗಿ ಮುಸ್ಲಿಮರಿಗೆ ಎಲ್ಲ ಸೌಕರ್ಯ ಕೊಡಲು ಹೊರಟಿದ್ದಾರೆ. ಇದು ದುರದೃಷ್ಟಕರ. ಸರ್ಕಾರದ ಈ ತೀರ್ಮಾನದ ವಿರುದ್ದ ನಾವು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಹೈಕಮಾಂಡ್ ನಾಯಕರೂ ಕೂಡಾ ಇದು ಅಸಂವಿಧಾನಿಕ ಎಂದು ಹೇಳಿದ್ದಾರೆ. ಇದನ್ನು ನಾವು ಖಂಡಿಸುವುದಾಗಿ ಆಶೋಕ್ ಹೇಳಿದರು.