ಬೆಂಗಳೂರು,ಮಾ.7-ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಂದಾಜು 500 ಕೋಟಿ ವೆಚ್ಚದಲ್ಲಿ ಮುಂದಿನ ವರ್ಷ 150 ಎಕರೆ ಜಮೀನಿನಲ್ಲಿ ಚಿತ್ರನಗರಿಯನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಣೆ ಮಾಡಿದ್ದಾರೆ.
ವಿಧಾನಸೌಧದಲ್ಲಿ 2025-26ನೇ ಸಾಲಿನ ಬಜೆಟ್ ಮಂಡಿಸಿದ ಅವರು, ಅಂತಾರಾಷ್ಟ್ರೀಯ ದರ್ಜೆಯ ಚಿತ್ರನಗರಿಯನ್ನು ಪಿಪಿಪಿ ಮಾದರಿಯಲ್ಲಿ 500 ಕೋಟಿ ವೆಚ್ಚದಲ್ಲಿ ಚಿತ್ರನಗರಿಯನ್ನು ಮೈಸೂರಿನಲ್ಲಿ ಪ್ರಾರಂಭಿಸಲು 150 ಎಕರೆ ಜಮೀನು ಕಾಯ್ದಿರಿಸಲಾಗಿದೆ. ಮುಂದಿನ ವರ್ಷ ಕಾರ್ಯಾರಂಭ ಮಾಡಲಾಗುವುದು. ಇದಕ್ಕೆ ನಮ್ಮ ಸರ್ಕಾರವು ಬದ್ಧವಾಗಿದೆ ಎಂದು ಹೇಳಿದ್ದಾರೆ.
ರಾಜ್ಯದ ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುವ ಪ್ರತಿ ಪ್ರದರ್ಶನಕ್ಕೆ ಪ್ರವೇಶ ದರವನ್ನು 200 ರೂ.ಗೆ ಸೀಮಿತಗೊಳಿಸುವುದಾಗಿ ತಿಳಿಸಿದ್ದಾರೆ. ಸಿನಿಮಾ ಕ್ಷೇತ್ರವನ್ನು ಉದ್ಯಮವೆಂದು ಪರಿಗಣಿಸಿ ಕೈಗಾರಿಕಾ ನೀತಿಯಡಿ ಒದಗಿಸಲಾಗುವ ಸೌಲಭ್ಯವನ್ನು ಈ ಕ್ಷೇತ್ರಕ್ಕೂ ಒದಗಿಸಲಾಗುವುದು. ಬೆಂಗಳೂರಿನ ನಂದಿನಿಲೇಔಟ್‌ನಲ್ಲಿ ಚಲನಚಿತ್ರ ಅಕಾಡೆಮಿ ಹೊಂದಿರುವ 2.5 ಎಕರೆ ನಿವೇಶನದಲ್ಲಿ ಬಹುಪರದೆಗಳಿರುವ ಚಿತ್ರಮಂದಿರಗಳ ಸಮುಚ್ಚಯವನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.
ಸಾಮಾಜಿಕ, ಚಾರಿತ್ರಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬಿಂಬಿಸುವ ಕನ್ನಡ ಚಿತ್ರಗಳನ್ನು ಡಿಜಿಟಲ್ ಹಾಗೂ ನಾನ್‌ಡಿಜಿಟಲ್ ಮಾದರಿಯಲ್ಲಿ ಸಂರಕ್ಷಿಸಲು ಚಲನಚಿತ್ರ ಭಂಡಾರ ಸ್ಥಾಪನೆ ಮಾಡುವುದಾಗಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ. ಕನ್ನಡಚಿತ್ರಗಳ ಪ್ರೋತ್ಸಾಹಕ್ಕೆ ಒಟಿಟಿ ವೇದಿಕೆಯನ್ನು ಸೃಜಿಸಲು ಕ್ರಮ ಕೈಗೊಳ್ಳುವ ಆಶ್ವಾಸನೆಯನ್ನು ನೀಡಿದ್ದಾರೆ.