ಬೆಂಗಳೂರು,ಜು.15- ದಶಕಗಳ ಕಾಲ ಬಹುಭಾಷೆಗಳಲ್ಲಿ ನಟಿಸಿದ್ದ ಕನ್ನಡದ ಮೊಟ್ಟ ಮೊದಲ ಸೂಪರ್ ಸ್ಟಾರ್ ನಟಿ ಪ್ರತಿಷ್ಠಿತ ಪದಭೂಷಣ ಪ್ರಶಸ್ತಿ ಪುರಸ್ಕೃತೆ ಬಿ.ಸರೋಜಾದೇವಿ ಅವರು ಪಂಚಭೂತಗಳಲ್ಲಿ ಇಂದು ಲೀನವಾದರು. ಕುಟುಂಬ ಸದಸ್ಯರ ಆಕ್ರಂದನ, ಅಭಿಮಾನಿಗಳ ಭಾರ ಹೃದಯದ ನಡುವೆಯೇ ವಯೋಸಹಜತೆಯಿಂದ ನಿಧನರಾಗಿದ್ದ ಬಿ.ಸರೋಜಾದೇವಿ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಸ್ವಗ್ರಾಮ ದಶವಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಒಕ್ಕಲಿಗ ಸಂಪ್ರದಾಯದಂತೆ ನೆರವೇರಿಸಲಾಯಿತು. ಅವರ ಪುತ್ರ ಗೌತಮ್ ಅವರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು.
ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ದಕ್ಷಿಣ ಭಾರತದಲ್ಲೇ ಅತ್ಯಂತ ಪ್ರಬುದ್ಧ ನಟಿ ಎಂದೇ ಖ್ಯಾತಿಯಾಗಿದ್ದ ಸರೋಜಾದೇವಿ ಇನ್ನು ನೆನಪು ಮಾತ್ರ. ಸರೋಜದೇವಿಯವರ ಕೊನೆಯಾಸೆಯಂತೆ ಹುಟ್ಟೂರಿನಲ್ಲೇ ನನ್ನ ದೇಹ ಮಣ್ಣಾಗಬೇಕೆಂಬ ಇಚ್ಛೆಯಂತೆ ದಶವಾರದಲ್ಲಿರುವ ಅವರ ತೋಟದ ಮನೆಯಲ್ಲಿ ತಾಯಿ ರುದ್ರಮ ಅವರ ಸಮಾಧಿ ಪಕ್ಕದಲೇ ಅಂತ್ಯಕ್ರಿಯೆ ನಡೆಸಲಾಯಿತು. ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಸೇರಿದಂತೆ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಇದಕ್ಕೂ ಮುನ್ನ ಬೆಳಗ್ಗೆ ಮಲ್ಲೇಶ್ವರಂನಲ್ಲಿರುವ ಅವರ ನಿವಾಸದಲ್ಲಿ ಗಣ್ಯರು ಅಂತಿಮ ದರ್ಶನ ಪಡೆದುಕೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಚ್.ಸಿ.ಮಹದೇವಪ್ಪ, ಜಮೀರ್ ಅಹಮದ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಅಗಲಿದ ಅಭಿನಯ ಸರಸ್ವತಿಗೆ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿದರು. ನಂತರ ಮಲ್ಲೇಶ್ವರಂ ನಿವಾಸದಿಂದ ವಿಶೇಷ ವಾಹನದಲ್ಲಿ ಮೆರವಣಿಗೆ ಮೂಲಕ ಹುಟ್ಟೂರಿಗೆ ಕೊಂಡಯ್ಯಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಪಾರ್ಥೀವ ಶರೀರ ಬರುತ್ತಿದ್ದಂತೆ ಅಭಿಮಾನಿಗಳು ಅಂತಿಮ ವಿದಾಯ ಹೇಳಿದರು.
ವಾಹನವು ಬೆಂಗಳೂರಿನ ಮಲ್ಲೇಶ್ವರಂನಿಂದ ಹೊರಟು ಮೈಸೂರು-ಬೆಂಗಳೂರು ಎಕ್‌್ಸಪ್ರೆಸ್ ವೇನಲ್ಲಿ ಸಂಚರಿಸಿ ರಾಮನಗರ ತಲುಪಿದೆ. ನಂತರ ಅಲ್ಲಿಂದ ಚನ್ನಪಟ್ಟಣಕ್ಕೆ ಬಂದಾಗ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಲ್ಲಿನ ಸ್ಥಳೀಯರು ಮೇರುನಟಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು.
ನಂತರ ಹುಟ್ಟೂರು ದಶವಾರಕ್ಕೆ ಮಧ್ಯಾಹ್ನದ ವೇಳೆಗೆ ಆಗಮಿಸುತ್ತಿದ್ದಂತೆ ಗಾಂಧಿಭವನದಲ್ಲಿ ಒಂದು ಗಂಟೆ ಕಾಲ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಮೇರುನಟಿಗೆ ಪೊಲೀಸರು ಗಾಳಿಯಲ್ಲಿ ಮೂರು ಸುತ್ತಿನ ಕುಶಾಲು ತೋಪು ಸಿಡಿಸಿ ಅಂತಿಮ ನಮನ ಸಲ್ಲಿಸಿದರು.
ಸಾವಿನಲ್ಲೂ ಸಾರ್ಥಕತೆ ಮೆರೆದ ನಟಿ:
ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ.ಸರೋಜಾದೇವಿ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಮನುಷ್ಯನ ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖವಾದದ್ದು. ನೇತ್ರ ದಾನ ಮಾಡುವ ಮೂಲಕ ಅಂಧರಿಗೆ ದೃಷ್ಟಿ ನೀಡಿ ಅವರ ಬಾಳಿಗೆ ಬೆಳಕಾಗಿದ್ದಾರೆ. ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ನೇತ್ರದಾನ ಮಾಡಿದ್ದರು. ಅದರಂತೆ ವೈದ್ಯರ ತಂಡ ಮಲ್ಲೇಶ್ವರಂನಲ್ಲಿರುವ ಮನೆಗೆ ಆಗಮಿಸಿ ನೇತ್ರದಾನ ಪ್ರಕ್ರಿಯೆಯನ್ನ ಪೂರ್ಣಗೊಳಿಸಿದ್ದರು.
ವರನಟ ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಕೂಡ ನೇತ್ರದಾನ ಮಾಡಿದ್ದರು. ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಮರಣದ ನಂತರ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯದಲ್ಲಿ ಇಬ್ಬರು ಅಂಧರಿಗೆ ಅಳವಡಿಸಲಾಗಿದೆ. ಆ ಮೂಲಕ ಇಬ್ಬರ ಬಾಳಿಗೆ ಪುನೀತ್ ರಾಜ್‌ಕುಮಾರ್ ಬೆಳಕಾಗಿದ್ದಾರೆ. ಇದೀಗ ರಾಜ್‌ಕುಮಾರ್, ಪುನೀತ್ ಅವರ ಹಾದಿಯಾಗಿ ಸರೋಜಾದೇವಿ ಅವರೂ ನೇತ್ರದಾನ ಮಾಡಿದ್ದು, ಬದುಕಿನ ಪಯಣ ಮುಗಿಸಿದ್ದಾರೆ.
ಬಿ.ಸರೋಜಾ ದೇವಿ ಅವರು 1938 ಜನವರಿ 7ರಂದು ಜನಿಸಿದ್ದರು. 17ನೇ ವಯಸ್ಸಿನಲ್ಲಿ ಮಹಾಕವಿ ಕಾಳಿದಾಸ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಹಿರಿಯ ನಟಿ ಸರೋಜಾ ದೇವಿ ಅವರಿಗೆ ಹಲವು ಪ್ರಶಸ್ತಿಗಳು ಕೂಡ ಲಭಿಸಿತ್ತು. 1969ರಲ್ಲಿ ಪದಶ್ರೀ,1992 ರಲ್ಲಿ ಪದಭೂಷಣ ಪ್ರಶಸ್ತಿ ಲಭಿಸಿತ್ತು.
ವಯೋಸಜಹಜ ಕಾಯಿಲೆಯಿಂದ ಬಳಲುತ್ತಿದ್ದ ಬಿ.ಸರೋಜಾದೇವಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ತಮ ನಿವಾಸದಲ್ಲಿ ನಿನ್ನೆ ಬೆಳಗ್ಗೆ ಕೊನೆಯುಸಿರೆಳೆದಿದ್ದರು. ಸುಮಾರು 6 ದಶಕಗಳ ಕಾಲ ಚಿತ್ರರಂಗಕ್ಕೆ ಸೇವೆ ಸಲ್ಲಿಸಿರುವ ಸರೋಜಾದೇವಿ ಅವರು ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲೂ ನಟಿಸಿದ್ದರು. 5 ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.
ಸರೋಜಾದೇವಿ ಎಂದಾಕ್ಷಣ ಕಿತ್ತೂರು ಚೆನ್ನಮ, ಬಬ್ರುವಾಹನ, ಭಾಗ್ಯವಂತರು, ಅಣ್ಣತಂಗಿ ಮುಂತಾದ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ ಕಣ್ಣಮುಂದೆ ಬರುತ್ತದೆ. ಕನ್ನಡ ಚಿತ್ರರಂಗದ ಕಿತ್ತೂರು ರಾಣಿ ಚೆನ್ನಮ ಅಂತಲೇ ಎಲ್ಲರ ಮನದಲ್ಲಿ ಮನೆ ಮಾಡಿದ್ದ ಸರೋಜಾದೇವಿ ಅವರು ತಮ ನಿವಾಸದಲ್ಲಿ ಉಸಿರು ಚೆಲ್ಲಿದ್ದಾರೆ. ಹಿರಿಯ ನಟಿಯ ನಿಧನಕ್ಕೆ ಸಿನಿಮಾರಂಗದ ಗಣ್ಯರು, ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ,.
ಬಿ.ಸರೋಜಾದೇವಿ ಮೇರುನಟಿ : ಸಿಎಂ ಬಣ್ಣನೆ
ಬೆಂಗಳೂರು,ಜು.15- ಬಿ.ಸರೋಜಾ ದೇವಿ ಒಬ್ಬ ಮೇರು ನಟಿ. ಪಂಚಭಾಷಾ ತಾರೆಯಾಗಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದ ಅದ್ಭುತ ನಟಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮಲ್ಲೇಶ್ವರಂನ 11ನೇ ಅಡ್ಡರಸ್ತೆಯಲ್ಲಿರುವ ಮೃತರ ನಿವಾಸದಲ್ಲಿ ಪ್ರಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುಭಾಷಾ ನಟಿ ಬಿ.ಸರೋಜಾದೇವಿ ಅವರ ನಿಧನ ಇಡೀ ಚಿತ್ರರಂಗಕ್ಕೆ ದೊಡ್ಡ ಆಘಾತ ಉಂಟು ಮಾಡಿದೆ.
ಚಿಕ್ಕವಯಸ್ಸಿನಲ್ಲಿಯೇ ಸಿನಿಮಾರಂಗ ಪ್ರವೇಶಿಸಿ ಏಳು ದಶಕಗಳ ಕಾಲ ಕಲಾವಿದೆಯಾಗಿದ್ದವರು. ಅಭಿನಯ ಸರಸ್ವತಿ ಎಂಬ ಬಿರುದು ಚಿಕ್ಕವಯಸ್ಸಿಗೆ ದೊರೆತಿತ್ತು. ಎಲ್ಲಾ ಭಾಷೆಯ ಹೆಸರಾಂತ ನಟರೊಂದಿಗೆ ನಟಿಸಿದ್ದರು. ದಿಲೀಪ್‌ಕುಮಾರ್, ರಾಜೇಂದ್ರಕುಮಾರ್, ದೇವ್ ಆನಂದ್, ಎಂ.ಜಿ.ಆರ್, ಎನ್.ಟಿ.ಆರ್, ಶಿವಾಜಿ ಗಣೇಶನ್, ರಾಜ್‌ಕುಮಾರ್ ಅವರೊಂದಿಗೂ ಅನೇಕ ಚಿತ್ರಗಳಲ್ಲಿ ನಟಿಸಿದ್ದರು ಎಂದು ಸರಿಸಿದರು.
ಯಾವುದೇ ಪಾತ್ರಕ್ಕೂ ಜೀವ ತುಂಬುತ್ತಿದ್ದರು. ಶಿಸ್ತುಬದ್ಧ ಜೀವನ ನಡೆಸಿದವರು. ಕನ್ನಡ ಚಿತ್ರರಂಗ ಬೆಳೆಯಲು ಅಪಾರ ಕೊಡುಗೆ ಕೊಟ್ಟಿದ್ದಾರೆ. ಅವರ ಸಾವಿನಿಂದ ಚಿತ್ರರಂಗಕ್ಕೆ ಅಪಾರ ನಷ್ಟವಾಗಿದೆ. ಅವರ ಆತಕ್ಕೆ ಚಿರಶಾಂತಿ ದೊರಕಲಿ ಹಾಗೂ ದೇವರು ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಸರೋಜಾದೇವಿ ಅವರ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವದೊಂದಿಗೆ ಅವರ ಹುಟ್ಟೂರಿನಲ್ಲಿ ನಡೆಯುತ್ತದೆ ಎಂದು ಹೇಳಿದರು.
ದೊಡ್ಡ ವ್ಯಕ್ತಿತ್ವವಿದ್ದ ನಟಿ:
ಅನೇಕ ಬಾರಿ ಸರೋಜಾದೇವಿಯವರನ್ನು ಭೇಟಿ ಮಾಡಿದ್ದೇನೆ. ಎಲ್ಲರೊಂದಿಗೆ ಆತೀಯವಾಗಿ, ಪ್ರೀತಿಯಿಂದ ಮಾತನಾಡುತ್ತಿದ್ದರು. ಅವರ ಸಿನಿಮಾಗಳಲ್ಲಿ ಮಲ್ಲಮನ ಪವಾಡ, ಕಿತ್ತೂರು ಚೆನ್ನಮ, ಭಾಗ್ಯವಂತರು, ಬಬ್ರುವಾಹನ, ನ್ಯಾಯವೇ ದೇವರು ಸೇರಿದಂತೆ ಅನೇಕ ಚಿತ್ರಗಳನ್ನು ನೋಡಿರುವುದಾಗಿ ತಿಳಿಸಿದರು.ಸರೋಜಾದೇವಿಯವರ ಹೆಸರನ್ನು ಅವರು ವಾಸಿಸುತ್ತಿದ್ದ ರಸ್ತೆಗೆ ಇಡಬೇಕೆಂಬ ಆಸೆಯಿತ್ತು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಈ ಬಗ್ಗೆ ಬಿಬಿಎಂಪಿಯೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದರು.